Home ರಾಮನಗರ ರಾಮನಗರ ಆಸ್ಪತ್ರೆಯಲ್ಲಿ ಸ್ವತಃ ಕೋವಿಡ್‌ ಲಸಿಕೆ ತಾಲೀಮಿಗೆ ಒಳಗಾದ ಡಿಸಿಎಂ

ರಾಮನಗರ ಆಸ್ಪತ್ರೆಯಲ್ಲಿ ಸ್ವತಃ ಕೋವಿಡ್‌ ಲಸಿಕೆ ತಾಲೀಮಿಗೆ ಒಳಗಾದ ಡಿಸಿಎಂ

89
0

ಮೊದಲ ಹಂತದಲ್ಲಿ 8,405 ಕೋವಿಡ್‌ ಯೋಧರಿಗೆ ಲಸಿಕೆ

ರಾಮನಗರ:

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್ ಲಸಿಕೆ ತಾಲೀಮಿಗೆ ಚಾಲನೆ ನೀಡಿದರಲ್ಲದೆ, ಸ್ವತಃ ತಾವೇ ಅಣಕು ತಾಲೀಮಿಗೆ ಒಳಗಾದರು.

ಬೆಳಗ್ಗೆಯೇ ಆಸ್ಪತ್ರೆಗೆ ಭೇಟಿ ನೀಡಿದ ಅವರು ಲಸಿಕೆ ತಾಲೀಮು ನಡೆಸುವ ಎಲ್ಲ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರಲ್ಲದೆ, ಅಣಕು ತಾಲೀಮಿಗೆ ಮೊದಲು ತಾವೇ ನೋಂದಾಯಿಸಿಕೊಂಡು ಟೆಂಪರೇಚರ್‌ ಪರೀಕ್ಷೆಗೆ ಒಳಗಾದರು. ಬಳಿಕ ಲಸಿಕೆ ಪಡೆಯುವ ಹಾಗೂ ಇಪ್ಪತ್ತು ನಿಮಿಷ ಪ್ರತ್ಯೇಕ ಕೊಠಡಿಯಲ್ಲಿ ವೈದ್ಯರ ನಿಗಾದಲ್ಲಿರುವ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಇವೆಲ್ಲ ಪ್ರಕ್ರಿಯೆಗಳ ಬಗ್ಗೆ ಡಿಸಿಎಂ ತೃಪ್ತಿ ವ್ಯಕ್ತಪಡಿಸಿದರಲ್ಲದೆ, ಲಸಿಕೆ ನೀಡುವ ಕಾರ್ಯಕ್ರಮ ಜನಾಂದೋಲನದ ರೀತಿಯಲ್ಲಿ ಕೈಗೊಳ್ಳಲು ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರತಿಯೊಬ್ಬರಿಗೂ ಲಸಿಕೆ ಸಿಗುತ್ತದೆ ಎಂದರು.

ಸ್ವತಃ ನಾನೇ ಲಸಿಕೆಯನ್ನು ಪಡೆಯುವ ಅಣಕು ಪ್ರಕ್ರಿಯೆಗೆ ಒಳಗಾಗಿದ್ದೇನೆ. ಅತ್ಯಂತ ವೈಜ್ಞಾನಿಕ ಮತ್ತು ಸುರಕ್ಷಿತವಾಗಿ ಇಡೀ ಪ್ರಕ್ರಿಯೆ ನಡೆಯುತ್ತದೆ ಎಂದು ತದನಂತರ ಡಿಸಿಎಂ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಈ ಲಸಿಕೆ ನೀಡುವುದು ಸವಾಲಿನ ಕೆಲಸ. ಅದಕ್ಕೆ ನಾಲ್ಕು ಹಂತಗಳ ಪೂರ್ವ ಸಿದ್ಧತೆ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಲಸಿಕೆ ತಾಲೀಮು ಕೆಲಸ ಕೈಗೊಳ್ಳಲಾಗಿದೆ. ಇಡೀ ರಾಜ್ಯಾಂದ್ಯಂತ ಇಂದು ತಾಲೀಮು ನಡೆಯುತ್ತಿದೆ. ರಾಮನಗರ ಜಿಲ್ಲೆ ಒಂದರಲ್ಲೇ 8,405 ಕೋವಿಡ್‌ ಯೋಧರಿಗೆ ಕೋವಿನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ತದ ನಂತರ ಪರಿಶೀಲನೆ, ಲಸಿಕೆ ಹಾಕುವುದು ಮತ್ತು ಲಸಿಕೆ ಪಡೆದವರನ್ನು ನಿಗಾದಲ್ಲಿ ಇರಿಸುವ ವ್ಯವಸ್ಥೆಯೂ ಆಗುತ್ತದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಮೊದಲ ಡೋಸ್‌ ಕೊಟ್ಟ ನಂತರ 28 ದಿನಗಳ ನಂತರ ಎರಡನೇ ಡೋಸ್‌ ನೀಡಲಾಗುವುದು. ಇದು ಪ್ರಥಮ ಹಂತವಾಗಿರುತ್ತದೆ. ಎರಡನೇ ಹಂತದಲ್ಲಿ ಶೇ.8ರಿಂದ 10ರಷ್ಟು ಸಾರ್ವಜನಿಕರಿಗೆ, 3ನೇ ಹಂತದಲ್ಲಿ ಶೇ.20ರಷ್ಟು ಸಾರ್ವಜನಿಕರಿಗೆ ಲಸಿಕೆ ನೀಡುವ ಕೆಲಸ ಆಗುತ್ತದೆ ಎಂದರು ಡಿಸಿಎಂ.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 87 ಕೇಂದ್ರಗಳಲ್ಲಿ 8,405 ಕೋವಿಡ್‌ ಯೋಧರಿಗೆ ಲಸಿಕೆ ನೀಡಲಾಗುವುದು. ಈ ಎಲ್ಲಡೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಎರಡನೇ ಹಂತದ ಹೊತ್ತಿಗೆ ಈ ಕೇಂದ್ರಗಳ ಸಂಖ್ಯೆಯನ್ನು 395ಕ್ಕೆ ಹೆಚ್ಚಿಸಲಾಗುವುದು. ಜತೆಗೆ, ಲಸಿಕೆ ಸಾಗಾಣಿಕೆ, ಪೂರೈಕೆ ಜಾಲ, ಸಿಬ್ಬಂದಿ, ಕೋಲ್ಡ್‌ ಸ್ಟೊರೇಜ್‌ ಇತ್ಯಾದಿ ಸೇರಿ ಸರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮಲ್ಲಿ ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ ಇದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ, ಜಿಲ್ಲಾ ಎಸ್ಪಿ ಗಿರೀಶ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here