ಬೆಂಗಳೂರು:
ಎರಡು ದಿನಗಳ ಒಳಗಾಗಿ ಬೆಂಗಳೂರು ಮಹಾನಗರದಲ್ಲಿ ಕೋವಿಡ್‌ಗೆ ಸಂಬಂಧಿತ ಎಲ್ಲ ಸೇವೆಗಳನ್ನು 1912 ಹೆಲ್ಪ್‌ಲೈನ್‌ಗೆ ಜೋಡಿಸಬೇಕು; ಬೆಡ್ ಹಂಚಿಕೆ ಪಾರದರ್ಶಕಗೊಳಿಸಬೇಕು ಎಂದು ರಾಜ್ಯ ಕೋವಿಡ್ ಕಾರ್ಯಪಡೆಯ ನೂತನ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ಡೆಡ್‌ಲೈನ್ ವಿಧಿಸಿದರು.
ಬೆಂಗಳೂರಿನಲ್ಲಿ ದಿನವಿಡೀ ಕೋವಿಡ್ ಸಂಬಂಧಿತ ಸಭೆಗಳಲ್ಲಿ ಪಾಲ್ಗೊಂಡ ಅವರು, ಮಾಹಿತಿ ಮತ್ತು ಸೌಲಭ್ಯಗಳ ಕೊಂಡಿಯಾಗಿರುವ ಹೆಲ್ಪ್‌ಲೈನ್ ವ್ಯವಸ್ಥೆಯನ್ನು ಸರಿ ಮಾಡುವ ಉದ್ದೇಶದಿಂದ ಸೋಮವಾರ ಸಂಜೆ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಬೆಂಗಳೂರು ನಗರದಲ್ಲಿರುವ ಕೋವಿಡ್ ಬೆಡ್‌ಗಳ ಪ್ರಮಾಣ, ಹಂಚಿಕೆ ಹಾಗೂ ಅವುಗಳ ಲೈವ್ ಸ್ಟೇಟಸ್, ಆಕ್ಸಿಜನ್ ಬೆಡ್‌ಗಳ ಮಾಹಿತಿ ಹಾಗೂ ಅವುಗಳ ಲಭ್ಯತೆ, ಆಪ್ತಮಿತ್ರ, ಔಷಧ ವಿತರಣೆ, ಲಸಿಕೆ ಅಭಿಯಾನ, 108, 102 ನಿಯಂತ್ರಣ ಕೊಠಡಿ ಮಾಹಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿ ಎಲ್ಲ ಸರಕಾರಿ-ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸಮಗ್ರ ಸೇವೆಗಳು ಸೇರಿದಂತೆ ಇಂಡೆಕ್ಸ್ ಆಪ್ ಅನ್ನು 1912 ಹೆಲ್ಪ್‌ಲೈನ್ ಜತೆಗೇ ಅನುಸಂಧಾನಗೊಳಿಸಬೇಕು. ಇನ್ನು ಮುಂದೆ ಕೋವಿಡ್ ನಿರ್ವಹಣೆ ವ್ಯವಸ್ಥೆಯಲ್ಲಿ ಏನೇ ನಡೆದರೂ ಈ ಹೆಲ್ಪ್‌ಲೈನ್ ಮೂಲಕವೇ ಆಗಬೇಕು ಎಂದು ಡಿಸಿಎಂ ತಾಕೀತು ಮಾಡಿದರು.
ಕೋವಿಡ್ ಬಂದು ಇಷ್ಟು ದಿನಗಳಾದರೂ ಹೆಲ್ಪ್‌ಲೈನ್ ವ್ಯವಸ್ಥೆಯನ್ನು ಸುಧಾರಿಸುವ ಕೆಲಸವೇ ಆಗಿಲ್ಲವೆಂದರೆ ನನಗೆ ಆಶ್ಚರ್ಯವಾಗುತ್ತಿದೆ. ಇನ್ನು ಉಪೇಕ್ಷೆ ಮಾಡುವುದು ಸರಿಯಲ್ಲ. 48 ಗಂಟೆಗಳ ಒಳಗಾಗಿ ಈ ವ್ಯವಸ್ಥೆ ಸಂಪೂರ್ಣವಾಗಿ ಸರಿ ಹೋಗಬೇಕು. ಇದು ನಿಮ್ಮ ತಕ್ಷಣದ ಹೊಣೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಹಿರಿಯ ಅಧಿಕಾರಿ ತುಷಾರ್ ಗಿರಿನಾಥ್ ಮುಂತಾದ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ಕೊಟ್ಟರು.
ಹೆಲ್ಪ್‌ಲೈನ್‌ಗೆ ತಾಂತ್ರಿಕ ಅಗತ್ಯಗಳಿದ್ದರೆ ತತ್‌ಕ್ಷಣವೆ ವ್ಯವಸ್ಥೆ ಮಾಡಿಕೊಳ್ಳಿ. ಯಾವುದಾದರೂ ಸಾಫ್ಟ್‌ವೇರ್ ಬೇಕಿದ್ದರೆ ಖರೀದಿಸಿ. ಜನ ಬೇಕಿದ್ದರೆ ತಕ್ಷಣವೇ ನೇಮಕ ಮಾಡಿಕೊಳ್ಳಿ. ಸಮಯ ಬಹಳ ಮುಖ್ಯ, ತಡ ಆಗಲೇಬಾರದು ಎಂದು ಅವರು ಹೇಳಿದರು.
ಎಲ್ಲವೂ ಪಾರದರ್ಶಕವಾಗಿರಬೇಕು:
ಕೋವಿಡ್‌ನಂಥ ಸಾಂಕ್ರಾಮಿಕ ಪೀಡೆಯನ್ನು ಹತ್ತಿಕ್ಕಬೇಕಾದರೆ ಪರೀಕ್ಷೆ, ಫಲಿತಾಂಶ ಹಾಗೂ ಚಿಕಿತ್ಸೆ ಬಹಳ ಮುಖ್ಯ. ಈ ಮೂರು ಅಂಶಗಳ ಜತೆಗೆ ಮಾಹಿತಿಯೂ ಹೆಚ್ಚು ಮುಖ್ಯ. ಎಲ್ಲರಿಗೂ ಸರಕಾರದ ಮಟ್ಟದಲ್ಲಿ ಏನೂ ಆಗುತ್ತಿಲ್ಲವೆಂಬ ತಪ್ಪು ಕಲ್ಪನೆ ಇದೆ. ಆದರೆ, ಏನೇನು ಪ್ರಯತ್ನಗಳು, ಸುಧಾರಣೆ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಪ್ರತಿಯೊಂದು ಅಂಶವೂ ಪಾರದರ್ಶಕವಾಗಿರಲಿ ಎಂದು ಡಾ.ಅಶ್ವತ್ಥನಾರಾಯಣ ಸೂಚಿಸಿದರು.
We also discussed integrating all services under one platform & to triaging the data to track and guide home isolated patients.
— Dr. Ashwathnarayan C. N. (@drashwathcn) May 3, 2021
Integrating 'Aptamitra' services is another priority. In view of rising cases, effective mitigation steps are being taken.
2/2
ಬೆಡ್‌ಗಳ ಮಾಹಿತಿ ಮಸ್ಟ್:
ಸರಕಾರಿ- ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಎಲ್ಲೆಡೆ ಇರುವ ಬೆಡ್‌ಗಳ ಬಗ್ಗೆ ಮಾಹಿತಿ ನಮ್ಮಲ್ಲಿ ಇರಬೇಕು. ಹಾಸಿಗೆಗಳು ಸರಕಾರದ್ದಾಗಿರಲಿ ಅಥವಾ ಖಾಸಗಿಯವರದ್ದಾಗಿರಲಿ ಎಲ್ಲ ಮಾಹಿತಿಯೂ ಹೆಲ್ಪ್‌ಲೈನ್ ಮೂಲಕ ನಗರ ಎಲ್ಲ ವಿಭಾಗಗಳ ಕಚೇರಿಗಳಲ್ಲೂ ಕ್ಷಣಕ್ಷಣಕ್ಕೂ ಅಪ್‌ಡೇಟ್ ಆಗಬೇಕು. ಹಾಗೆಯೇ, ಸರಕಾರದ ಬೆಡ್‌ಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕು ಮತ್ತೂ ಅವುಗಳ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು. ಯಾರೂ ಬೆಡ್‌ಗಳ ಮಾಹಿತಿ ಮುಚ್ಚಿಡುವಂತಿಲ್ಲ ಎಂದು ಎಂದು ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
ಚಿಕಿತ್ಸೆ ನಿರಾಕರಿಸುವಂತಿಲ್ಲ:
ಸರಕಾರಿ ಅಥವಾ ಖಾಸಗಿ ಆಸ್ಪತ್ರೆ ಆಗಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ರೋಗಿಯ ಸ್ಥಿತಿ ಗಂಭೀರವಾಗಿದ್ದರೆ ಕೂಡಲೇ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ಕೊಡಬೇಕು. ಸೌಮ್ಯ ಲಕ್ಷಣಗಳಿದ್ದರೆ ವೈದ್ಯಕೀಯ ಮಾರ್ಗದರ್ಶನ ಕೊಟ್ಟು ಮನೆಯಲ್ಲೇ ಕ್ವಾರಂಟೈನ್ ಅಗಲು ಸಲಹೆ ಕೊಡಬೇಕು. ಅವರಿಗೆ ಮೆಡಿಕಲ್ ಕಿಟ್ ಕೊಡಬೇಕು ಎಂದು ಡಿಸಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ 1912 ಹೆಲ್ಟ್ ಲೈನ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್, ಪಶ್ಚಿಮ ವಿಭಾಗದ ಉಸ್ತುವಾರಿಯಾದ ಉಜ್ವಲ್ ಘೋಷ್, ಕೌಶಲ್ಯಾಭಿವೃದ್ಧಿ ಇಲಾಖೆಯ ಆಯುಕ್ತ ಅಶ್ವಿನ್ ಗೌಡ, ಜಿಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಸೇರಿದಂತೆ ಹಲವಾರು ಅಧಿಕಾರಿಗಳು ಭಾಗಿಯಾಗಿದ್ದರು.