ಬೆಂಗಳೂರು:
ರಾಜ್ಯದಲ್ಲಿ ಲಿಂಗಾಯಿತ ಸಮುದಾಯಕ್ಕೆ ಶೇ 16 ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಹಿರಿಯ ಜೆಡಿಎಸ್ ಮುಖಂಡ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಲಿಂಗಾಯತರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದು, ಈ ಕುರಿತು ಹಲವಾರು ಬಾರಿ ಲಿಂಗಾಯಿತ ಸಮುದಾಯ ತಮಗೆ ಮನವಿ ಸಲ್ಲಿಸಿದೆ. ಮಹಾರಾಷ್ಟ್ರದಲ್ಲಿ ಮರಾಠಾ ಸಮಾಜಕ್ಕೆ ಶೇಕಡ ೧೬ ರಷ್ಟು ಮೀಸಲಾತಿ ನೀಡಿದ್ದು, ಇದರ ಪರಿಣಾಮ ಆ ಸಮಾಜ ಎಲ್ಲ ಅನುಕೂಲತೆಗಳನ್ನು ಪಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, ರಾಜ್ಯದಲ್ಲಿ ಹಿಂದೂ ಮರಾಠಾ ಸಮಾಜಕ್ಕೆ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಸಮಸ್ತ ಲಿಂಗಾಯತರ ವೇದಿಕೆ ಇದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಆದರೆ ಲಿಂಗಾಯಿತರಿಗೆ ಮೀಸಲಾತಿ ಕಲ್ಪಿಸುವುದು ಈಗಿನ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ನೀವು ಮುಖ್ಯಮಂತ್ರಿಯಾದ ನಂತರ ಬಹಳಷ್ಟು ಜನ ಲಿಂಗಾಯತರಿಗೆ ಶೇಕಡ ೧೬ ಮೀಸಲಾತಿ ದೊರೆಯುತ್ತದೆಂಬ ನಿರೀಕ್ಷೆಯಲ್ಲಿದ್ದರು. ಈಗ ಅವರೆಲ್ಲರಿಗೂ ನಿರಾಸೆಯಾಗಿದೆ. ಬೇರೆ ಬೇರೆ ಸಮುದಾಯದವರು ತಮಗೆ ಹೆಚ್ಚು ಹೆಚ್ಚು ಮೀಸಲಾತಿ ಕೊಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟ ನ್ಯಾಯಯುತವಾಗಿದೆ. ಜ್ಯಾತ್ಯಾತೀತ ರಾಷ್ಟ್ರವಾದರೂ ಜ್ಯಾತ್ಯಾತೀತ ಮನೋಭಾವನೆ ಹೊಂದಿದ ಕರ್ನಾಟಕದಲ್ಲಿಯೂ ಎಲ್ಲವೂ ಜಾತಿಯ ಆಧಾರದಲ್ಲಿಯೇ ನಡೆಯುತ್ತಿದೆ. ತಮಿಳುನಾಡು ಮತ್ತು ಹರಿಯಾನಾ ಮೊದಲಾದ ಬೇರೆ ಬೇರೆ ರಾಜ್ಯಗಳಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿದ್ದಾರೆ.
ಲಿಂಗಾಯತರಲ್ಲಿಯೂ ಶೇಕಡ 7೦ ರಷ್ಟು ಬಡವರು, ಕೂಲಿಕಾರರು ಇದ್ದಾರೆ. ಲಿಂಗಾಯತ ಸಮಾಜ ಕೃಷಿಯ ಮೇಲೆ ಬದುಕಿದೆ. ಭೂಮಿ ತಾಯಿ ಒಡಲಲ್ಲೇ ಬದುಕಿನ ತುತ್ತಿನ ಚೀಲ ತುಂಬಿಕೊಳ್ಳುತ್ತಿದ್ದಾರೆ. ಪ್ರಕೃತಿಯ ವಿಕೋಪದಿಂದ ಇವರ ಜೀವನ ಹೆಚ್ಚು ಕಡಿಮೆಯಾಗಿದ್ದರಿಂದ ಸದಾ ಕಷ್ಟವನ್ನೇ ಅನುಭವಿಸುತ್ತಿರುವ ಈ ಸಮಾಜಕ್ಕೆ ಮೀಸಲಾತಿ ಕೊಡುವುದು ನ್ಯಾಯಯುತವಾದದ್ದು. ಎಲ್ಲರೂ ಅಧಿಕಾರವಿದ್ದಾಗ ತಮ್ಮ ತಮ್ಮ ಸಮುದಾಯ, ಸಮಾಜದ ಬಗ್ಗೆ ಕಾಳಜಿಯನ್ನು ವಹಿಸುತ್ತಾರೆ. ಅವರಂತೆ ನೀವೇಕೆ ಕಾಳಜಿ ವಹಿಸಬಾರದು? ಮೇಲಿನ ಎಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ತಕ್ಷಣ ಶೇಕಡ ೧೬ ರಷ್ಟು ಮೀಸಲಾತಿಯನ್ನು ಲಿಂಗಾಯತ ಸಮುದಾಯಕ್ಕೆ ಕಲ್ಪಿಸುತ್ತೀರೆಂದು ನಂಬಿದ್ದೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.