Home ಅಪರಾಧ ಡ್ರಗ್ಸ್ ಕೇಸ್: ಚಿತ್ರ ನಿರ್ಮಾಪಕ ಶಂಕರೇಗೌಡ ಬಂಧನ

ಡ್ರಗ್ಸ್ ಕೇಸ್: ಚಿತ್ರ ನಿರ್ಮಾಪಕ ಶಂಕರೇಗೌಡ ಬಂಧನ

31
0

ಬೆಂಗಳೂರು:

ಪಾರ್ಟಿ ಆಯೋಜಿಸಿ, ಡ್ರಗ್ಸ ಪೂರೈಕೆ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕರೊಬ್ಬರನ್ನು ಬೆಂಗಳೂರಿನ ಗೋವಿಂದಪುರಂ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಶಂಕರೇಗೌಡ ಬಂಧಿತ ನಿರ್ಮಾಪಕರಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲದಿನಗಳ ಹಿಂದಷ್ಟೇ ತೆಲುಗು ನಟ ತಾನೀಶ್ ನನ್ನು ಕೂಡ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ನಿರ್ಮಾಪಕನನ್ನು ಬಂಧಿಸಲಾಗಿದೆ.

ಖ್ಯಾತ ನಟನೊಬ್ಬರ ಅಭಿನಯದ ಸಿನಿಮಾ ಸೇರಿದಂತೆ ಹಲವು ಚಿತ್ರಗಳನ್ನು ಶಂಕರೇಗೌಡ ನಿರ್ಮಾಣ ಮಾಡಿದ್ದರು. ಬೆಂಗಳೂರಿನ ಸಂಜಯ್ ನಗರದಲ್ಲಿ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಕೂಡ ಹೊಂದಿದ್ದಾರೆ.

ಇತ್ತೀಚೆಗೆ ಪೂರ್ವ ವಿಭಾಗ ಪೊಲೀಸರ ಕಾರ್ಯಾಚರಣೆ ನಡೆಸಿ ಬಿಗ್ ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರ ಹಾಗೂ ಅಂತರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಫಯೂಮ್ ಎಂಬಾತ ಸೇರಿ ಹಲವರನ್ನು ಬಂಧಿಸಿದ್ದರು.

ವಿಚಾರಣೆ ವೇಳೆ ಆರೋಪಿಗಳು ನಿರ್ಮಾಪಕ ಶಂಕರೇಗೌಡ ಅವರ ಬೆಂಗಳೂರಿನ ಸಂಜಯ ನಗರದಲ್ಲಿ ಇರುವ ಕಚೇರಿಯಲ್ಲಿ ವಾರಾಂತ್ಯದಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ನಿರಂತರವಾಗಿ ಡ್ರಗ್ಸ್ ಪೂರೈಕೆ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾರೆಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಇದೀಗ ಶಂಕರೇಗೌಡ ಅವರನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆ 25 (ಅಕ್ರಮ ವ್ಯವಹಾರಗಳಿಗೆ ಹಣಕಾಸು ಒದಗಿಸುವುದು ಮತ್ತು ಅಪರಾಧಿಗಳಿಗೆ ಆಶ್ರಯ ನೀಡುವುದು), 27ಎ (ಅಪರಾಧಕ್ಕಾಗಿ ತನ್ನ ಸ್ಥಳವನ್ನು ಬಳಸಲು ಅನುಮತಿಸಿದ್ದಕ್ಕಾಗಿ ಶಿಕ್ಷೆ) ಮತ್ತು 29 ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆಂದು ವರದಿಗಳು ತಿಳಿಸಿವೆ.

LEAVE A REPLY

Please enter your comment!
Please enter your name here