18 ನಿಮಿಷದಲ್ಲಿ ದಾನಿ ಹೃದಯ ಸಾಗಿಸಿದ ನಮ್ಮ ಮೆಟ್ರೋ
ಬೆಂಗಳೂರು: ಜೀವ ರಕ್ಷಕ ವೈದ್ಯಕೀಯ ಪ್ರಕ್ರಿಯೆಗಾಗಿ ದಾನಿ ಹೃದಯವನ್ನು ನಮ್ಮ ಮೆಟ್ರೋ ಮೂಲಕ ಗೊರಗುಂಟೆಪಾಳ್ಯದಿಂದ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣಕ್ಕೆ 18 ನಿಮಿಷದಲ್ಲಿ ಸಾಗಿಸಲಾಯಿತು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
ಹೃದಯವನ್ನು ಮಧ್ಯಾಹ್ನ 2.22ಕ್ಕೆ ಗೊರಗುಂಟೆಪಾಳ್ಯ ನಿಲ್ದಾಣದಲ್ಲಿ ಮೆಟ್ರೋ ರೈಲಿಗೆ ತೆಗೆದುಕೊಂಡು ಹೋಗಿ, ಮಧ್ಯಾಹ್ನ 2.40ಕ್ಕೆ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣ ತಲುಪಿಸಲಾಯಿತು.
ಅಂಗವು ಅಗತ್ಯ ವೈದ್ಯಕೀಯ ಶಿಷ್ಟಾಚಾರವನ್ನು ಪಾಲಿಸಿಕೊಂಡು ಸಮಯಕ್ಕೆ ಗಮ್ಯಸ್ಥಾನ ತಲುಪುವಂತೆ ಸಮನ್ವಯ ಮಾಡಲಾಯಿತು ಎಂದು ಬಿಎಂಆರ್ಸಿಎಲ್ ಹೇಳಿದೆ.
ಈ ಸಾಗಣೆಯೊಂದಿಗೆ ನಮ್ಮ ಮೆಟ್ರೋ ಇದುವರೆಗೆ ಆರು ಪ್ರಮುಖ ಅಂಗಗಳ ಸಾಗಣೆಗೆ ನೆರವಾಗಿದೆ. ಇದರಲ್ಲಿ ಒಂದು ಯಕೃತ್, ಮೂರು ಹೃದಯಗಳು ಮತ್ತು ಒಂದು ಜೋಡಿ ಶ್ವಾಸಕೋಶಗಳು ಸೇರಿವೆ ಎಂದು ನಿಗಮ ತಿಳಿಸಿದೆ.
