ಸಿಎಂ ದಿಢೀರ್ ಭೇಟಿಯ ವೇಳೆ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ವ್ಯಾಪಾರ ಸ್ಥಗಿತ; ವರದಿಗೆ ಡಿ.ಕೆ. ಶಿವಕುಮಾರ್ ಆದೇಶ, ಅಧಿಕಾರಿಗಳ ಅಮಾನತು ಎಚ್ಚರಿಕೆ
ಮಂಗಳೂರು, ಸೆಪ್ಟೆಂಬರ್ 19: ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂದರಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸಾಮಾನ್ಯ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ಮೀನುಗಾರರು ಮತ್ತು ವ್ಯಾಪಾರಿಗಳ ಬದುಕಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಅಧಿಕಾರಿಗಳು ವ್ಯಾಪಾರ ಸ್ಥಗಿತಗೊಳಿಸಿರುವುದು ಕಂಡುಬಂದರೆ ಅವರನ್ನು ಅಮಾನತುಗೊಳಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಬೆಳಗ್ಗೆ ಸುಮಾರು 6 ಗಂಟೆಗೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿದ ಶಿವಕುಮಾರ್, ಅಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ಮೀನುಗಾರರು ಮತ್ತು ವ್ಯಾಪಾರಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಅವರು, ಮೀನುಗಾರಿಕಾ ಬೋಟ್ನಲ್ಲಿ ಪ್ರಯಾಣಿಸಿ ಬಂದರಿನ ಮೂಲಸೌಕರ್ಯ ಸಮಸ್ಯೆಗಳು ಹಾಗೂ ಈಗಾಗಲೇ ಕೈಗೊಂಡಿರುವ ಮತ್ತು ಮುಂದೆ ಕೈಗೊಳ್ಳಬೇಕಾದ ಅಭಿವೃದ್ಧಿ ಕ್ರಮಗಳ ಕುರಿತು ಮೀನುಗಾರರ ಮುಖಂಡರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಬಂದರಿನಲ್ಲಿ ಬೋಟ್ಗಳಿಗೆ ಡಾಕಿಂಗ್ ಸ್ಥಳದ ಕೊರತೆ, ಹೂಳೆತ್ತುವ ಅಗತ್ಯ, ಬಂದರಿನ ತಟದಲ್ಲಿ ಮರಳು ಸಂಗ್ರಹವಾಗಿರುವುದು, ಬೋಟ್ಗಳ ಸುಗಮ ಸಂಚಾರಕ್ಕೆ ಎದುರಾಗಿರುವ ಸಮಸ್ಯೆಗಳು, ಸಣ್ಣ ಮೀನುಗಾರರಿಗೆ ಬೋಟ್ ನಿಲುಗಡೆಗೆ ಇರುವ ತೊಂದರೆ ಹಾಗೂ ರಸ್ತೆ ತಡೆ ಮತ್ತು ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವ ಆರೋಪಗಳು ಸೇರಿದಂತೆ ಹಲವು ವಿಷಯಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಯಿತು.
ಆದರೆ ತಮ್ಮ ಭೇಟಿಯ ಹಿನ್ನೆಲೆಯಲ್ಲಿ ಬಂದರಿನಲ್ಲಿ ಮೀನುಗಾರರಿಗೆ ವ್ಯಾಪಾರ ನಡೆಸಲು ಅವಕಾಶ ನೀಡದಿರುವುದನ್ನು ಗಮನಿಸಿದ ಶಿವಕುಮಾರ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ವ್ಯಾಪಾರ ಚಟುವಟಿಕೆಗಳನ್ನು ನಿಲ್ಲಿಸಬಾರದು. ಇದರಿಂದ ಮೀನುಗಾರರು ಮತ್ತು ವ್ಯಾಪಾರಿಗಳ ಜೀವನೋಪಾಯಕ್ಕೆ ತೊಂದರೆಯಾಗಬಾರದು ಎಂದು ಸೂಚಿಸಿದ ಅವರು, ತಕ್ಷಣವೇ ವ್ಯಾಪಾರ ಚಟುವಟಿಕೆಗಳನ್ನು ಆರಂಭಿಸುವಂತೆ ನಿರ್ದೇಶನ ನೀಡಿದರು.
ವ್ಯಾಪಾರ ನಿಲ್ಲಿಸಿದ್ದು ಯಾರು? ವರದಿ ಕೇಳಿದ ಸಿಎಂ
ಬಂದರು ಪರಿಶೀಲನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ತಮ್ಮ ಭೇಟಿಯ ಸಂದರ್ಭದಲ್ಲಿ ಮಂಗಳೂರು ಬಂದರಿನ ಚಟುವಟಿಕೆಗಳು ಸ್ಥಗಿತಗೊಂಡಿದ್ದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಆಯುಕ್ತರಿಗೆ ಸೂಚಿಸಿರುವುದಾಗಿ ತಿಳಿಸಿದರು.
ಅಧಿಕಾರಿಗಳೇ ಇದಕ್ಕೆ ಕಾರಣರಾಗಿರುವುದು ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
“ನಾನು ಭೇಟಿ ನೀಡಿರುವ ಸಂದರ್ಭದಲ್ಲಿ ಮಂಗಳೂರಿನ ಬಂದರು ಚಟುವಟಿಕೆಗಳು ಸ್ಥಬ್ದವಾಗಿವೆ. ಇದಕ್ಕೆ ಕಾರಣ ಏನು ಎಂಬುದನ್ನು ಅರಿಯಲು ವರದಿ ನೀಡುವಂತೆ ಡಿಸಿ ಹಾಗೂ ಆಯುಕ್ತರಿಗೆ ನಿರ್ದೇಶನ ನೀಡಿದ್ದೇನೆ. ಇದಕ್ಕೆ ಅಧಿಕಾರಿಗಳು ಕಾರಣರಾಗಿದ್ದರೆ ಅವರನ್ನು ಅಮಾನತು ಮಾಡುತ್ತೇನೆ,” ಎಂದು ಶಿವಕುಮಾರ್ ಹೇಳಿದರು.
ಯಾವುದೇ ಅಕ್ರಮಗಳನ್ನು ಮುಚ್ಚಿಡುವ ಉದ್ದೇಶದಿಂದ ಬಂದರಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಸಿದರು.
“ನನಗೆ ಯಾವ ಭದ್ರತೆಯ ಅಗತ್ಯವಿಲ್ಲ. ನಾನು ಮೀನುಗಾರರು, ವರ್ತಕರು ಹಾಗೂ ದೋಣಿಯನ್ನೇ ನಂಬಿರುವ ಬೆಸ್ತ ಸಮುದಾಯದ ಬದುಕಿನ ವಾಸ್ತವ ಸ್ಥಿತಿಗತಿಯನ್ನು ಅರಿಯಲು ಬಂದಿದ್ದೇನೆ,” ಎಂದು ಹೇಳಿದರು.
ಬಂದರಿನಲ್ಲಿ ವ್ಯಾಪಾರ ಮತ್ತು ವಹಿವಾಟು ನ್ಯಾಯಬದ್ಧವಾಗಿ ನಡೆಯಬೇಕು ಹಾಗೂ ಯಾವುದೇ ಅನಗತ್ಯ ಅಡಚಣೆಯಿಂದ ಮೀನುಗಾರರ ಜೀವನೋಪಾಯಕ್ಕೆ ತೊಂದರೆಯಾಗಬಾರದು ಎಂದು ಅವರು ಒತ್ತಿ ಹೇಳಿದರು.
ಡಾಕಿಂಗ್ ಸ್ಥಳದ ಕೊರತೆ, ಹೂಳೆತ್ತುವ ಸಮಸ್ಯೆ ಮುಂದಿಟ್ಟ ಮೀನುಗಾರರು
ಬಂದರು ಪರಿಶೀಲನೆಯ ವೇಳೆ ಮೀನುಗಾರರ ಪ್ರತಿನಿಧಿಗಳು ಅಲ್ಲಿನ ಮೂಲಸೌಕರ್ಯ ಅಗತ್ಯಗಳ ಕುರಿತು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಟ್ರಾಲ್ ಬೋಟ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಚೇತನ್ ಬೆಂಗ್ರೆ ಮತ್ತು ಮೋಹನ್ ಬೆಂಗ್ರೆ ಅವರು, ಸದ್ಯ ಸುಮಾರು 200 ಬೋಟ್ಗಳಿಗೆ ಡಾಕ್ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಪಾಲ್ಗುಣಿ ಮತ್ತು ನೇತ್ರಾವತಿ ನದಿಗಳು ಅರಬ್ಬಿ ಸಮುದ್ರ ಸೇರುವ ತ್ರಿವೇಣಿ ಸಂಗಮ ಪ್ರದೇಶದಲ್ಲಿ ಹೊಸ ಡಾಕ್ಗಳನ್ನು ನಿರ್ಮಿಸಿದರೆ ಹೆಚ್ಚಿನ ಬೋಟ್ಗಳ ನಿಲುಗಡೆಗೆ ಅವಕಾಶ ಕಲ್ಪಿಸಬಹುದು ಎಂದು ಅವರು ಸಲಹೆ ನೀಡಿದರು.
ಇದಕ್ಕಾಗಿ ಹೂಳೆತ್ತುವ ಕಾರ್ಯ ಅಗತ್ಯವಿದೆ ಎಂದು ಮೀನುಗಾರರ ಪ್ರತಿನಿಧಿಗಳು ತಿಳಿಸಿದರು. ಸುಮಾರು 25 ವರ್ಷಗಳಿಂದ ಹೂಳೆತ್ತುವ ಕಾರ್ಯ ನಡೆದಿಲ್ಲ ಎಂದು ಅವರು ಹೇಳಿದ್ದು, ಎರಡೂ ನದಿಗಳು ಮತ್ತು ಅಳಿವೆಬಾಗಿಲಿನ ಪ್ರದೇಶದಲ್ಲಿ ಹೂಳೆತ್ತಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿಗೆ ವಿವರಿಸಿದರು.
ಬಂದರಿನ ತಟದಲ್ಲಿ ಮರಳು ತುಂಬಿಕೊಂಡಿರುವುದರಿಂದ ಅದನ್ನು ತೆರವುಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬೋಟ್ಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಯಾವ ಪ್ರದೇಶದಲ್ಲಿ ಹೆಚ್ಚು ಆಳವಿದೆ ಎಂಬುದನ್ನು ಗುರುತಿಸಲು ಚಾನಲ್ ಮಾರ್ಕಿಂಗ್ ಬಾಯ್ಗಳನ್ನು ಅಳವಡಿಸುವ ಅಗತ್ಯವಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಅಂಶಗಳನ್ನು ಆಲಿಸಿದ ಮುಖ್ಯಮಂತ್ರಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಳಿವೆಬಾಗಿಲಿನ ಹೂಳೆತ್ತುವಿಕೆಗೆ ತಾಂತ್ರಿಕ ಪರಿಶೀಲನೆ
ಅಳಿವೆಬಾಗಿಲಿನಲ್ಲಿ ಸುಮಾರು 35 ವರ್ಷಗಳಿಂದ ಹೂಳೆತ್ತುವ ಕಾರ್ಯ ನಡೆದಿಲ್ಲ ಮತ್ತು ಪರಿಸ್ಥಿತಿ ಅಪಾಯಕಾರಿಯಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಈ ವಿಷಯ ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಅಲ್ಲಿ ದೋಣಿಯೊಂದು ನಿಂತಿರುವ ಬಗ್ಗೆ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಹೂಳನ್ನು ಸಮುದ್ರಕ್ಕೆ ಬಿಡಬೇಕು ಎಂದು ಕೆಲವರು ಸಲಹೆ ನೀಡಿದ್ದರೆ, ಇನ್ನೂ ಕೆಲವರು ಆ ಪ್ರದೇಶವನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯದಲ್ಲಿ ಕೇಂದ್ರದ ತಾಂತ್ರಿಕ ಸಮಿತಿಯ ಸಲಹೆಯೂ ಅಗತ್ಯವಿದೆ ಎಂದು ತಿಳಿಸಿದರು.
ಸೂಕ್ತ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಶಿವಕುಮಾರ್, ಹೂಳೆತ್ತುವ ಪ್ರಕ್ರಿಯೆಯನ್ನು ಲೀಸ್ ಮೂಲಕ ನಡೆಸಬೇಕೇ ಅಥವಾ ಯಂತ್ರಗಳು ಮತ್ತು ದೋಣಿಗಳನ್ನು ಖರೀದಿಸಿ ಸರ್ಕಾರವೇ ಹೂಳೆತ್ತುವ ವ್ಯವಸ್ಥೆ ಮಾಡಬೇಕೇ ಎಂಬುದನ್ನು ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದರು.
ಈ ಹಿಂದೆ ಸರ್ಕಾರದ ಮೂಲಕವೇ ಹೂಳೆತ್ತುವ ವ್ಯವಸ್ಥೆ ಇತ್ತು, ಆದರೆ ಈಗ ಆ ವ್ಯವಸ್ಥೆ ಇಲ್ಲ ಎಂದು ಅವರು ಹೇಳಿದರು.
ಅಕ್ರಮ ಕಾಂಪೌಂಡ್, ರಸ್ತೆ ತಡೆ: ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ
ದೇಶದ ವಿವಿಧ ಭಾಗಗಳಿಂದ ಜನರು ಮಂಗಳೂರಿಗೆ ಬಂದು ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಶಿವಕುಮಾರ್ ಹೇಳಿದರು.
ಅಗತ್ಯ ಮೂಲಸೌಕರ್ಯ ಒದಗಿಸಬೇಕು ಮತ್ತು ವಾಹನ ಸಂಚಾರ ಸುಗಮವಾಗಿರಬೇಕು ಎಂದು ಅವರು ಸೂಚಿಸಿದರು.
ಬಂದರು ಪ್ರದೇಶದಲ್ಲಿ ರಸ್ತೆ ನಿರ್ಬಂಧಿಸಿರುವುದು ಮತ್ತು ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವ ಆರೋಪಗಳು ತಮ್ಮ ಗಮನಕ್ಕೆ ಬಂದಿವೆ ಎಂದು ಮುಖ್ಯಮಂತ್ರಿ ಹೇಳಿದರು.
ಕಾನೂನು ಉಲ್ಲಂಘಿಸಿರುವವರು ಎಷ್ಟೇ ದೊಡ್ಡವರಾಗಿದ್ದರೂ ಅಥವಾ ಪ್ರಭಾವಶಾಲಿಗಳಾಗಿದ್ದರೂ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಅವರು ಎಚ್ಚರಿಸಿದರು.
ಯಾವುದೇ ಜಾಗ ಖಾಸಗಿ ಆಸ್ತಿ ಎಂಬ ಪ್ರಶ್ನೆ ಎದುರಾದರೆ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗುವುದು. ನಂತರ ಕಾನೂನು ಚೌಕಟ್ಟಿನೊಳಗೆ ಮುಂದಿನ ಕ್ರಮ ಕೈಗೊಂಡು ಅಭಿವೃದ್ಧಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಣ್ಣ ಮೀನುಗಾರರ ಬೋಟ್ ನಿಲುಗಡೆ ಸಮಸ್ಯೆ
ಸಣ್ಣ ಮೀನುಗಾರರು ತಮ್ಮ ಬೋಟ್ಗಳನ್ನು ನಿಲ್ಲಿಸುವ ವಿಚಾರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೀನುಗಾರ ಸಮುದಾಯ ದೊಡ್ಡ ಸಮುದಾಯವಾಗಿದ್ದು, ಎಲ್ಲ ವರ್ಗದ ಜನರು ಸೌಹಾರ್ದತೆಯಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಬಂದರು ಪ್ರದೇಶ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿದ್ದು, ಈ ಸಮುದಾಯಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು.
ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಶಿವಕುಮಾರ್ ತಿಳಿಸಿದರು.
ಪ್ರಸ್ತುತ ಇರುವ ಸುಮಾರು 40-50 ಶೈಕ್ಷಣಿಕ ಸೀಟುಗಳನ್ನು 200ಕ್ಕೆ ಹೆಚ್ಚಿಸಲಾಗುವುದು. ಶಿಕ್ಷಣ, “ಸಮುದ್ರ ಮೆಟ್ರೋ” ಮತ್ತು ನೀಲಿ ಆರ್ಥಿಕತೆಗೆ ಒತ್ತು ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಅವರು ಹೇಳಿದರು.
ಮೀನುಗಾರರಿಗೆ ‘ಮಾಫಿಯಾ’ ಕಿರುಕುಳವಿದೆಯೇ? ಪರಿಶೀಲಿಸುವುದಾಗಿ ಸಿಎಂ
ಅಭಿವೃದ್ಧಿಗಾಗಿ ಸರ್ಕಾರ ಈಗಾಗಲೇ ಸುಮಾರು ₹32,000 ಕೋಟಿ ಮೊತ್ತವನ್ನು ಘೋಷಿಸಿದ್ದು, ಇದರಲ್ಲಿ ₹16,000 ಕೋಟಿ ಗ್ರಾಮೀಣ ಭಾಗದ ರಸ್ತೆ, ನೀರು ಸೇರಿದಂತೆ ಮೂಲಸೌಕರ್ಯಕ್ಕೆ ಮೀಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಮಂಗಳೂರು ಮತ್ತು ಕಾರವಾರದಲ್ಲಿ ಎಲ್ಲೆಲ್ಲಿ ವ್ಯಾಪಾರ-ವಹಿವಾಟು ನಡೆಯುತ್ತಿದೆ ಎಂಬ ಬಗ್ಗೆ ಸಮಗ್ರ ವರದಿ ಪಡೆಯಲಾಗುವುದು. ಅದರ ಆಧಾರದ ಮೇಲೆ ಸಮುದ್ರ ತೀರದ ಮೀನುಗಾರ ಕುಟುಂಬಗಳಿಗೆ ಅಗತ್ಯ ತಾಂತ್ರಿಕ ನೆರವು ನೀಡಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಕೆಲವು ಸಮಸ್ಯೆಗಳನ್ನು ಮೀನುಗಾರರು ನೇರವಾಗಿ ಹಂಚಿಕೊಳ್ಳಲು ಸಾಧ್ಯವಾಗದೇ ಇರಬಹುದು ಎಂದು ಹೇಳಿದ ಮುಖ್ಯಮಂತ್ರಿ, ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಲು ಗುಪ್ತ ವರದಿಯನ್ನೂ ಪಡೆಯುವುದಾಗಿ ಹೇಳಿದರು.
“ಮಾಫಿಯಾಗಳು ಇದೆಯಾ, ತೊಂದರೆ ಆಗುತ್ತಿದೆಯಾ ಎನ್ನುವುದನ್ನು ಗಮನಿಸುತ್ತೇನೆ. ಒಟ್ಟಾರೆ ನ್ಯಾಯಬದ್ಧವಾಗಿ ವ್ಯಾಪಾರ-ವಹಿವಾಟು ನಡೆಯಬೇಕು. ಮೀನುಗಾರರ ಸಮುದಾಯ ಅಭಿವೃದ್ಧಿಯಾಗಬೇಕು ಎನ್ನುವುದು ನಮ್ಮ ಗುರಿ,” ಎಂದು ಶಿವಕುಮಾರ್ ಹೇಳಿದರು.
ಕರಾವಳಿ ರಾಜ್ಯದಷ್ಟೇ ಅಲ್ಲ, ದೇಶದ ಸಂಪತ್ತು
ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಕರಾವಳಿ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಕುರಿತು ಮಾತನಾಡಿದ ಶಿವಕುಮಾರ್, ಕರಾವಳಿ ಪ್ರದೇಶ ರಾಜ್ಯದ ಸಂಪತ್ತು ಮಾತ್ರವಲ್ಲ, ದೇಶದ ಸಂಪತ್ತು ಕೂಡ ಆಗಿದೆ ಎಂದು ಹೇಳಿದರು.
ಮಂಗಳೂರಿನ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಇದಕ್ಕಾಗಿ ಮೂರು-ನಾಲ್ಕು ಹೊಸ ನೀತಿಗಳನ್ನು ಜಾರಿಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
ಕರಾವಳಿಯಲ್ಲಿ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡಬೇಕು ಮತ್ತು ಹೊಸದಾಗಿ ಹೂಡಿಕೆ ಮಾಡುವವರಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ತಿಳಿಸಿದರು.
ಹೂಡಿಕೆದಾರರು ಮತ್ತು ಪ್ರವಾಸಿಗರಿಗೆ ಉತ್ತಮ ಹೋಟೆಲ್ಗಳ ಅಗತ್ಯವಿದ್ದು, ಸೂಕ್ತ ಜಾಗಗಳನ್ನು ಗುರುತಿಸಿ ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.
ತುಳು ಈ ಭಾಗದ ಜನರ ಹೆಮ್ಮೆ
ತುಳು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸುವ ನಿರ್ಧಾರದ ಕುರಿತು ಕೇಳಿದಾಗ, ತುಳು ಈ ಭಾಗದ ಜನರ ಹೆಮ್ಮೆ ಮತ್ತು ದೀರ್ಘಕಾಲದ ನಿರೀಕ್ಷೆಯಾಗಿತ್ತು ಎಂದು ಶಿವಕುಮಾರ್ ಹೇಳಿದರು.
ಎಲ್ಲಾ ಪಕ್ಷಗಳ ನಾಯಕರು ಈ ಬೇಡಿಕೆಯನ್ನು ಬೆಂಬಲಿಸಿದ್ದರು. ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಕಸ್ತೂರಿರಂಗನ್ ವಿಚಾರದಲ್ಲಿ ಜನರ ಅಭಿಪ್ರಾಯ ಸಂಗ್ರಹ
ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ತೀರ್ಥಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಕುರಿತು ಮಾತನಾಡಿದ ಶಿವಕುಮಾರ್, ಈ ವಿಷಯದ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಹೇಳಿದರು.
ಅಧಿವೇಶನದಲ್ಲಿ ಚರ್ಚಿಸುವ ಮೊದಲು ಕರಾವಳಿ ಮತ್ತು ಮಲೆನಾಡು ಭಾಗದ ಜನರ ಅಭಿಪ್ರಾಯವನ್ನು ನೇರವಾಗಿ ತಿಳಿದುಕೊಳ್ಳಲು ತಾವು ಭೇಟಿ ನೀಡುತ್ತಿರುವುದಾಗಿ ಹೇಳಿದರು.
ಜನರ ಅಭಿಪ್ರಾಯ ಸಂಗ್ರಹಿಸಿದ ನಂತರ ಕೇಂದ್ರದ ಅಧಿಸೂಚನೆ ವಿರುದ್ಧ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕೇ ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
“ನಮಗೆ ನಮ್ಮ ಜನರ ಬದುಕು ಮುಖ್ಯ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ,” ಎಂದು ಶಿವಕುಮಾರ್ ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲ ಎಂಬ ಟೀಕೆಗಳ ನಡುವೆ ಸಚಿವ ಸಂಪುಟ ಘೋಷಿಸಿರುವ ಯೋಜನೆಗಳಿಗೆ ಹಣವನ್ನು ಹೇಗೆ ಹೊಂದಿಸಲಾಗುತ್ತದೆ ಎಂಬ ಪ್ರಶ್ನೆಗೆ, “ನಾವು ನುಡಿದಂತೆ ನಡೆಯುತ್ತೇವೆ. ಅದೇ ನಮ್ಮ ಶಕ್ತಿ,” ಎಂದು ಅವರು ಉತ್ತರಿಸಿದರು.
ಸಚಿವ ಯು.ಟಿ. ಖಾದರ್, ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಮತ್ತು ಇನಾಯತ್ ಅಲಿ, ದಕ್ಷಿಣ ಕನ್ನಡ ಜಿಲ್ಲಾ ಟ್ರಾಲ್ ಬೋಟ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಚೇತನ್ ಬೆಂಗ್ರೆ, ಮೋಹನ್ ಬೆಂಗ್ರೆ ಹಾಗೂ ಇತರ ಸ್ಥಳೀಯ ಮುಖಂಡರು ಬಂದರು ಪರಿಶೀಲನೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.
