Home Uncategorized Dhanurmasa 2022: ಧನುರ್ಮಾಸ ಎಲ್ಲಕ್ಕಿಂತ ಶ್ರೇಷ್ಠ ಮಾಸ ಏಕೆ? ತಿರುಮಲ ವೆಂಕಟೇಶ್ವರನಿಗೂ ಈ ಮಾಸಕ್ಕೂ ಇರುವ...

Dhanurmasa 2022: ಧನುರ್ಮಾಸ ಎಲ್ಲಕ್ಕಿಂತ ಶ್ರೇಷ್ಠ ಮಾಸ ಏಕೆ? ತಿರುಮಲ ವೆಂಕಟೇಶ್ವರನಿಗೂ ಈ ಮಾಸಕ್ಕೂ ಇರುವ ಸಂಬಂಧವೇನು?

25
0

ಈ ಧನುರ್ಮಾಸದ(Dhanurmasa) ತಿಂಗಳಿನಲ್ಲಿ ಎಲ್ಲಾ ದೈವಗಳು ತಮ್ಮ ಆರಾಧ್ಯ ದೇವನಿಗೆ ಸ್ವತ: ತಾವೇ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡುವ ಶ್ರೇಷ್ಠವಾದ ಮಾಸ. ಸೂರ್ಯದೇವನು ಧನುರಾಶಿಯಿಂದ ಮಕರ ರಾಶಿಗೆ ಸ್ಥಳಾಂತರವಾಗುವ 30 ದಿನಗಳ ಅವಧಿಯನ್ನು ಧನುರ್ಮಾಸ ಎಂದು ಪರಿಗಣಿಸಲಾಗುತ್ತದೆ. ಇದನ್ನು ಕರ್ಮಮಾಸ ಎಂದೂ ಹೇಳುವುದುಂಟು. ಧನುರ್ಮಾಸ ದೇವತಾರಾಧನೆಗೆ ಮೀಸಲಾದ ತಿಂಗಳು. ವಿಶೇಷವಾಗಿ ಭಗವಾನ್‌ ವಿಷ್ಣುವನ್ನು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಗುತ್ತದೆ. ಸೂರ್ಯನ ಚಲನೆಗೆ ಅನುಗುಣವಾಗಿ ಈ ಮಾಸ ಡಿಸೆಂಬರ್‌ 16ಕ್ಕೆ ಶುರುವಾಗಿ ಜನವರಿ 14ಕ್ಕೆ ಕೊನೆಯಾಗುತ್ತದೆ. ಹಿಂದು ಪಂಚಾಂಗದ 12 ಮಾಸಗಳಲ್ಲಿ ಮಾರ್ಗಶಿರ ಮಾಸ ದೇವತಾರಾಧನೆಗೆ ಅತ್ಯಂತ ಶ್ರೇಷ್ಠವಾದುದು ಎಂದು ಪರಿಗಣಿಸಲ್ಪಟ್ಟಿದೆ. ಚಾಂದ್ರಮಾನ ಮಾಸಗಳ ಪೈಕಿ ಮಾರ್ಗಶಿರ ಮಾಸ ಎಂದರೆ ಸೌರಮಾನ ಕಾಲಗಣನೆಯ ಪ್ರಕಾರ, ಧನುರ್ಮಾಸ ಎಂದು ಕರೆಯಲ್ಪಡುವ ಈ 9ನೇ ತಿಂಗಳು. ಆದ್ದರಿಂದಲೇ ಈ ತಿಂಗಳಲ್ಲಿ ಮಹಾವಿಷ್ಣುವಿನ ಆರಾಧನೆಗೆ ಹೆಚ್ಚಿನ ಪ್ರಾಶಸ್ತ್ಯ.

ಡಿಸೆಂಬರ್- ಜನವರಿ ತಿಂಗಳುಗಳು ಹತ್ತಿರ ಬರುತ್ತಿದ್ದಂತೆ ಚಳಿಯ ಪ್ರಭಾವ ಹೆಚ್ಚಾಗುತ್ತದೆ. ಅದನ್ನು ತಡೆದುಕೊಳ್ಳಲು ಉಣ್ಣೆಯ ವಸ್ತ್ರ ಧರಿಸಲು, ಬೆಚ್ಚಗಿರಲು ಎಲ್ಲರೂ ಇಷ್ಟಪಡುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ಇದೇ ಸಮಯದಲ್ಲಿ ಧನುರ್ಮಾಸದ ಆಚರಣೆ ಕಂಡು ಬರುತ್ತದೆ. ಪ್ರಾತಃಕಾಲದಲ್ಲಿ ಬೇಗನೇ ಎದ್ದು ದೇವರ ಪ್ರಾರ್ಥನೆ, ಪೂಜೆಗಳನ್ನು ಪೂರೈಸಿ ಭೋಜನವನ್ನು ಮುಗಿಸುವುದು ಕಾಣುತ್ತೇವೆ. ಇದರ ಹಿನ್ನೆಲೆಯೇನು? ಈ ವಿಷಯದಲ್ಲಿ ಸ್ವಲ್ಪ ಅರಿಯುವ ಪ್ರಯತ್ನ ನಡೆಸೋಣ.

ಬಹಳ ಜನರು ಮಾಸ, ದಿನ, ಗಳಿಗೆಯನ್ನು ಲೆಕ್ಕಿಸದೆ ತಮಗೆ ಬೇಕಾದ ಸಮಯದಲ್ಲಿ ಎಲ್ಲಾ ಕೆಲಸಗಳನ್ನೂ ಪ್ರಾರಂಭಿಸುತ್ತಾರೆ. ಇನ್ನು ಕೆಲವರು ಅರ್ಧ ಆ ಕಡೆ, ಇನ್ನರ್ಧ ಈ ಕಡೆ ಇರ್ತಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲವನ್ನೂ ಅನುಸರಿಸುತ್ತಾರೆ. ಮತ್ತೆ ಕೆಲವರು ತಮ್ಮ ಮನೆಯ ಪುರೋಹಿತರು ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಅವರು ರಾಹುಕಾಲ, ಯಮಗಂಡಕಾಲದಲ್ಲಿ ಕೆಲಸ ಪ್ರಾರಂಭಿಸುವುದಿಲ್ಲ. ವಾಸ್ತುಪ್ರಕಾರ ಸರಿಯಾದ ದಿಕ್ಕಿನಲ್ಲೇ ನಿಂತು/ಕುಳಿತು ಕೆಲಸ ಶುರು ಮಾಡುತ್ತಾರೆ. ಧನುರ್ ಮಾಸವನ್ನು ಶೂನ್ಯ ಮಾಸವೆಂದು ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ಧನುರ್ಮಾಸ ಎಲ್ಲಾ ಕೆಲಸಕ್ಕೂ ಬಹಳ ಶ್ರೇಷ್ಠವಾದ ಮಾಸ. ಧನುರ್ಮಾಸವನ್ನು ಮಾರ್ಗಶಿರ್ಷ ಮಾಸವೆಂದು ಸಹ ಕರೆಯುತ್ತಾರೆ. ಈ ತಿಂಗಳನ್ನು ಧನುರ್ ರಾಶಿ ಆವರಿಸಿಕೊಂಡಿರುವುದರಿಂದ ಇದಕ್ಕೆ ಧನುರ್ ಮಾಸವೆಂದು ಹೆಸರಿಸಲಾಗಿದೆ.

ಶ್ರೀ ಕೃಷ್ಣನಿಗೆ ಪ್ರಿಯವಾದ ಮಾಸ

ಕೃಷ್ಣನ ಪರಮಭಕ್ತರಿಗೆ ಇದು ತುಂಬಾ ಪ್ರಿಯವಾದ ಮಾಸ, ಏಕೆಂದರೆ ಕೃಷ್ಣ ತಿರುಮಲದಲ್ಲಿ ನೆಲೆಸಿರುವ ಶ್ರೀನಿವಾಸ/ವೆಂಕಟೇಶನ ರೂಪದಲ್ಲಿ ಭೂಲೋಕದಲ್ಲಿ ನೆಲೆಸಿದಾಗ ಭೂದೇವಿ ಅಂಡಾಲ್ ಒಬ್ಬ ಸಾಮಾನ್ಯ ಹುಡುಗಿಯಾಗಿ, ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶನಿಗಾಗಿ ಹೂಮಾಲೆ ಮಾಡಿ ಮೊದಲು ಆ ಮಾಲೆಯನ್ನು ತಾನೇ ಧರಿಸಿಕೊಂಡು ನೋಡಿ, ಅದು ಚೆನ್ನಾಗಿ ಕಾಣಿಸುತ್ತದೆ ಎಂದ ಮೇಲೆ ಅದನ್ನು ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು. ಇದೇ ಮಾರ್ಗಶೀರ ಮಾಸದಲ್ಲಿ ತನ್ನ ಪ್ರಿಯತಮನಾದ ವೆಂಕಟೇಶನಿಗಾಗಿ ತಮಿಳಿನಲ್ಲಿ ತಿರುಪ್ಪಾವೈ ಮೂವತ್ತು ಕವಿತೆಗಳು ಎಂಬ ಪ್ರೀತಿ ಗ್ರಂಥವನ್ನು ರಚಿಸಿದಳು. ಇವತ್ತಿಗೂ ಶ್ರೀವೈಷ್ಣವರು ನಾಲಾಯಿರಂ ತಿರುಪ್ಪಾವೈ ಕೃತಿಗಳೇ ವೆಂಕಟೇಶನಿಗೆ ಪ್ರಿಯವಾದದ್ದೆಂದು ಪಠಿಸುತ್ತಾರೆ.

ವೆಂಕಟೇಶನ ಯಾವುದೇ ದೇವಸ್ಥಾನಕ್ಕೆ ಹೋದರೂ, ತಿರುಮಲ ದೇವಸ್ಥಾನದಲ್ಲೂ ಅಂಡಾಳ್ ರಚಿಸಿರುವ ಪ್ರೀತಿಯ ಪ್ರಬಂಧವನ್ನು ಹೇಳಿಯೇ ದೇವರನ್ನು ಎಬ್ಬಿಸುವುದು. ಹಾಗೇ ಅಂಡಾಳ್ ವೆಂಕಟೇಶನಿಗಾಗಿ ರಚಿಸಿರುವ ಲಾಲಿ ಹಾಡು ಹಾಡಿಯೇ ಅವನನ್ನು ಮಲಗಿಸುವುದು. ಪರಮಾತ್ಮನನ್ನು ಪ್ರೀತಿಸಲು ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ಭೂದೇವಿ ಅಂಡಾಳ್ ರೂಪದಲ್ಲಿ ಪ್ರತಿದಿನ ದೇವಸ್ಥಾನದ ಮುಂದೆ ಕುಳಿತು ವೆಂಕಟೇಶನಿಗಾಗಿ ಪ್ರೀತಿಯಿಂದ ಹಾಡುಗಳನ್ನು ಹಾಡಿ ದೇವರನ್ನು ಖುಷಿ ಪಡಿಸುತ್ತಿದ್ದಳು. ಅವಳು ವೆಂಕಟೇಶನನ್ನು ಪ್ರೀತಿಸಿದ ಮಾಸ ಮಾರ್ಗಶೀರ್ಷ. ಅದೇ ಮಾಸದಲ್ಲಿ ವೆಂಕಟೇಶ/ಶ್ರೀನಿವಾಸ ಅಂಡಾಳ್ ಪ್ರೀತಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಅವಳನ್ನು ಮದುವೆಯಾದ. ಹಾಗಾಗಿ ಇದು ದೇವರಿಗೆ ಪ್ರಿಯವಾದ ಮಾಸ.

ದೇವತೆಗಳ ಬ್ರಾಹ್ಮಿ ಮುಹೂರ್ತ

ನಾವು ಪಂಚಾಂಗದ ಪ್ರಕಾರ ಒಂದು ವರ್ಷವನ್ನು ಎರಡು ಭಾಗಗಳನ್ನಾಗಿ ಮಾಡಿದ್ದೇವೆ. ಉತ್ತರಾಯಣ ಪುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ನಮ್ಮ ಒಂದು ವರ್ಷ ದೇವತೆಗಳಿಗೆ ಒಂದು ದಿನ. ಮಾರ್ಗಶೀರ್ಷ ಮಾಸ ದಕ್ಷಿಣಾಯನ ಪುಣ್ಯಕಾಲದಲ್ಲಿ ಬರುತ್ತದೆ಼. ಉತ್ತರಾಯಣ ಪುಣ್ಯಕಾಲ ದೇವತೆಗಳಿಗೆ ಬೆಳಿಗ್ಗೆ ದಕ್ಷಿಣಾಯನ ಪುಣ್ಯಕಾಲ ರಾತ್ರಿ. ಈ ಮಾಸ ರಾತ್ರಿ ಮುಗಿಯುತ್ತಿರುವ ಸಮಯ, ನಾವು ಬ್ರಾಹ್ಮೀಮುಹೂರ್ತವೆಂದು ಯಾವ ಸಮಯವನ್ನು ಕರೆಯುತ್ತೇವೋ ಅಂತಹ ಶ್ರೇಷ್ಠ ಮುಹೂರ್ತ ದೇವತೆಗಳಿಗೆ ಈ ಇಡೀ ಮಾಸ. ಈ ತಿಂಗಳು ಪೂರ್ತಿ ಬ್ರಹ್ಮ ಮುಹೂರ್ತವೇ. ಈ ಮಾಸದಲ್ಲಿ ದೇಹವನ್ನು ದಂಡಿಸಿ, ಚಳಿಯಿದ್ದರೂ ನದಿಯಲ್ಲಿ ಸ್ನಾನ ಮಾಡಿ ಬರೀ ದೇವರ ಕಾರ್ಯಗಳನ್ನೇ ಮಾಡಿದರೆ ನಮ್ಮ ಇಷ್ಟಾರ್ಥಗಳು ಫಲಿಸುತ್ತವೆ. ಹಾಗಂತ ಈ ಸಮಯದಲ್ಲಿ ಬೇರೆ ಒಳ್ಳೆ ಕೆಲಸ ಮಾಡಬಾರದೂ ಅಂತಲ್ಲ. ಕೆಲವರು ಮದುವೆ, ನಾಮಕರಣ, ಬ್ರಹ್ಮೋಪದೇಶ ಅಷ್ಟೇ ಯಾಕೆ ಮನೆ ಸೈಟು ಖರೀದಿಸುವವರು ಸಹ ಈ ಮಾಸವನ್ನು ಶೂನ್ಯಮಾಸವೆಂದು ಪರಿಗಣಿಸಿ ಎಲ್ಲವನ್ನೂ ಮುಂದೂಡುತ್ತಾರೆ. ಖಂಡಿತ ಹಾಗೆ ಮಾಡಬೇಕಿಲ್ಲ.

ಶೂನ್ಯ ಮಾಸ ಯಾವುದು

ಪುಷ್ಯ ನಕ್ಷತ್ರದಿಂದ ಪ್ರಾರಂಭವಾಗುವ ಮಾಸವನ್ನು ಶೂನ್ಯ ಮಾಸವೆನ್ನುತ್ತಾರೆ. ಏಕೆಂದರೆ ಅದು ಶನಿಗೆ ಸಂಬಂಧಪಟ್ಟ ಮಾಸ. ಆ ತಿಂಗಳಿನಲ್ಲಿ ಏನೇ ಕೆಲಸಕ್ಕೆ ಕೈ ಹಾಕಿದರೂ ಅದರ ಫಲಿತಾಂಶ ಶೂನ್ಯವಾಗಿರುತ್ತದೆ ಎಂಬ ನಂಬಿಕೆಯಿದೆ. ಶೂನ್ಯಮಾಸ ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಯಾವುದಾದರೂ ಒಂದು ತಿಂಗಳು ಬಂದು ಹೋಗುತ್ತದೆ. ಅದನ್ನು ಆಷಾಢ ಮಾಸವೆಂದು ಸಹ ಕರೆಯುತ್ತಾರೆ. ಆಷಾಢದಿಂದ ಉತ್ತರಾಯಣ ಪುಣ್ಯಕಾಲ ಮುಗಿದು, ದಕ್ಷಿಣಾಯನ ಪುಣ್ಯಕಾಲಕ್ಕೆ ಕಾಲಿಡುತ್ತೇವೆ.

ಧನುಷಿ ಧನುರಾಕಾರಃ ಮಕರೇ ಕುಂಡಲಾಕೃತೀಃ ಎಂಬ ಉಕ್ಕಿಗನುಸಾರವಾಗಿ ಚಳಿಯಿಂದ ತಪ್ಪಿಸಿಕೊಳ್ಳಲು ಮನುಷ್ಯನು ಬಿಲ್ಲಿನಂತೆ ಬಾಗಿ, ಕೈಕಾಲ ಮುದುಡಿಕೊಂಡಿರಲು ಇಷ್ಟಪಡುತ್ತಾನೆ. ಈ ವಾತಾವರಣದ ಫಲವಾಗಿ ಮಾನವನ ದೈನಂದಿನ ಕ್ರಿಯೆಗಳಾದ ವಿಸರ್ಜನಾಂಗಗಳ ಪ್ರಕ್ರಿಯೆಯಲ್ಲೂ ವೈಪರೀತ್ಯಗಳು ಕಂಡು ಬರುವುದು ಸಹಜವೆಂದು ವೈದ್ಯವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಇದನ್ನೇ ಸಾಮಾಯಿಕ ಬಾಧೆ’ (ಸೀಸನಿಕ್ ಅಲರ್ಜಿ) ಎನ್ನಬಹುದು. ಇದರ ನಿವಾರಣೆಗಾಗಿ ನಮ್ಮ ಪ್ರಾಚೀನರು ಧನುರ್ಮಾಸದಲ್ಲಿ ಅರುಣೋದಯದ ಹೊತ್ತಿಗೆ ಸ್ನಾನಾದಿಗಳು ಮುಗಿದಿರಬೇಕು ಎಂದರು.

ನಂತರದ ಹೊತ್ತಿಗೆ ಕುಳಿರ್ಗಾಳಿ ಹೆಚ್ಚಾಗಿ ಚರ್ಮವು ಶುಷ್ಕತೆಯನ್ನು ಪಡೆಯುವ ಸಾಧ್ಯತೆ ಹೆಚ್ಚು. ಆದುದರಿಂದ ಆ ಕುಳಿರ್ಗಾಳಿ ಆರಂಭವಾಗುವ ಮುನ್ನ ಸ್ನಾನಾದಿಗಳನ್ನು ಮುಗಿಸಿ ವಸ್ತ್ರದಿಂದ ದೇಹವನ್ನು ಮುಚ್ಚುವ ಯತ್ನವಿದಾಗಿರಬಹುದು. ಈ ಸಮಯದಲ್ಲಿ ಸೇವಿಸುವ ಆಹಾರಗಳಲ್ಲಿ ಮುಖ್ಯವಾದುದು ಹುಗ್ಗಿ. ಇದರ ಸಿದ್ಧತೆಗೆ ಬಳಸುವ ಕಡಲೇಬೀಜ, ಅವರೇಕಾಳು, ಜೀರಿಗೆ, ಮೆಣಸು, ಲವಂಗಗಳು, ದೇಹದಲ್ಲಿ ಆಂತರಿಕವಾಗಿ ಉಷ್ಣತೆಯನ್ನು ಹೆಚ್ಚಿಸುವುದರೊಂದಿಗೆ ನೈಮಿತ್ತಿಕ ಬಾಧೆಗಳನ್ನು ತಡೆಯುತ್ತವೆ. ದೈನಂದಿನ ವಿಸರ್ಜನಾಂಗಗಳ ಕ್ರಿಯೆ ಸಹಜವಾಗಿ ನಡೆಯುವಂತೆ ಮಾಡುತ್ತವೆ಼. ಹೀಗೆ ಆಹಾರ, ಆಚಾರಗಳೆರಡೂ ನಮ್ಮ ಜೀವನ ಸುಖವಾಗಿ ಇರುವಂತೆ ಮಾಡುವುದಕ್ಕಾಗಿಯೇ ಧನುರ್ಮಾಸದ ವಿಧಿಯೆಂಬುದನ್ನು ಅರಿತು ಆಚರಿಸೋಣವೇ.

ಲೇಖನ: ವೇ!!ಶ್ರೀ!!ಕುಮಾರಸ್ವಾಮಿ, ಶ್ರೀ ಜ್ಯೋತಿಷ್ಯ ಸಲಹಾ ಕೇಂದ್ರ ಬೆಂಗಳೂರು

LEAVE A REPLY

Please enter your comment!
Please enter your name here