ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಈ ದೀಪಾವಳಿಯಲ್ಲಿ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ ಎಂದು ಕರ್ನಾಟಕ ಪೊಲೀಸ್ ಇಲಾಖೆ ಸೋಮವಾರ ಹಬ್ಬಕ್ಕಾಗಿ 19 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿ ತಿಳಿಸಿದೆ.
ಮಾಲಿನ್ಯ ನಿಯಂತ್ರಣ, ಅಗ್ನಿ ಅವಘಡಗಳ ತಡೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿ ನೀಡಲಾಗಿದೆ. ಸಮಯದ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಿ ಪಟಾಕಿ ಸಿಡಿಸುವಂತಿಲ್ಲ
ಆಸ್ಪತ್ರೆಗಳು, ಪೆಟ್ರೋಲ್ ಬಂಕ್ಗಳು, ಗ್ಯಾಸ್ ಸ್ಟೇಷನ್ಗಳು, ಧಾರ್ಮಿಕ ಕೇಂದ್ರಗಳು, ವೃದ್ಧಾಶ್ರಮಗಳು ಮತ್ತು ಶಿಶುಪಾಲನಾ ಕೇಂದ್ರಗಳ ಸುತ್ತಮುತ್ತ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜನನಿಬಿಡ ಪ್ರದೇಶಗಳು, ರಸ್ತೆಗಳು ಹಾಗೂ ನಿಲ್ಲಿಸಿದ ವಾಹನಗಳ ಬಳಿ ಪಟಾಕಿ ಸಿಡಿಸಬಾರದು; ತೆರೆದ ಮೈದಾನಗಳು ಹಾಗೂ ಕಡಿಮೆ ಜನರಿರುವ ಸ್ಥಳಗಳನ್ನು ಬಳಸಬೇಕು.
ಯಾವ ಪಟಾಕಿ ಖರೀದಿಸಬೇಕು
ಅಧಿಕೃತ ಪರವಾನಗಿ ಹೊಂದಿರುವ ಅಂಗಡಿಗಳಿಂದ ಮಾತ್ರ ಗುಣಮಟ್ಟದ ಹಸಿರು ಪಟಾಕಿಗಳನ್ನು ಖರೀದಿಸಬೇಕು. ಪಟಾಕಿಯ ಅಸಲೀಯತೆ ಖಚಿತಪಡಿಸಿಕೊಳ್ಳಲು ಪ್ಯಾಕೆಟ್ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡುವುದು ಕಡ್ಡಾಯ ಎಂದು ಪೊಲೀಸರು ತಿಳಿಸಿದ್ದಾರೆ. ಅತಿಯಾದ ಶಬ್ದ ಮತ್ತು ವಾಯು ಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನು ನಿಷೇಧಿಸಲಾಗಿದೆ.
ಯಾವುದೇ ಅಕ್ರಮ ಮಾರಾಟ ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡಬೇಕು.
ಪಟಾಕಿ ಸಿಡಿಸುವಾಗ ಸುರಕ್ಷತೆ
ಮಾರ್ಗಸೂಚಿಯಲ್ಲಿ ನೀಡಿರುವ ಸಲಹೆಗಳು:
- ಸುರಕ್ಷಿತ ಕನ್ನಡಕ ಹಾಗೂ ಕೈಗವಸುಗಳನ್ನು ಧರಿಸಿ; ನೈಲಾನ್, ಸಿಂಥೆಟಿಕ್ ಅಥವಾ ಪಾಲಿಯೆಸ್ಟರ್ ಬದಲು ಹತ್ತಿ ಉಡುಪು ಧರಿಸಿ;
- ಪಟಾಕಿಯನ್ನು ಕೈಯಲ್ಲಿ ಹಿಡಿದು ಸಿಡಿಸಬೇಡಿ; ಮುಖ, ಕಣ್ಣು ಹಾಗೂ ಕಿವಿಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಿ;
- ಸ್ಥಳದಲ್ಲಿ ನೀರು, ಮರಳು, ಅಗ್ನಿಶಾಮಕ ಉಪಕರಣ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸಿದ್ಧವಾಗಿಡಿ;
- ಸಣ್ಣ ಮಕ್ಕಳು ಹಿರಿಯರ ಮೇಲ್ವಿಚಾರಣೆಯಿಲ್ಲದೆ ಪಟಾಕಿ ಸಿಡಿಸದಂತೆ ನೋಡಿಕೊಳ್ಳಿ;
- ಹಿರಿಯ ನಾಗರಿಕರು, ರೋಗಿಗಳು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಡಿಮೆ ಶಬ್ದದ ಹಸಿರು ಪಟಾಕಿ ಬಳಸಿ;
- ಪ್ರಾಣಿಗಳಿಗೆ ತೊಂದರೆ ಅಥವಾ ಹಾನಿಯಾಗದಂತೆ ಜಾಗ್ರತೆ ವಹಿಸಿ;
- ಸುಟ್ಟ ಉಳಿಕೆಗಳನ್ನು ಬಕೆಟ್ನಲ್ಲಿ ಸಂಗ್ರಹಿಸಿ ಮರಳು ಅಥವಾ ನೀರಿನಿಂದ ಸಂಪೂರ್ಣವಾಗಿ ಆರಿಸಿ; ಆಟದ ಮೈದಾನ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿ.
ತುರ್ತು ಸಂಖ್ಯೆಗಳು
ಅಗ್ನಿ ಅವಘಡ ಅಥವಾ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ 112 (ಪೊಲೀಸ್/ಅಗ್ನಿಶಾಮಕ) ಅಥವಾ 108 (ಆಂಬ್ಯುಲೆನ್ಸ್) ಸಂಖ್ಯೆಯನ್ನು ಸಂಪರ್ಕಿಸಿ ವೈದ್ಯಕೀಯ ನೆರವು ಪಡೆಯಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
