Home ರಾಜಕೀಯ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರಕಾರ ಬದ್ಧ; ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಭರವಸೆ

ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರಕಾರ ಬದ್ಧ; ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಭರವಸೆ

59
0

ಬೆಳಗಾವಿ:

ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿ ಶನಿವಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರ ಉಪಸ್ಥಿತಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ವಿಚಾರಧಾರೆ ವಿಚಾರದಲ್ಲಿ ಪಕ್ಷದ ಬದ್ಧತೆ ಅಖಂಡವಾದುದು. ಪಕ್ಷದ ನಿರೀಕ್ಷೆಗಳನ್ನು ಈಡೇರಿಸಲು ಕಳೆದ 1 ವರ್ಷ 8 ತಿಂಗಳ ಅವಧಿಯಲ್ಲಿ ಶಕ್ತಿ ಮೀರಿ ಶ್ರಮಿಸಿರುವುದಾಗಿ ತಿಳಿಸಿದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರ ದೂರದೃಷ್ಟಿ ಪಕ್ಷದ ಸಂಘಟನೆಗೆ ಪೂರಕವಾಗಲಿದೆ ಎಂದು ಅವರು ತಿಳಿಸಿದರು.

Belagavi BJP CM1

ಪ್ರವಾಹ, ಕೋವಿಡ್ 19ರ ಸಾಂಕ್ರಾಮಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲಾಗಿದೆ. ಎನ್‌ ಡಿಆರ್‌ ಎಫ್ ನಿಗದಿಗೊಳಿಸಿದ ಪರಿಹಾರ ಮೊತ್ತಕ್ಕಿಂತ ಹೆಚ್ಚು ಪರಿಹಾರವನ್ನು ನೆರೆ ಸಂತ್ರಸ್ತರಿಗೆ ಕೊಡಲಾಗಿದೆ. ಕೋವಿಡ್ ಹತೋಟಿಗೆ ತರಲು ರಾಜ್ಯದೆಲ್ಲೆಡೆ ಚಿಕಿತ್ಸಾ ಕೇಂದ್ರ ಸ್ಥಾಪನೆ, ಸರಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ನೆರವಿನಲ್ಲಿ ಚಿಕಿತ್ಸೆ, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನಗಳನ್ನು ಪಾಲಿಸಿ ಸರ್ವಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಸೇನಾನಿಗಳಿಗೆ ಎಲ್ಲಾ ನೆರವು ನೀಡಲಾಗಿದೆ. ಇದರಿಂದಾಗಿ ಪಾಸಿಟಿವ್ ಸಂಖ್ಯೆ, ಮರಣ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಪ್ರಮಾಣಕ್ಕೆ ಬಂದಿದೆ ಎಂದು ವಿವರಿಸಿದರು.

ನುಡಿದಂತೆ ನಡೆವ ಸರಕಾರ ಎನಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಉತ್ತರ ಕರ್ನಾಟಕ ಮತ್ತು ಕೊಡಗು ಪ್ರವಾಹ ಪರಿಸ್ಥಿತಿ ಅತ್ಯಂತ ಸಮರ್ಥವಾಗಿ ನಿಭಾಯಿಸಿ ಸಂತ್ರಸ್ತರ ಕಣ್ಣೀರೊರೆಸುವ ಪ್ರಯತ್ನ ಮಾಡಲಾಗಿದೆ ಎಂದರು. ಲಾಕ್‌ ಡೌನ್ ವೇಳೆ ಸರಕಾರಕ್ಕೆ ನಿರೀಕ್ಷಿತ ಆದಾಯ ಇಲ್ಲದಿದ್ದರೂ ನೌಕರರ ವೇತನ ನೀಡಲಾಗಿದೆ.

ಅಭಿವೃದ್ಧಿ ಕಾರ್ಯಗಳೂ ಮುಂದುವರಿದಿವೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರಕಿಸಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ಭೂಸುಧಾರಣಾ ಕಾಯ್ದೆಗೆ ವಿಶೇಷ ತಿದ್ದುಪಡಿ ತರಲಾಗಿದೆ. ಬಯೋಟೆಕ್ನಾಲಜಿ ಸಮ್ಮೇಳನ ಯಶಸ್ವಿಯಾಗಿ ಏರ್ಪಡಿಸಿದ್ದು, ಇದಕ್ಕೆ ಪ್ರಧಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ ಎಂದರು.

ಮೆಟ್ರೋ ರೈಲು ಜಾಲ ವಿಸ್ತರಣೆ, ದಕ್ಷಿಣ ರೈಲ್ವೆ ಯೋಜನೆ ವಿಸ್ತರಣೆ, ರಸ್ತೆಗಳ ಅಭಿವೃದ್ಧಿ ಮೂಲಕ ಬೆಂಗಳೂರನ್ನು ಮಾದರಿ ನಗರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

Belagavi BJP CM

ಬೆಳಗಾವಿ ಪಾಲಿಕೆ ಸೇರಿ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳ ಅಭಿವೃದ್ಧಿ ಕಾರ್ಯಗಳಿಗೆ 150 ಕೋಟಿ ರೂಪಾಯಿ ಮಂಜೂರು ಮಾಡಿದ್ದು, 50 ಕೋಟಿ ರೂಪಾಯಿ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದವರು. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಯಡಿಯೂರಪ್ಪ ಅವರು ನುಡಿದಂತೆ ನಡೆದು ಉತ್ತಮ ಆಡಳಿತ ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ವಿಧಾನಸಭಾ ಉಪ ಚುನಾವಣೆ ನಡೆದಾಗ ಆರ್.ಆರ್.ನಗರ ಮತ್ತು ಶಿರಾದಲ್ಲಿ ಅಭೂತಪೂರ್ವ ಜಯ ನಮ್ಮದಾಯಿತು.

ವಿಧಾನಪರಿಷತ್ತಿನಲ್ಲಿ ಹಿಂದೆ ನಮ್ಮದಲ್ಲದ ಮೂರು ಸ್ಥಾನಗಳೂ ಸೇರಿ ಎಲ್ಲಾ ನಾಲ್ಕು ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ವಿಜಯದ ಯಾತ್ರೆಯ ಬಳಿಕ ನಾವಿಲ್ಲಿ ಸೇರಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಪರ ಅಭೂತಪೂರ್ವ ಅಲೆ ಎದ್ದು ನಿಂತಿದೆ. ಅಭಿವೃದ್ಧಿ ಕಾರ್ಯಗಳು, ಕೋವಿಡ್, ನೆರೆ ಪರಿಸ್ಥಿತಿಯ ಸಮರ್ಪಕ ನಿರ್ವಹಣೆಯಿಂದ ಜನರು ಬಿಜೆಪಿ ಪರ ನಿಲುವು ತಾಳಿದ್ದಾರೆ ಎಂದು ತಿಳಿಸಿದರು.

ರಾಜ್ಯದ 310 ಮಂಡಲಗಳಲ್ಲಿ 257 ಅಭ್ಯಾಸವರ್ಗಗಳನ್ನು ಸಂಘಟಿಸಲಾಗಿದೆ. 24981 ಅಪೇಕ್ಷಿತರಲ್ಲಿ 19716 ಜನರು ಹಾಜರಾಗಿದ್ದಾರೆ ಎಂದರು.
ಪಂಚರತ್ನ, ಪಂಚಸೂತ್ರ ಯೋಜನೆ, ಕುಟುಂಬ ಸಮ್ಮಿಲನ ಯೋಜನೆ ಮೂಲಕ ಗ್ರಾಮ ಪಂಚಾಯತ್ ಚುನಾವಣೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮ ಸ್ವರಾಜ್ಯ ಸಮಾವೇಶಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆ, ಜನಪರ ಯೋಜನೆಗಳ ಕುರಿತು ಜನರಿಗೆ ತಿಳಿಸಲಾಗುತ್ತಿದೆ. ಪಂಚಾಯತ್ ಚುನಾವಣೆಯಲ್ಲೂ ಪಕ್ಷವು ಶೇಕಡಾ 80ಕ್ಕೂ ಹೆಚ್ಚು ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಹತ್ಯಾ ನಿಷೇಧ ಮತ್ತು ಲವ್ ಜಿಹಾದ್ ವಿರುದ್ಧ ಕಾನೂನನ್ನು ರಾಜ್ಯ ಸರಕಾರ ಮುಂದಿನ ಅಧಿವೇಶನದಲ್ಲಿ ಅನುಷ್ಠಾನಕ್ಕೆ ತರಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಜನಸಂಘದ ಕಾಲದಿಂದ ರಾಜ್ಯದಲ್ಲಿ ಪಕ್ಷವನ್ನು ಬಲವಾಗಿ ಕಟ್ಟಲಾಗಿದೆ. ಈ ಬಾರಿ ಕೇಂದ್ರದಲ್ಲಿ ರಾಜ್ಯಕ್ಕೆ ಹಲವು ಪ್ರಮುಖ ಜವಾಬ್ದಾರಿಗಳು ಲಭಿಸಿವೆ. ಇದಕ್ಕೆ ಕಾರ್ಯಕರ್ತರ ಶ್ರಮವೇ ಕಾರಣ ಎಂದರು.

Belagavi BJP

ಬಿಹಾರ ರಾಜ್ಯದ ಚುನಾವಣೆಯಲ್ಲಿ 110 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಿ 74 ಸ್ಥಾನಗಳನ್ನು ಗೆದ್ದಿದೆ. ದೇಶದ ವಿವಿಧೆಡೆ ನಡೆದ 59 ವಿಧಾನಸಭಾ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ 80 ಮತ್ತು ಬಿಜೆಪಿ ಬೆಂಬಲಿತರು ಒಂದು ಸ್ಥಾನ ಪಡೆದಿದ್ದಾರೆ. ಇದು ಬಿಜೆಪಿ ಪಕ್ಷದ ಜನಪ್ರಿಯತೆಗೆ ಕೈಗನ್ನಡಿ ಎಂದರು.

ಹೈದರಾಬಾದ್ ಮಹಾನಗರ ಪಾಲಿಕೆಯಲ್ಲಿ 2015ರಲ್ಲಿ ಬಿಜೆಪಿ ಕೇವಲ 4 ಸೀಟು ಲಭಿಸಿತ್ತು. ಈಗ 48 ಸ್ಥಾನಗಳು ನಮ್ಮದಾಗಿವೆ. ಆತ್ಮವಿಶ್ವಾಸ, ತತ್ವದ ಬಲದಿಂದ ಚುನಾವಣೆ ಎದುರಿಸಿ ಸೀಮೋಲ್ಲಂಘನೆ ಮಾಡಿದ್ದೇವೆ. ಬಿಜೆಪಿ ಭವಿಷ್ಯದ ದಿನಗಳಲ್ಲಿ ತೆಲಂಗಾಣದಲ್ಲಿ ಅಧಿಕಾರ ಪಡೆಯಲಿದೆ.

ತಮಿಳುನಾಡು, ಕೇರಳದಲ್ಲೂ ತತ್ವಕ್ಕೆ ಬದ್ಧವಾಗಿ ಪಕ್ಷ ಹೋರಾಟ ಮುಂದುವರಿಸಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯಕರ್ತರೇ ನಮ್ಮ ಬಲ. ಹೈದರಾಬಾದ್ ಮಾದರಿಯಲ್ಲಿ ಪಕ್ಷ ಸಂಘಟಿಸಬೇಕು. ಪಂಚಾಯತ್‌ಗಳಲ್ಲಿ ಶೇಕಡಾ 100ಕ್ಕೆ 100 ಸ್ಥಾನಗಳು ನಮ್ಮದಾಗಲಿ ಎಂದು ಆಶಿಸಿದರು.

ಕುಟುಂಬ ರಾಜಕೀಯವೇ ಕಾಂಗ್ರೆಸ್‌ನ ಆತ್ಮ. ಜಾತಿಯೇ ಜೆಡಿಎಸ್ ಆತ್ಮ. ಆದರೆ, ನಮ್ಮದು ರಾಷ್ಟ್ರವಾದ ಮತ್ತು ಹಿಂದುತ್ವದ ಚಿಂತನೆಯ ಪಕ್ಷ. ಹಿಂದುತ್ವದ ಆಧಾರದಲ್ಲಿ ಸಾಮಾಜಿಕ ನ್ಯಾಯದ ಬದ್ಧತೆಯೊಂದಿಗೆ ಸರ್ವ ಸ್ಪರ್ಶಿ, ಸರ್ವ ವ್ಯಾಪಿಯಾಗಿ ಪಕ್ಷ ಮುನ್ನಡೆಯಲಿದೆ ಎಂದರು.

ಪಕ್ಷದ ಸಿದ್ಧಾಂತದ ಪ್ರೇರಣೆಯು ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಈಗಿನ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರಂಥ ಬದ್ಧತೆಯ ನಾಯಕರನ್ನು ನಮಗೆ ನೀಡಿದೆ ಎಂದು ತಿಳಿಸಿದರು.

ರಾಜ್ಯದ ಸಹ ಪ್ರಭಾರಿಗಳಾದ ಡಿ.ಕೆ.ಅರುಣಾ, ಕೇಂದ್ರ ಗಣಿ ಮತ್ತು ಭೂವಿಜ್ಞಾನ ಸಚಿವ ಪ್ರಲ್ಹಾದ್ ಜೋಶಿ, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಕಂದಾಯ ಸಚಿವ ಆರ್.ಅಶೋಕ್, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಬೆಳಗಾವಿ ನಗರ ಜಿಲ್ಲಾಧ್ಯಕ್ಷ ಶಶಿಕಾಂತ್ ಪಾಟೀಲ್, ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಪಕ್ಷದ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here