Home ಅಪರಾಧ ಡ್ರಗ್ಸ್ ಪಿಡುಗು ತಡೆಗೆ ಕಠಿಣ ಕ್ರಮ

ಡ್ರಗ್ಸ್ ಪಿಡುಗು ತಡೆಗೆ ಕಠಿಣ ಕ್ರಮ

62
0

ಎನ್ ಡಿಪಿಎಸ್ ನಿಯಮಗಳು, ಪೊಲೀಸ್ ಕಾಯ್ದೆಗೆ ತಿದ್ದುಪಡಿ- ಬಸವರಾಜ ಬೊಮ್ಮಾಯಿ

ಬೆಂಗಳೂರು:

ಮಾದಕ ವಸ್ತು ಪಿಡುಗಿನ ವಿರುದ್ಧ ಸರ್ಕಾರ ಸಮರ ಸಾರಿದ್ದು, ಇದನ್ನು ಬೇರು ಸಮೇತ ಕಿತ್ತುಹಾಕಲು ಹಲವು ಕ್ರಮಗಳನ್ನು ಕೈಗೊಂಡಿದೆ. ಎನ್ ಡಿಪಿಎಸ್ ನಿಯಮಗಳು ಮತ್ತು ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಈಶ್ವರ ಖಂಡ್ರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸರು ವ್ಯಾಪಕವಾಗಿ ಬೆಂಗಳೂರು ನಗರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ವಶಪಡಿಸಿಕೊಂಡು, ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಡ್ರಗ್ಸ್ ಸಂಬಂಧ 2017ರಲ್ಲಿ 1126 ಪ್ರಕರಣಗಳು ದಾಖಲಾಗಿದ್ದು, 1031 ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2020ರಲ್ಲಿ 3852 ಪ್ರಕರಣ ದಾಖಲಿಸಿ 2285ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಉಳಿದವು ತನಿಖೆಯ ಹಂತದಲ್ಲಿವೆ. ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬರುವುದು ವಿಳಂಬವಾಗುತ್ತಿದ್ದುದು ನಿಜ. ಆದ್ದರಿಂದ ಬೆಂಗಳೂರಿನಲ್ಲಿ ಎಫ್ ಎಸ್ ಎಲ್ ಪ್ರಯೋಗಾಲಯ ಮೇಲ್ದರ್ಜೆಗೇರಿಸಲಾಗಿದೆ. ಹಿಂದೆ ಒಂದೊಂದೇ ಪ್ರಕರಣದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಈಗ ಒಮ್ಮೆಗೆ 51ಕ್ಕಿಂತಲೂ ಹೆಚ್ಚು ಪರೀಕ್ಷೆ ನಡೆಸುವ ಸೌಲಭ್ಯ ಒದಗಿಸಲಾಗಿದೆ. ಇದಕ್ಕಾಗಿ ರಾಷ್ಟ್ರಮಟ್ಟದ ಅತ್ಯುತ್ತಮ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಎಫ್ ಎಸ್ ಎಲ್ ನಲ್ಲಿ ವಿಶೇಷ ನಾರ್ಕೋಟೆಕ್ಸ್ ಎಂಬ ಪ್ರತ್ಯೇಕ ಘಟಕ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪರೀಕ್ಷೆ ನಡೆಸಿ ಆದಷ್ಟು ಶೀಘ್ರ ದೋಷಾರೋಪಪಟ್ಟಿ ಸಲ್ಲಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮುಂದಿನ ಆರು ತಿಂಗಳಲ್ಲಿ ರಾಜ್ಯದ ಐದು ಪ್ರಾದೇಶಿಕ ಭಾಗಗಳಲ್ಲಿ ಅಂದರೆ ಕಲಬುರಗಿ, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಗಳಲ್ಲಿ ಎಫ್ ಎಸ್ ಎಲ್ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇದರಿಂದ ಡ್ರಗ್ಸ್ ಪ್ರಕರಣಗಳಲ್ಲಿ ತಕ್ಷಣ ವರದಿ ಕೊಡುವಂತಹ ವ್ಯವಸ್ಥೆ ಮಾಡಲು ಸಾಧ್ಯವಾಗಲಿದೆ. ಇದಕ್ಕೆ ಬಜೆಟ್ ನಲ್ಲಿ ಹೆಚ್ಚುವರಿ ಅನುದಾನ ಮೀಸರಿಸಲಾಗುವುದು. ಜಿಲ್ಲೆಯಲ್ಲೂ ಒಂದು ಸುಸರ್ಜಿತ ಎಫ್ ಎಸ್ ಎಲ್ ಪ್ರಯೋಗಾಲಯ ಇರಬೇಕು ಎಂದು ತೀರ್ಮಾನಿಸಲಾಗಿದೆ. ಒಂದು ವರ್ಷದಲ್ಲಿ ಈ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವರು ತಿಳಿಸಿದರು.

Screenshot 907

ಆಂಧ್ರ ಮತ್ತು ತೆಲಂಗಾಣ ಗಡಿ ಭಾಗಗಳಲ್ಲಿ ರಿಕ್ರಿಯೇಷನ್ ಕ್ಲಬ್ ಗಳನ್ನು ನಡೆಸುತ್ತಿರುವುದು ಮತ್ತು ಅವುಗಳಲ್ಲಿ ಕೆಲವು ರಾಜ್ಯದ ಒಳಗೆ ಕಾರ್ಯಾಚರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ರಾಯಚೂರು, ಹುಬ್ಬಳ್ಳಿ –ಧಾರವಾಡದಲ್ಲಿ ಮುಂತಾದ ಗಡಿ ಭಾಗಗಳಲ್ಲಿ ಇದ್ದ ಇಂತಹ ಕ್ಲಬ್ ಗಳನ್ನು ಬಂದ್ ಮಾಡಲಾಗಿದೆ. ಕೆಲವರು ಹೈಕೋರ್ಟ್ ಆದೇಶ ತಂದು ಇಂತಹ ಕ್ಲಬ್ ಗಳನ್ನು ನಡೆಸುತ್ತಿದ್ದಾರೆ. ಅಕ್ರಮವಾಗಿ ಇರುವ ರಿಕ್ರಿಯೇಷನ್ ಕ್ಲಬ್ ಗಳನ್ನು ಬಂದ್ ಮಾಡಿ ಸಂಬಂಧಪಟ್ಟವರನ್ನು ಜೈಲಿಗೆ ಹಾಕುತ್ತೇವೆ. ಇದರಲ್ಲಿ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಇಂತಹ ಕ್ಲಬ್ ಗಳ ವಿರುದ್ಧ ಕ್ರಮಕೈಗೊಳ್ಳುವಾಗ ಸಾಕಷ್ಟು ಒತ್ತಡಗಳು ಬಂದಿವೆ. ಆದರೆ ಇಂತಹ ಒತ್ತಡಗಳಿಗೆ ಮಣಿದಿಲ್ಲ. ಮುಂದೆಯೂ ಮಣಿಯುವುದಿಲ್ಲ. ಜೂಜಾಟ ನಿಯಂತ್ರಿಸಲು ಕರ್ನಾಟಕ ಪೊಲೀಸ್ ಆಕ್ಟ್ ಗೆ ತಿದ್ದುಪಡಿ ತರಲು ಸೂಚನೆ ನೀಡಲಾಗಿದೆ. ಇದನ್ನು ಶಿಕ್ಷಾರ್ಹ ಅಪರಾಧವಾಗಿಸಲು ತಿದ್ದಪಡಿ ತರಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಡಾರ್ಕ್ ವೆಬ್ ಭೇದಿಸಲು ಸಾಧ್ಯವಾಗಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಡಾರ್ಕ್ ವೆಬ್ ಅನ್ನು ಭೇದಿಸಲಾಗಿದೆ. 21 ಡಾರ್ಕ್ ವೆಬ್ ಗಳನ್ನು ಬೆಂಗಳೂರು ಪೊಲೀಸರು ಭೇದಿಸಿ ವಿದೇಶದಿಂದ ಬರುತ್ತಿದ್ದ ಡ್ರಗ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹಲವರನ್ನು ಬಂಧಿಸಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಎನ್ ಡಿಪಿಎಸ್ ಕಾಯ್ದೆ ಕೇಂದ್ರದ ಕಾನೂನಾಗಿದ್ದು, ಅದಕ್ಕೆ ತಿದ್ದುಪಡಿ ತರಬೇಕಾದರೆ ಸಂಸತ್ ನಲ್ಲೇ ತರಬೇಕಾಗುತ್ತದೆ. ಆದರೆ ಕಾನೂನು ಜಾರಿಯಲ್ಲಿ ನಿಯಮಗಳನ್ನು ರೂಪಿಸಲು ರಾಜ್ಯಗಳಿಗೆ ಅಧಿಕಾರವಿದೆ. ಆದರೆ ಈಗಿರುವ ನಿಯಮಗಳಲ್ಲಿ ಕೆಲವು ನ್ಯೂನ್ಯತೆಗಳಿವೆ. ತನಿಖಾಧಿಕಾರಿಯ ಮೇಲೆ ಬಹಳಷ್ಟು ನಿರ್ಬಂಧಗಳಿವೆ. ಕೆಲವು ಕಠಿಣ ನಿಯಮಗಳಿಂದಾಗಿ ತನಿಖಾಧಿಕಾರಿಗಳಿಗೆ ಸುಗಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇಂತಹ ಕಠಿಣ ನಿಯಮಗಳನ್ನು ತೆಗೆದುಹಾಕಿ ಅಧಿಕಾರಿಗಳಿಗೆ ದಾಳಿ ನಡೆಸಲು, ಶೋಧ ನಡೆಸಲು ಅವಕಾಶ ಕಲ್ಪಿಸಲಾಗುವುದು. ಎನ್ ಡಿಪಿಎಸ್ ನಿಯಮಗಳಿಗೆ ಶೀಘ್ರವೇ ತಿದ್ದುಪಡಿ ತರಲಾಗುವುದು. ಡ್ರಗ್ಸ್ ತಡೆಗೆ ಸಮಗ್ರ ಕಾನೂನು ತರಲು ಶಿಫಾರಸು ಒದಗಿಸುವಂತೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಡ್ರಗ್ಸ್ ವಿರುದ್ಧ ಬಿಗಿಯಾದ ಕ್ರಮಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಅರಣ್ಯ ಇಲಾಖೆಯವರೇ ಗಾಂಜಾ ಬೆಳೆಯುತ್ತಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಸಚಿವರ ಗಮನ ಸೆಳೆದಾಗ, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹುಕ್ಕಾ ಬಾರ್ ಗಳಿಗೆ ಪರವಾನಿಗೆ ಕೊಡುವಾಗ ಸ್ಥಳೀಯ ಸಂಸ್ಥೆಗಳು ಪರಿಶೀಲಿಸಬೇಕು ಎಂದು ಗೃಹ ಸಚಿವರು ತಿಳಿಸಿದರು.

ಗಡಿ ಜಿಲ್ಲೆಗಳಲ್ಲಿ ವಿಶೇಷ ಗಮನ ಹರಿಸಲು ಸೂಚಿಸಲಾಗಿದೆ. ತಳಮಟ್ಟದಲ್ಲಿ ಕಾರ್ಯಾಚರಣೆ ಮತ್ತು ಕಾನೂನು ತಿದ್ದುಪಡಿಗೆ ಸರ್ಕಾರ ಮುಂದಾಗಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾದರೆ ಒಂದು ವರ್ಷ ಜಾಮೀನು ಸಿಗುವುದಿಲ್ಲ. ಸಿಂಥೆಟಿಕ್ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. 2020ರಲ್ಲಿ 5049ರಷ್ಟು ಸ್ಟ್ರಿಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾರ್ಟಿಗಳಲ್ಲಿ ಇಂತಹ ಡ್ರಗ್ಸ್ ಬಳಕೆಯಾಗುತ್ತಿದೆ. ಇದನ್ನು ಕೂಡ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕೆಲವರನ್ನು ಬಂಧಿಸಲಾಗಿದೆ. ಅವರಿಗೆ ಇದುವರೆಗೆ ನ್ಯಾಯಾಲಯ ಜಾಮೀನು ನೀಡಿಲ್ಲ. ಡ್ರಗ್ಸ್ ವಿಚಾರದಲ್ಲಿ ಯಾರ ಮುಲಾಜಿಗೂ ಮಣಿಯುವುದಿಲ್ಲ. ಇಷ್ಟು ವ್ಯಾಪಕವಾಗಿರುವ ಡ್ರಗ್ಸ್ ದಂಧೆಯನ್ನು ಭೇದಿಸಲು ಎಲ್ಲಾ ಸದಸ್ಯರು, ಸಾರ್ವಜನಿಕರು ಸಹಕಾರ ನೀಡಬೇಕು. ಎಲ್ಲಾ ಸ್ತರಗಳಲ್ಲಿರುವ ಈ ದಂಧೆಯನ್ನು ಮಟ್ಟಹಾಕದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು. ಡ್ರಗ್ಸ್, ಜೂಜಾಟ, ಅಕ್ರಮ ಸಾಗಾಟ ಮುಂತಾದ ಅಪರಾಧಗಳ ನಡುವೆ ಪರಸ್ಪರ ಸಂಬಂಧವಿದೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಸಮರ ಸಾರಬೇಕಾಗಿದೆ ಎಂದರು.

ಇದಕ್ಕೂ ಮೊದಲು ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಪ್ರಸ್ತಾಪ; ಗಡಿ ಭಾಗದಲ್ಲಿ ಕರಬುರಗಿ, ರಿಕ್ರಿಯೇಷನ್ ಕ್ಲಬ್ ಆರಂಭಿಸಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಇದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು. ಮಾದಕ ವಸ್ತು ಉತ್ಪಾದನೆ, ಸರಬರಾಜು ಮಾಡುವವರಿಗೆ ಈಗಿರುವ ಕಾನೂನಿನಲ್ಲಿ ಸಾಧ್ಯವಾಗುತ್ತಿಲ್ಲ. ಮರಣದಂಡನೆ, ಜೀವಾವಧಿ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತಿಲ್ಲ. ವಿದೇಶದಿಂದ ವಿದ್ಯಾಭ್ಯಾಸಕ್ಕೆಂದು ಬಂದು ಇಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ ಎಂದರು.

ಸದಸ್ಯರಾದ ಪ್ರಿಯಾಂಕ್ ಖರ್ಗ್, ನಾಗೇಂದ್ರ ಮತ್ತಿತರರು ಮಾತನಾಡಿದರು.

LEAVE A REPLY

Please enter your comment!
Please enter your name here