ಬೆಂಗಳೂರು:
ಅವಿಶ್ವಾಸ ನಿರ್ಣಯಕ್ಕೆ ಬೆಂಬಲಿಸಿ ಜೆಡಿಎಸ್ ಸದಸ್ಯರು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್ ಮಹಾಲಕ್ಷ್ನಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕಲಾಪ ಮುಂದೂಡಿದ ಬಳಿಕ ಬೆಂಬಲ ಪತ್ರ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಜೆಡಿಎಸ್ ಕೂಡ ಈ ವಿಚಾರದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ.
ಜೆಡಿಎಸ್ ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ಇಂದು ಪರಿಷತ್ ಕಾರ್ಯದರ್ಶಿ ಅವರ ಕೊಠಡಿಗೆ ತೆರಳಿ ಬಿಜೆಪಿ ಅವರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಇರುವ ಲಿಖಿತ ಪತ್ರ ನೀಡಿದರು. ಈ ಸಂದರ್ಭದಲ್ಲಿ ಪರಿಷತ್ ನ ಜೆಡಿಎಸ್ ಸದಸ್ಯರಾದ ತಿಪ್ಪೇಸ್ವಾಮಿ, ಅಪ್ಪಾಜಿಗೌಡ, ಮನೋಹರ ಸೇರಿದಂತೆ ಹಲವು ಸದಸ್ಯರು ಹಾಜರಿದ್ದರು.
ಸುದ್ದಿಗಾರರ ಜೊತೆ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ಅವಿಶ್ವಾಸ ನಿರ್ಣಯ ಬೆಂಬಲಿಸಿ ಪರಿಷತ್ ಕಾರ್ಯದರ್ಶಿ ಅವರಿಗೆ ಪತ್ರ ನೀಡಲಾಗಿದೆ. ಸಭಾಪತಿಗಳಿಗೆ ಬಹುಮತ ಇಲ್ಲ ಅವರು ರಾಜೀನಾಮೆ ಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಸಭಾಪತಿ ಅವರು ರಾಜೀನಾಮೆ ಕೊಡಲಿಲ್ಲ ಅಂದರೆ ಕಾನೂನು ಇದೆ. ನೋಡೊಣ ಎಂದ ಅವರು, ಸಭಾಪತಿ ಸ್ಥಾನದಲ್ಲಿ ಇರಲು ಅವರಿಗೆ ನೈತಿಕತೆ ಇಲ್ಲ. ಮುಂದೆ ಏನು ಮಾಡಬೇಕೆಂದು ಸರ್ಕಾರವೇ ತೀರ್ಮಾನ ಮಾಡಲಿದೆ ಎಂದರು.
ಸಭಾಪತಿಗಳು ಸರ್ಕಾರದ ನಿರ್ದೇಶನದಂತೆ ಸಭೆ ಕರೆದಿದ್ದೇವೆ ಅಂತ ಹೇಳಿದ್ದರು. ಈಗ ಕಾರ್ಯದರ್ಶಿ ಹೇಳಿದಂತೆ ಸಭೆ ಕರೆದಿದ್ದಾರೆ. ಇದು ನ್ಯಾಯ ಸಮ್ಮತವಲ್ಲ. ಅದಕ್ಕೆ ಉಪಸಭಾಪತಿ ಗಳನ್ನು ಚೇರ್ ನಲ್ಲಿ ಕೂರಿಸಿದ್ದೆವು. ಈಗ 14 ಜೆಡಿಎಸ್ ಸದಸ್ಯರು ಸಹಿ ಹಾಕಿದ್ದೇವೆ. ಅನಿರ್ದಿಷ್ಟಾವದಿಗೆ ಸದನ ಮುಂದೂಡಿರಬಹುದು. ಈಗ ಅವರು ನೈತಿಕವಾಗಿ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿಗೆ ವಿಷಯಾಧಾರಿತ ಬೆಂಬಲ, ಸಭಾಪತಿ ಸ್ಥಾನಕ್ಕಾಗಿ ಅಲ್ಲ: ಹೊರಟ್ಟಿ
ವಿಧಾನಪರಿಷತ್ತಿನಲ್ಲಿ ನಡೆಯುತ್ತಿರುವ ವಿಷಯದಲ್ಲಿ ವಿಷಯಾಧಾರಿತವಾಗಿ ಬೆಂಬಲ ನೀಡಬೇಕಾಗುತ್ತದೆ, ಹಾಗಾಗಿ, ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ನೀಡಿದ್ದೇವೆ ಎಂದು ವಿಧಾನಪರಿಷತ್ ನ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದನದ ಹೊರಗಿನ ವಿಚಾರ ಬೇರೆ, ಸದನದ ಒಳಗಿನ ವಿಚಾರ ಬೇರೆ. ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಒಪ್ಪಿದ್ದಾರೊ ಇಲ್ಲವೊ ಗೊತ್ತಿಲ್ಲ ಎಂದು ಹೇಳಿದರು.
ಸಭಾಪತಿಯಾದವರು ಸಂವಿಧಾನ ರೀತಿ ನಡೆದುಕೊಳ್ಳಬೇಕು. ಬಿಜೆಪಿಯವರು ಕೊಟ್ಟ ಪತ್ರ ಸರಿಯಿಲ್ಲ ಎಂದು ಹೇಳಬಾರದು. ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಮೇಲೆ ಅದರ ಮೇಲೆ ಚರ್ಚೆ ಮಾಡಿ ಇತಿಶ್ರೀ ಹಾಡಬೇಕು. ಸಭಾಪತಿಗಳು ತಮ್ಮ ಮನಸ್ಸಿಗೆ ಬಂದಹಾಗೆ ಸದನ ನಡೆಸಬಾರದು. ಹೀಗಾಗಿ ಬಿಜೆಪಿ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿದ್ದೇವೆ. ಕಲಾಪಪಟ್ಟಿಯಲ್ಲಿ ಅವಕಾಶ ನೀಡಿಲ್ಲ, ಅದನ್ನು ಇರಬೇಕಾಗುತ್ತದೆ ಎಂದರು.
ಇವತ್ತು ಪರಿಷತ್ ಕಲಾಪ ಕರೆದಿದ್ದೇ ತಪ್ಪು. ಸದನದ ನಿಯಮದ ಪ್ರಕಾರ ಕರೆಯುವಂತಿಲ್ಲ. ಸರ್ಕಾರ ಹೇಳಿದಂತೆ ಕಾರ್ಯದರ್ಶಿ ಕೇಳಿದ್ದು ತಪ್ಪು. ಸಂಪುಟದಲ್ಲಿ ಸರ್ಕಾರ ಸಭೆಯನ್ನು ತೀರ್ಮಾನಿಸುತ್ತದೆ. ಸಭೆ ಕರೆದ ಮೇಲೆ ಅದು ಸಭಾಪತಿಗಳಿಗೆ ಸೇರುತ್ತದೆ. ಬಿಎಸಿ ಸಭೆಯಲ್ಲೂ ತೀರ್ಮಾನವಾಗಿದೆ. ಸಭಾಪತಿಗಳು ಕಲಾಪ ಕರೆದಿದ್ದು ತಪ್ಪು ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. UNI