Home ರಾಜಕೀಯ ಕೇರಳ ಲೀಡರುಗಳಿಗೆ ಫುಲ್‌ ಕ್ಲಾಸ್‌ ಕೊಟ್ಟ ಅಮಿತ್‌ ಶಾ

ಕೇರಳ ಲೀಡರುಗಳಿಗೆ ಫುಲ್‌ ಕ್ಲಾಸ್‌ ಕೊಟ್ಟ ಅಮಿತ್‌ ಶಾ

41
0

ಡಿಸಿಎಂ ಅಶ್ವತ್ಥನಾರಾಯಣ ಜತೆ ಮಧ್ಯರಾತ್ರಿವರೆಗೂ ಸಮಾಲೋಚಿಸಿದ ಬಿಜೆಪಿ ಚಾಣಕ್ಯ

ತಿರುವನಂತಪುರಂ:

ಏಪ್ರಿಲ್‌ 6ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯತಂತ್ರ ರೂಪಿಸಲು ಈವರೆಗೂ ತೆರೆಮರೆಯಲ್ಲಿಯೇ ಕೆಲಸ ಮಾಡುತ್ತಿದ್ದ ಬಿಜೆಪಿಯ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದೀಗ ಕೇರಳದಲ್ಲಿ ನೇರವಾಗಿ ರಂಗಪ್ರವೇಶ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಕೇವಲ ಒಂದು ಅಸೆಂಬ್ಲಿ ಸೀಟು ಗೆಲ್ಲಲು ಮಾತ್ರ ಶಕ್ತವಾಗಿದ್ದ ಬಿಜೆಪಿಯನ್ನು ಎರಡಂಕಿ ಅಥವಾ ಅದಕ್ಕೂ ಹೆಚ್ಚು ಸ್ಥಾನಗಳತ್ತ ಮುನ್ನಡೆಸಲು ಶಾ ಅವರು ಗುರಿ ಇಟ್ಟುಕೊಂಡಿದ್ದು, ಆ ನಿಟ್ಟಿನಲ್ಲಿ ತಮ್ಮ ತಂಡದ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಮಂಗಳವಾರವೇ ಕೇರಳವನ್ನು ಸೇರಿಕೊಂಡ ಅಮಿತ್‌ ಶಾ ಪಕ್ಷದ ಸಹ ಪ್ರಭಾರಿಯೂ ಆಗಿರುವ ಕರ್ನಾಟಕದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕೇರಳದ ವಿವಿಧ ನಾಯಕರ ಜತೆ ಮಧ್ಯರಾತ್ರಿವರೆಗೂ ಮಹತ್ವದ ಮಾತುಕತೆ ನಡೆಸಿದರು. ಅದಕ್ಕೂ ಮೊದಲು ಡಿಸಿಎಂ ಮತ್ತಿತರರ ಜತೆ ಶಾ ಭೋಜನ ಸ್ವೀಕರಿಸಿದರು. ಇನ್ನು; ಬುಧವಾರ ಬೆಳಗ್ಗೆ ಪುನಾ ಡಿಸಿಎಂ ಅವರನ್ನು ಕರೆಸಿಕೊಂಡ ಅಮಿತ್‌ ಶಾ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಅಶ್ವತ್ಥನಾರಾಯಣ ಅವರು; ರಾಜ್ಯದಲ್ಲಿ ಪಕ್ಷಕ್ಕಿರುವ ಸಾಧ್ಯತೆಗಳು-ಅವಕಾಶಗಳ  ಬಗ್ಗೆ ಸಂಪೂರ್ಣ ವಿವರಗಳನ್ನು ಅಮಿತ್‌ ಶಾ ಅವರಿಗೆ ನೀಡಿದರು. ಕರ್ನಾಟಕದ ಗಡಿಯಲ್ಲಿರುವ  ಕಾಸರಗೋಡಿನಿಂದ ತಿರುವನಂತಪುರದವರೆಗೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತವರು ಜಿಲ್ಲೆ ಕಣ್ಣೂರಿನಿಂದ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಪಾಲಕ್ಕಾಡ್‌ವರೆಗೂ ಬಿಜೆಪಿಗಿರುವ ಅವಕಾಶಗಳ ಬಗ್ಗೆ ಅಶ್ವತ್ಥನಾರಾಯಣ ಅವರಿಂದ ಅಮಿತ್‌ ಶಾ ಮಾಹಿತಿ ಪಡೆದರು.

ತ್ರಿಪುರದ ಉದಾಹರಣೆ ಕೊಟ್ಟ ಶಾ:

ತ್ರಿಪುರ ರಾಜ್ಯದ ಉದಾಹರಣೆ ನೀಡಿದ ಅಮಿತ್‌ ಶಾ ಅವರು; ಎಲ್‌ಡಿಎಫ್‌ ಸರಕಾರದ ಹಗರಣಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಬೇಕು. ಪಕ್ಷ ಬಲವರ್ಧನೆಗೆ ಬೇಕಾದ ಎಲ್ಲ ಹೆಜ್ಜೆಗಳನ್ನು ಇಡಬೇಕು. ತ್ರಿಪುರದಲ್ಲಿ ಬಿಜೆಪಿಗೆ ಶೇ.0.75ರಷ್ಟು ವೋಟ್‌ ಶೇರ್‌ ಇತ್ತು. ಅಲ್ಲಿ ಪಕ್ಷ ಅಧಿಕಾರಕ್ಕೆ ಬಂತು. ಕೇರಳದಲ್ಲಿ ಶೇ.16 ವೋಟ್‌ ಶೇರ್‌ ಇದೆ. ಇಷ್ಟಿದ್ದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟವೇ? ಎಂದು ರಾಜ್ಯ ನಾಯಕರನ್ನು ಕಟುವಾಗಿ ಪ್ರಶ್ನಿಸಿರೆಂದು ಗೊತ್ತಾಗಿದೆ.

ಪಕ್ಷ ಗೆಲ್ಲಬೇಕು. ಅದಕ್ಕೆ ಅಗತ್ಯವಾದ ಎಲ್ಲ ಕಾರ್ಯತಂತ್ರಗಳ ಬಗ್ಗೆ ನಾಯಕರಿಗೆ ಫುಲ್‌ ಕ್ಲಾಸ್‌ ಕೊಟ್ಟ ಅಮಿತ್‌ ಶಾ, ಶೇ.0.75 ಎಲ್ಲಿ? ಶೇ.16 ಎಲ್ಲಿ? ಮನಸ್ಸಿದ್ದರೆ ಮಾರ್ಗ. ಅವಿರತವಾಗಿ ಕೆಲಸ ಮಾಡಿ. ವ್ಯೂಹಾತ್ಮಕ ಹೆಜ್ಜೆಗಳಿನ್ನಿಡಿ ಎಂದು ಹೇಳಿದ್ದಾರೆ.

ಚುನಾವಣೆ ಹೊತ್ತಿನಲ್ಲಿ ಸಮಯ ಪೋಲು ಮಾಡುವುದು ಬೇಡ. ಎಲ್ಲರೂ ಎಲ್ಲ ದಿಕ್ಕುಗಳಲ್ಲೂ ಪ್ರಚಾರ ಮಾಡಿ. ಜನರಿಗೆ ಹತ್ತಿರವಾಗಿ. ಬಿಜೆಪಿ ಆಶಯಗಳನ್ನು ಮನವರಿಕೆ ಮಾಡಿ. ಎಲ್‌ಡಿಎಫ್‌ ಸರಕಾರದ ಅನೀತಿಗಳನ್ನು ತಿಳಿಸಿ. ಅದಕ್ಕೂ ಹಿಂದೆ ಇದ್ದ ಯುಡಿಎಫ್‌ ಸರಕಾರದ ದುರಾಡಳಿತವನ್ನು ಒತ್ತಿ ಹೇಳಿ ಎಂದು ನಾಯಕರಿಗೆ ಶಾ ತಾಕೀತು ಮಾಡಿದ್ದಾರೆ.

ಡಿಸಿಎಂ ಹೇಳಿದ್ದೇನು?

ಅಮಿತ್‌ ಶಾ ಅವರು ಮಂಗಳವಾರ ತಡರಾತ್ರಿವರೆಗೂ ನಮ್ಮ ಜತೆ ಚರ್ಚೆ ನಡೆಸಿದರು. ಮಾರ್ಗದರ್ಶನ ಮಾಡಿದರು. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹೇಗೆಲ್ಲ ಕೆಲಸ ಮಾಡಬೇಕು? ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ವಿವರವಾಗಿ ಸೂಚಿಸಿದ್ದಾರೆ. ಕೆಲ ವಿಚಾರಗಳನ್ನು ಬಹಿರಂಗವಾಗಿ ಹೇಳಲಾಗದು. ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತೇವೆ” ಎಂದು ಡಿಸಿಎಂ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಎಲ್‌ಡಿಎಫ್‌ ಆಡಳಿತವನ್ನು ಕೊನೆಗಾಣಿಸಲೇಬೇಕು ಎಂದು ಗುರಿ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಅಮಿತ್ ಶಾ ನಡೆಸಿದ‌ ಪಕ್ಷದ ಮುಖಂಡರ ಸಭೆಯಲ್ಲಿ‌ ಡಿಸಿಎಂ ಅಶ್ವತ್ಥ ನಾರಾಯಣ ಜತೆಗೆ ಕೇರಳದ ಪಕ್ಷದ ಉಸ್ತುವಾರಿ ಪಿ.ಸಿ.ರಾಧಾಕೃಷ್ಣನ್, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಗಣೇಶನ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here