ಚಿಕ್ಕಮಗಳೂರು:
ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಕಂದಾಯ ಸಚಿವ ಆರ್.ಅಶೋಕ, ವಸ್ತಾರೆ ಮತ್ತು ಅಂಬಳಿ ಹೋಬಳಿಯಲ್ಲಿ ಅಟಲ್ ಜನಸ್ನೇಹಿ ಕೇಂದ್ರದ ನೂತನ ಕಟ್ಟಡಗಳನ್ನು ಉದ್ಘಾಟಿಸಿ, ಹಕ್ಕುಪತ್ರ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಿದರು.
ನಂತರ ಮಾತನಾಡಿದ ಸಚಿವರು, ರಾಜ್ಯದ ಎಲ್ಲಾ ಗ್ರಾಮ ಲೆಕ್ಕಿಗರಿಗೆ ರಾಜ್ಯ ಸರ್ಕಾರದಿಂದ ಟ್ಯಾಬ್ ಗಳನ್ನು ವಿತರಿಸಲಾಗುವುದು ಎಂದರು. ಗ್ರಾಮ ಲೆಕ್ಕಿಗರ ಕೆಲಸಗಳಲ್ಲಿ ಸರಳೀಕರಣ ಮತ್ತು ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯ ಕಚೇರಿಗಳನ್ನು ಕಂಪ್ಯೂಟರೀಕರಣ ಮಾಡಲಾಗುವುದು, ಕಾಗದ ಬಳಕೆ ಕಡಿಮೆ ಮಾಡಿ ತಂತ್ರಜ್ಞಾನದ ಮೂಲಕ ಸಾರ್ವಜನಿಕ ಸೇವೆ ನೀಡಲು ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದರು.
ಇಡೀ ರಾಜ್ಯದಲ್ಲಿ ಡ್ರೋನ್ ಮೂಲಕ ಭೂಮಿ ಸರ್ವೇ ಮಾಡಲು ಸರ್ಕಾರ ಕ್ರಮ ಕೈಗೊಂಡಿರುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.
ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ ಮತ್ತು ಅಂಬಳಿ ಹೋಬಳಿಯಲ್ಲಿ ಅಟಲ್ ಜನಸ್ನೇಹಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿ, 94c ಅಡಿಯಲ್ಲಿ ಹಕ್ಕುಪತ್ರ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪ ಸಭಾಪತಿ ಎಂ ಕೆ ಪ್ರಾಣೇಶ್, ಶಾಸಕ ಎಂಪಿ ಕುಮಾರಸ್ವಾಮಿ, ಜೀವರಾಜ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.