₹899 ಕೋಟಿ ಬ್ಯಾಂಕ್ ವಂಚನೆ ಪ್ರಕರಣ: ದೀಪಕ್ ಕೇಬಲ್ಸ್ ಮೇಲೆ ಇಡಿ ದಾಳಿ; ₹1.27 ಕೋಟಿ ನಗದು, ಚಿನ್ನ ವಶ
ಬೆಂಗಳೂರು, ಜೂನ್ 1: ₹899.35 ಕೋಟಿ ಬ್ಯಾಂಕ್ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದೀಪಕ್ ಕೇಬಲ್ಸ್ (ಇಂಡಿಯಾ) ಲಿಮಿಟೆಡ್ಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಇಡಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಮೇ 21 ಮತ್ತು ಮೇ 29ರಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಕಂಪನಿ ಹಾಗೂ ಅದರ ನಿರ್ದೇಶಕರು ಮತ್ತು ಸಂಬಂಧಿತ ವ್ಯಕ್ತಿಗಳಿಗೆ ಸೇರಿದ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿಯ ವೇಳೆ ₹1.27 ಕೋಟಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ₹18 ಕೋಟಿ ಶೇಷ ಹೊಂದಿದ್ದ ವಿವಿಧ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದ್ದು, ದೀಪಕ್ ಕೇಬಲ್ಸ್ (ಇಂಡಿಯಾ) ಲಿಮಿಟೆಡ್ ಹಾಗೂ ಅದರ ನಿರ್ದೇಶಕ ಕೆ. ವೆಂಕಟೇಶ್ವರ ರಾವ್ ಸೇರಿದಂತೆ ಇತರರು ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟಕ್ಕೆ ₹899.35 ಕೋಟಿ ವಂಚನೆ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ.
ತನಿಖೆಯ ಪ್ರಕಾರ, ಕಂಪನಿಯು ದೊಡ್ಡ ಪ್ರಮಾಣದ ಸಾಲ ಸೌಲಭ್ಯಗಳನ್ನು ಪಡೆದು ಆ ಹಣವನ್ನು ಬೇರೆ ಉದ್ದೇಶಗಳಿಗೆ ವರ್ಗಾಯಿಸಿದೆ ಎನ್ನಲಾಗಿದೆ. ಅಲ್ಲದೆ ಬ್ಯಾಂಕ್ ಸಾಲಗಳನ್ನು ಪಡೆಯಲು ಮತ್ತು ಮುಂದುವರಿಸಲು ನಕಲಿ ಹಣಕಾಸು ದಾಖಲೆಗಳನ್ನು ಸಲ್ಲಿಸಿ ಲೆಕ್ಕಪತ್ರಗಳಲ್ಲಿ ತಿರುಚಾಟ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಇಡಿ ತನಿಖೆಯಲ್ಲಿ ಹಲವು ಸಂಸ್ಥೆಗಳ ಮೂಲಕ ಕೃತಕ ಖರೀದಿ-ಮಾರಾಟ, ಸುತ್ತು ವಹಿವಾಟು (Circular Trading) ಹಾಗೂ ನಕಲಿ ಕಾರ್ಪೊರೇಟ್ ಗ್ಯಾರಂಟಿಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ.
ಈ ವಹಿವಾಟುಗಳ ಮೂಲಕ ಕಂಪನಿಯ ವಹಿವಾಟಿನ ಪ್ರಮಾಣವನ್ನು ಕೃತಕವಾಗಿ ಹೆಚ್ಚಿಸಿ, ಬ್ಯಾಂಕ್ಗಳಿಂದ ಹೆಚ್ಚಿನ ಸಾಲ ಸೌಲಭ್ಯ ಪಡೆದು, ಹಳೆಯ ಸಾಲಗಳನ್ನು ಉಳಿಸಿಕೊಳ್ಳುವ ಹಾಗೂ ಅಕ್ರಮ ಹಣದ ಮೂಲವನ್ನು ಮರೆಮಾಚುವ ಪ್ರಯತ್ನ ನಡೆಸಲಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಇದಲ್ಲದೆ, ಸಾಲದ ದೊಡ್ಡ ಮೊತ್ತವನ್ನು ಯಾವುದೇ ಸಮರ್ಪಕ ವ್ಯವಹಾರಿಕ ಕಾರಣವಿಲ್ಲದೆ ಕೆ. ವೆಂಕಟೇಶ್ವರ ರಾವ್ ಅವರ ನಿಯಂತ್ರಣದಲ್ಲಿದ್ದ ಸಂಬಂಧಿತ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂದು ಇಡಿ ತಿಳಿಸಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ವಶಪಡಿಸಿಕೊಳ್ಳಲಾದ ದಾಖಲೆಗಳು ಮತ್ತು ಹಣಕಾಸು ವಿವರಗಳ ಆಧಾರದ ಮೇಲೆ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
