ಸೌಂದರ್ಯೀಕರಿಸಿದ ಬಾಣಸವಾಡಿ ಕಸದ ಬ್ಲಾಕ್ ಸ್ಪಾಟ್ನಲ್ಲಿ ಮತ್ತೆ ಕಸ ಎಸೆದ ನಾಲ್ವರ ವಿರುದ್ಧ ಎಫ್ಐಆರ್
ಬೆಂಗಳೂರು, ಜುಲೈ 26: ಬಾಣಸವಾಡಿಯಲ್ಲಿರುವ ಸೌಂದರ್ಯೀಕರಿಸಿದ ಮಾಜಿ ಕಸದ ಬ್ಲಾಕ್ ಸ್ಪಾಟ್ನಲ್ಲಿ ಮತ್ತೆ ಕಸ ಎಸೆದು ದಂಡ ಪಾವತಿಸಲು ನಿರಾಕರಿಸಿದ ನಾಲ್ವರು ವ್ಯಕ್ತಿಗಳ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸರ್ವಜ್ಞನಗರ ವಿಭಾಗದ ವಾರ್ಡ್ ಸಂಖ್ಯೆ 27ರ ಬಾಣಸವಾಡಿ 7ನೇ ಮುಖ್ಯರಸ್ತೆಯಲ್ಲಿದ್ದ ಕಸದ ಬ್ಲಾಕ್ ಸ್ಪಾಟ್ ಅನ್ನು ಇತ್ತೀಚೆಗೆ ಸಂಪೂರ್ಣವಾಗಿ ತೆರವುಗೊಳಿಸಿ ಸೌಂದರ್ಯೀಕರಣ ಮಾಡಲಾಗಿತ್ತು. ಬಳಿಕ ಸಾರ್ವಜನಿಕರು ಮತ್ತೆ ಕಸ ಎಸೆಯದಂತೆ ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಗಿದ್ದು, ಸ್ಥಳದಲ್ಲಿ ನಿಗಾವಹಿಸಲು ವಾರ್ಡ್ ಮಾರ್ಷಲ್ಗಳನ್ನು ನಿಯೋಜಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಜುಲೈ 16ರಂದು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾರ್ಡ್ ಮಾರ್ಷಲ್ಗಳು ನಾಲ್ವರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಕಸ ಎಸೆಯುತ್ತಿರುವುದನ್ನು ಗಮನಿಸಿ ತಡೆದರು. ನಿಯಮಾನುಸಾರ ದಂಡ ವಿಧಿಸಲು ಮುಂದಾದಾಗ ಅವರು ದಂಡ ಪಾವತಿಸಲು ನಿರಾಕರಿಸಿ, ಕಸವನ್ನು ಅಲ್ಲಿಯೇ ಬಿಸಾಡಿ ಸ್ಥಳದಿಂದ ತೆರಳಿರುವುದಾಗಿ ತಿಳಿಸಲಾಗಿದೆ.
ಈ ಸಂಬಂಧ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ ಸರ್ವಜ್ಞನಗರ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), 2023ರ ಕಲಂ 280ರಡಿ ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸೌಂದರ್ಯೀಕರಿಸಿ ಶಾಶ್ವತವಾಗಿ ತೆರವುಗೊಳಿಸಿರುವ ಕಸದ ಬ್ಲಾಕ್ ಸ್ಪಾಟ್ಗಳಲ್ಲಿ ಮತ್ತೆ ಕಸ ಎಸೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ಹಾಗೂ ಸಾರ್ವಜನಿಕ ಸ್ವಚ್ಛತೆಗೆ ಧಕ್ಕೆ ಉಂಟುಮಾಡುವವರ ವಿರುದ್ಧ ನಿಯಮಾನುಸಾರ ದಂಡಾತ್ಮಕ ಹಾಗೂ ಅಗತ್ಯ ಕಾನೂನು ಕ್ರಮವನ್ನು ಮುಂದುವರಿಸಲಾಗುವುದು ಎಂದು ನಗರ ಪಾಲಿಕೆ ತಿಳಿಸಿದೆ.
