ಬೆಂಗಳೂರು:
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖೈ ಇಳಿಕೆ ಕಾಣುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಕೋವಿಡ್-19 ತಾಂತ್ರಿಕ ಸಮಿತಿ, 2021ರ ಜನವರಿ-ಫೆಬ್ರವರಿಯಲ್ಲಿ ರಾಜ್ಯ ಎರಡನೇ ಸೋಂಕಿನ ಅಲೆ ಎದುರಿಸಲಿದೆ ಎಂಬ ವರದಿ ನೀಡಿದೆ.
ಈ ಕುರಿತು ಸರ್ಕಾರಕ್ಕೆ ಏಳು ಪುಟಗಳ ವರದಿ ಸಲ್ಲಿಸಿರುವ ಸಮಿತಿ, ಎರಡನೇ ಅಲೆಯನ್ನು ಗುರುತಿಸಲು ಮತ್ತು ನಿಯಂತ್ರಗಳು ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.
ಟಿಎಸಿ ಸದಸ್ಯ ಮತ್ತು ಕೋವಿಡ್-19 ರಾಜ್ಯ ನೋಡಲ್ ಅಧಿಕಾರಿ ಡಾ.ಸಿ.ಎನ್.ಮಂಜುನಾಥ್, ಅಮೆರಿಕ, ಯೂರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಎರಡನೇ ಅಲೆ ಕಾಣಿಸಿಕೊಂಡಿದ್ದು, ದೆಹಲಿಯಲ್ಲಿ ಕೂಡ ಅದೇ ಪುನರಾವರ್ತನೆಯಾಗಿದೆ. ಈ ಪ್ರವೃತ್ತಿಯನ್ನು ಗಮನಿಸಿದರೆ ಜನವರಿ ಮತ್ತು ಫೆಬ್ರವರಿಯಲ್ಲಿ ರಾಜ್ಯದಲ್ಲಿ ಕೂಡ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದಿದ್ದಾರೆ.
ಇನ್ನೋರ್ವ ಟಿಎಸಿ ಸದಸ್ಯ ಮತ್ತು ವೈದ್ಯ ಡಾ.ಗಿರಿಧರ್ ಬಾಬು ವರದಿ ಕುರಿತು ವಿವರಿಸಿದ್ದು, ಪ್ರತಿನಿತ್ಯ ಕನಿಷ್ಠ 1.25 ಲಕ್ಷ ಕೋವಿಡ್ ತಪಾಸಣೆ ನಡೆಸಬೇಕು ಮತ್ತು ಅದನ್ನು 2021ರ ಫೆಬ್ರವರಿಯವರೆಗೆ ಮುಂದುವರಿಸಬೇಕು. ಎಲ್ಲಾ ಶಿಕ್ಷಕರು, ಸಿಬ್ಬಂದಿ , ಅಂಗನವಾಡಿ ಸಿಬ್ಬಂದಿಯನ್ನು ಕೋವಿಡ್ ತಪಾಸಣೆಗೊಳಪಡಿಸಬೇಕು ಎಂದಿದ್ದಾರೆ.