Home ಅಪರಾಧ ಹಾಸನ ಜಿಲ್ಲೆಯ ಕೋವಿಡ್‌ ಪರಿಸ್ಥಿತಿ ಅವಲೋಕನ ಮಾಡಿದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ

ಹಾಸನ ಜಿಲ್ಲೆಯ ಕೋವಿಡ್‌ ಪರಿಸ್ಥಿತಿ ಅವಲೋಕನ ಮಾಡಿದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ

42
0

ವಿಪತ್ತು ನಿರ್ವಹಣಾ ನಿಧಿಯಿಂದ ಹಾಸನ ಜಿಲ್ಲೆಗೆ 10 ಕೋಟಿ ರೂ. ತಕ್ಷಣವೇ 50 ವೆಂಟಿಲೇಟರ್‌ ಔಷಧಿ, ಆಕ್ಸಿಜನ್‌ ಕೊರತೆ ಆಗದಂತೆ ಕ್ರಮ

ಹಾಸನ:

ಕೋವಿಡ್‌ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹಾಸನ ಜಿಲ್ಲೆಗೆ ತಕ್ಷಣವೇ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಪಿಆರ್‌ಎಫ್) ಸೋಮವಾರವೇ 10 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಕೋವಿಡ್‌ ಪರಿಸ್ಥಿತಿಗೆ ಸಂಬಂಧಿಸಿದಂತೆ ಶನಿವಾರ ಹಾಸನ ಜಿಲ್ಲಾಡಳಿತ, ಜನ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ; “ವಿಪತ್ತು ನಿಧಿಯಿಂದ ಎಲ್ಲ ಜಿಲ್ಲೆಗಳಿಗೆ 260 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಹಾಸನಕ್ಕೆ ಮೊದಲ ಹಂತದಲ್ಲೇ 10 ಕೋಟಿ‌ ರೂ. ಬಿಡುಗಡೆ ಮಾಡಲಾಗಿತ್ತು, ಈಗ ಎರಡನೇ ಹಂತದಲ್ಲಿ 10 ಕೋಟಿ ಕೊಡಲಾಗುವುದು” ಎಂದರು.

ಜಿಲ್ಲೆಯಲ್ಲಿ ಆಮ್ಲಜನಕ, ರೆಮಿಡಿಸಿವಿರ್‌, ಬ್ಲ್ಯಾಕ್‌ ಫಂಗಸ್‌ ಔಷಧಿ ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದ ಯಾವ ಔಷಧಿಯೂ ಕೊರತೆ ಆಗದಂತೆ ನೋಡಿಕೊಳ್ಳಲು ಅಗತ್ಯಬಿದ್ದರೆ ಇನ್ನಷ್ಟು ಹಣಕಾಸು ಸಂಪನ್ಮೂಲವನ್ನು ಸರಕಾರ ಒದಗಿಸಲಿದೆ. ಕೋವಿಡ್‌ ವೆಚ್ಚಕ್ಕೆ ನಿರ್ಬಂಧವಿಲ್ಲ, ಜಿಲ್ಲಾಡಳಿತಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಎಷ್ಟು ಔಷಧಿಗೆ ಬೇಡಿಕೆ ಇಟ್ಟರೂ ಕೊಡಲು ಸರಕಾರ ಸಿದ್ಧವಿದೆ. ಒಂದು ವಾರಕ್ಕಾಗುವಷ್ಟು ಹೆಚ್ಚುವರಿ ಸ್ಟಾಕ್‌ ಇಟ್ಟುಕೊಳ್ಳಲು ಸೂಚಿಸಲಾಗಿದೆ ಎಂದರು ಡಿಸಿಎಂ.

DCM Dr.CN Ashwatthanarayana reviews Covid19 situation in Hassan district1

ಕೂಡಲೇ 50 ವೆಂಟಿಲೇಟರ್‌:

ಜಿಲ್ಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆ ಇದೆ ಎಂಬ ಅಂಶವನ್ನು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸಭೆಯಿಂದಲೇ ನಾನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ ಮೊಬೈಲ್‌ ಕರೆ ಮಾಡಿ ಮಾತನಾಡಿದೆ, ತಕ್ಷಣವೇ 50 ವೆಂಟಿಲೇಟರ್‌ಗಳನ್ನು ಕಳಿಸಬೇಕು ಎಂದು ಸೂಚಿಸಿದ್ದೇನೆ. ಇದಕ್ಕೆ ಸ್ಪಂದಿಸಿದ ಅಖ್ತರ್‌ ಅವರು ಅಷ್ಟೂ ವೆಂಟಿಲೇಟರ್‌ಗಳನ್ನು ಇವತ್ತೇ ಹಾಸನಕ್ಕೆ ಕಳಿಸುವುದಾಗಿ ತಿಳಿಸಿದ್ದಾರೆ. ಒಂದೆರಡು ದಿನಗಳಲ್ಲಿ ಇಷ್ಟೂ ವೆಂಟಿಲೇಟರ್‌ಗಳು ಹಾಸನ ಮೆಡಿಕಲ್‌ ಕಾಲೇಜ್‌ಗೆ ತಲುಪಲಿವೆ ಎಂದು ಡಿಸಿಎಂ ತಿಳಿಸಿದರು.

ಇದರ ಜತೆಗೆ ಜಿಲ್ಲೆಯ ತಮ್ಮಲ್ಲಿರುವ ಕೋವಿಡ್‌ ಬೆಡ್‌ಗಳನ್ನು ʼಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್‌ʼ (sast) ಪೋರ್ಟಲ್ʼಗೆ ಲಿಂಕ್‌ ಮಾಡಿಲ್ಲ. ಇದು ಕೂಡಲೇ ಆಗಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಹೇಳಿದರು.

ವೈದ್ಯರ ಕಾಯಂ ನೇಮಕ:

ಹಾಸನವೂ ಸೇರಿ ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ಹೀಗಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರನ್ನು ಕಾಯಂ ಮಾಡುವುದು ಸೇರಿ 2,000ಕ್ಕೂ ಹೆಚ್ಚು ವೈದ್ಯರನ್ನು ನೇಮಕಾತಿ ಮಾಡಿಕೊಂಡು ಅವರ ಕಾರ್ಯಸ್ಥಳಕ್ಕೆ ನಿಯೋಜಿಸುವ ಕೆಲಸವನ್ನು ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಈ ಪ್ರಕ್ರಿಯೆ ಅಂತಿಮವಾಗಲಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಗ್ರಾಮೀಣ ಪ್ರದೇಶದ ಎಲ್ಲ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಟ್ರಾಯಾಜಿಂಗ್‌ ಹೆಚ್ಚಿಸಬೇಕು. ಆರ್‌ಟಿಪಿಸಿಆರ್‌ ಮತ್ತು ರಾಟ್‌ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಮನೆಮನೆಗೂ ಹೋಗಿ ಪರೀಕ್ಷೆ & ಸಮೀಕ್ಷೆ ನಡೆಸಿ ಸೋಂಕಿತರು ಪತ್ತೆಯಾದರೆ ಕೂಡಲೇ ಅವರನ್ನು ಕೇರ್‌ ಸೆಂಟರ್‌ಗಳಿಗೆ ಶಿಫ್ಟ್‌ ಮಾಡಬೇಕು. ಸೋಂಕಿತರು ಹೋಮ್‌ ಐಸೋಲೇಷನ್‌ ಆಗುವಂತಿಲ್ಲ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

ಬೆಳಗ್ಗೆಯಿಂದಲೇ ಹಾಸನ ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ಡಿಸಿಎಂ ಅವರು, ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಚನ್ನರಾಯಪಟ್ಟಣದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ವೈದ್ಯರ ಜತೆ ಸಮಾಲೋಚನೆ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕರಾದ ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ, ಪ್ರೀತಂ ಗೌಡ, ಬಾಲಕೃಷ್ಣ, ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಗಿರೀಶ್‌, ಎಸ್‌ಪಿ ಶ್ರೀನಿವಾಸ ಗೌಡ ಮುಂತಾದವರು ಡಿಸಿಎಂ ಜತೆಯಲ್ಲಿದ್ದರು.

ಮೆಡಿಕಲ್‌ ಕಾಲೇಜ್‌ ಡೀನ್‌ಗೆ ಡಿಸಿಎಂ ತರಾಟೆ

ವಾರಕ್ಕೊಮ್ಮೆ ಕೋವಿಡ್‌ ಸೋಂಕಿತರ ವಾರ್ಡ್‌ಗೆ ಕಾಟಾಚಾರಕ್ಕೆ ಭೇಟಿ ಕೊಟ್ಟು ನಿರ್ಲಕ್ಷ್ಯ ಧೋರಣೆ ತಾಳಿದ್ದ ಇಲ್ಲಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್‌ ಡಾ.ರವಿಕುಮಾರ್‌ಗೆ ಉಪ ಮುಖ್ಯಮಂತ್ರಿ  ಡಾ.ಸಿಎನ್.‌ ಅಶ್ವತ್ಥನಾರಾಯಣ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಹಾಸನದ ವೈದ್ಯಕೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂತು. ಇದರಿಂದ ಕೆಂಡಾಮಂಡಲರಾದ ಡಿಸಿಎಂ, “ನೀವೇ ವಾರಕ್ಕೊಮ್ಮೆ ವಾರ್ಡ್‌ಗೆ ಹೋದರೆ ಇನ್ನು ಇಡೀ ವ್ಯವಸ್ಥೆ ಕಥೆ ಏನು? ಸ್ವತಃ ಡೀನ್‌ ಹೀಗೆ ಮಾಡಿದರೆ ಇತರೆ ವೈದ್ಯರ ಪರಿಸ್ಥಿತಿ ಏನು? ಎಲ್ಲರಿಗಿಂತ ಮೊದಲೇ ವ್ಯಾಕ್ಸಿನ್‌ ತೆಗೆದುಕೊಂಡು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ನಿಮ್ಮಂಥವರೇ ಹೆದರಿಕೊಂಡು ಸೋಂಕಿತರ ಬಳಿಗೆ  ಹೋಗದಿದ್ದರೆ ಆ ಸೋಂಕಿಗೆ ತುತ್ತಾದವರ ಪಾಡೇನು? ಸೋಂಕಿತರಿಗೆ ಮನೋಧೈರ್ಯ ಬರುವುದು ಹೇಗೆ?” ಎಂದು ಖಾರವಾಗಿ ಪ್ರಶ್ನಿಸಿದರು.

ಇನ್ನು ಮುಂದೆ ಹೀಗೆ ಆಗುವಂತಿಲ್ಲ. ದಿನಕ್ಕೊಮ್ಮೆಯಾದರೂ, ಅಗತ್ಯಬಿದ್ದರೆ ಎರಡು ಸಲವಾದರೂ ಸೋಂಕಿತರ ವಾರ್ಡ್‌ಗೆ ಭೇಟಿ ನೀಡಲೇಬೇಕು. ಇಲ್ಲಿ ಏನೇ ಆದರೂ ನೀವೇ ಹೊಣೆಗಾರರು. ಮುಂದೆ ಇಂಥ ನಿರ್ಲಕ್ಷ್ಯ ಮರುಕಳಿಸಿದರೆ ಸುಮ್ಮನಿರುವುದಿಲ್ಲ ಎಂದು ಡಿಸಿಎಂ ಅವರು ಡೀನ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟರು.

LEAVE A REPLY

Please enter your comment!
Please enter your name here