ಬೆಂಗಳೂರು: ಅತ್ತಿಗುಪ್ಪೆ ವಾರ್ಡ್ನಲ್ಲಿ ಅನಾಥವಾಗಿ ಹಾಗೂ ಅನಧಿಕೃತವಾಗಿ ರಸ್ತೆಬದಿ ನಿಲ್ಲಿಸಿರುವ ವಾಹನಗಳನ್ನು ಮೂರು ದಿನಗಳೊಳಗೆ ತೆರವುಗೊಳಿಸಬೇಕು ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸಿ.ಟಿ. ಅವರು ಸೋಮವಾರ ವಾರ್ಡ್ ಒನ್ ಅಭಿಯಾನದ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಬೆಳಿಗ್ಗೆ ವಿಜಯನಗರ ವಿಭಾಗದ ಅತ್ತಿಗುಪ್ಪೆ ವಾರ್ಡ್ (ಸಂಖ್ಯೆ 82) ಹಾಗೂ ಗೋವಿಂದರಾಜನಗರ ವಿಭಾಗದ ಡಾ. ರಾಜ್ಕುಮಾರ್ ವಾರ್ಡ್ (ಸಂಖ್ಯೆ 70) ಪರಿಶೀಲಿಸಿದರು.
ಅತ್ತಿಗುಪ್ಪೆ: ವಾಹನ, ಪೋಸ್ಟರ್, ಕಂಬಗಳು
ಅತ್ತಿಗುಪ್ಪೆಯಲ್ಲಿ ಅನಾಥ ಹಾಗೂ ನಿಲ್ಲಿಸಿದ ವಾಹನಗಳು ರಸ್ತೆಯ ಜಾಗ ಆಕ್ರಮಿಸಿ ಸಂಚಾರಕ್ಕೆ ಅಡ್ಡಿಯಾಗಿರುವುದನ್ನು ಗಮನಿಸಿದ ಆಯುಕ್ತರು, ಸಂಚಾರ ಪೊಲೀಸರ ಸಹಕಾರದೊಂದಿಗೆ ಅವುಗಳನ್ನು ತೆರವುಗೊಳಿಸಲು ಹಾಗೂ ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲ್ಲಿಸದಂತೆ ನೋಡಿಕೊಳ್ಳಲು ಸೂಚಿಸಿದರು.
ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ಕಂಬಗಳನ್ನು ಬೆಸ್ಕಾಂ ನೆರವಿನಿಂದ ತೆರವುಗೊಳಿಸಬೇಕು. ಶ್ರೀ ಸರ್ವಜ್ಞ ಕೆಳಸೇತುವೆಯ ಗೋಡೆಗಳ ಮೇಲಿನ ಪೋಸ್ಟರ್ಗಳನ್ನು ಗಮನಿಸಿದ ಅವರು, ಪೋಸ್ಟರ್ ಅಂಟಿಸುವುದನ್ನು ತಡೆಯಲು ಹಾಗೂ ಉಲ್ಲಂಘಿಸುವವರಿಗೆ ದಂಡ ವಿಧಿಸಲು ನಿರ್ದೇಶಿಸಿದರು.
ಘನತ್ಯಾಜ್ಯ ನಿರ್ವಹಣೆ ಹಾಗೂ ಮರಗಳ ಕಟಾವು ಸಮರ್ಪಕವಾಗಿ ನಡೆಯಬೇಕು, ಮೂಲದಲ್ಲೇ ತ್ಯಾಜ್ಯ ವಿಂಗಡಣೆಯಾಗಬೇಕು, ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಉದ್ಯಾನಗಳಲ್ಲಿ ಮಳೆನೀರು ಸಂಗ್ರಹಕ್ಕೆ ಕ್ರಮ ವಹಿಸಬೇಕು ಎಂದೂ ಅವರು ಹೇಳಿದರು.
ಡಾ. ರಾಜ್ಕುಮಾರ್ ವಾರ್ಡ್: ಬೀದಿದೀಪಗಳ ಮೇಲ್ವಿಚಾರಣೆ
ಡಾ. ರಾಜ್ಕುಮಾರ್ ವಾರ್ಡ್ನಲ್ಲಿ ಪಾದಚಾರಿ ಮಾರ್ಗದ ಅಡಚಣೆ ತೆರವು ಕಾರ್ಯ ವೀಕ್ಷಿಸಿದ ಆಯುಕ್ತರು, ಮೇಲ್ವಿಚಾರಣೆಗೆ ಅನುಕೂಲವಾಗುವಂತೆ ಎಲ್ಇಡಿ ಬೀದಿದೀಪಗಳ ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆಯ (ಸಿಸಿಎಂಎಸ್) ಮೊಬೈಲ್ ಆಪ್ ಆಕ್ಸೆಸ್ ಅಧಿಕಾರಿಗಳಿಗೆ ಒದಗಿಸಬೇಕು ಎಂದು ಸೂಚಿಸಿದರು.
ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ವಾರ್ಡ್ಗಳ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಎರಡೂ ವಿಭಾಗಗಳಿಗೆ ನಿರ್ದೇಶಿಸಲಾಯಿತು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಆದೇಶದಂತೆ ವಾರ್ಡ್ ಒನ್ ಅಭಿಯಾನ ನಡೆಯುತ್ತಿದೆ. ಅಪರ ಆಯುಕ್ತೆ (ಅಭಿವೃದ್ಧಿ) ಕವಿತಾ ರಾಜಾರಾಂ ಹಾಗೂ ಮುಖ್ಯ ಅಭಿಯಂತರ ಜಯಶಂಕರ್ ಬಿ.ಎಸ್. ಹಾಜರಿದ್ದರು.
