ಬೆಂಗಳೂರು:
ವಿಧಾನಪರಿಷತ್ ಕಲಾಪದಲ್ಲಿ ನಡೆದ ಜಟಾಪಟಿಗೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಸಭಾಪತಿಗಳ ಕುತ್ತಿಗೆ ಹಿಡಿದು ಎಳೆದಾಡಿದದ್ದು ದೇಶದ ಇತಿಹಾದಲ್ಲಿ ಇದೇ ಮೊದಲು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ನವರ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವಕ್ಕೆ ಚ್ಯುತಿಯಾಗಿದೆ ಎಂದು ಆರೋಪಿಸಿದರು.
ಹಾಲಿ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಜೆಡಿಎಸ್ ಬಹಿರಂಗವಾಗಿ ಬೆಂಬಲಿಸಿದೆ. ಬೆಂಬಲ ಇಲ್ಲದ, ಬಹುಮತ ಇಲ್ಲದ ಮೇಲೆ ಸಭಾಪತಿ ಅವರು ಪೀಠದ ಮೇಲೆ ಕೂರುವುದು ಶೋಭೆ ತರುವುದಿಲ್ಲ. ಕಾಂಗ್ರೆಸ್ ನವರು ಸಭಾಪತಿ ಪ್ರತಾಪ್ ಚಂದ್ರಶೇಟ್ಟಿ ಅವರಿಂದ ರಾಜೀನಾಮೆ ಕೊಡಿಸಬೇಕಿತ್ತು ಎಂದರು.
ಸದನವನ್ನು ಸಂಸದೀಯ ಸಂಪ್ರದಾಯ ಮತ್ತು ಕಾನೂನಿನ ಚೌಕಟ್ಟಿನ ಪ್ರಕಾರವೇ ಕರೆಯಲಾಗಿದೆ. ಒಂದು ಬಾರಿ ನಿಮ್ಮ ಮೇಲೆ ಅವಿಶ್ವಾಸ ನಿರ್ಣಯ ಮಣಡನೆಯಾದ ನಂತರ ನಿಮಗೆ ಆ ಕುರ್ಚಿಯಲ್ಲಿ ಕೂರಲು ಅರ್ಹತೆಯಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಈ ವಿಷಯ ಇಡೀ ಜಗತ್ತಿಗೆ ಗೊತ್ತಿದೆ. ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ಅನೇಕ ತೀರ್ಪುಗಳು ಬಂದಿವೆ. ಉಪಸಭಾಪತಿ ಅವರನ್ನು ಸದನದ ಪೀಠದಲ್ಲಿ ಕೂರಿಸುವುದಾಗಿ ಸೋಮವಾರವೇ ಹೇಳಿದ್ದೇವೆ. ಅವಿಶ್ವಾಸ ನಿರ್ಣಯ ಮಂಡನೆ ಆದ ನಂತರ ಉಪಸಭಾಪತಿಗಳೇ ಮುಂದುವರೆಯುತ್ತಾರೆ. ಇದು ಇಲ್ಲಿಯವರೆಗೆ ನಡೆದುಕೊಂಡಿರುವ ಬಂದಿರುವ ಸಂಪ್ರದಾಯವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನಡಾವಳಿಕೆ ಸರಿಯಲ್ಲ. ಈ ಬೆಳವಣಿಗೆಯನ್ನು ರಾಜ್ಯಪಾಲರ ಗಮನಕ್ಕೆ ತರುತ್ತೇವೆ. ಜೆಡಿಎಸ್ ನವರು ಸಹ ರಾಜ್ಯಪಾಲರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಲಿದ್ದಾರೆ ಎಂದರು. UNI