ಮಾರತಹಳ್ಳಿಯಲ್ಲಿ ಸ್ಕೈವಾಕ್, ಬೋಗನಹಳ್ಳಿಯಲ್ಲಿ ಫ್ರೀ ಲೆಫ್ಟ್? ಪೂರ್ವ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಮಗ್ರ ಯೋಜನೆ
ಬೆಂಗಳೂರು, ಜುಲೈ 26: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ಜಂಕ್ಷನ್ಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಿ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಆಯುಕ್ತ ಡಿ.ಎಸ್. ರಮೇಶ್ ಹಾಗೂ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ವಿವಿಧ ಪ್ರಮುಖ ಜಂಕ್ಷನ್ಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆ ವೇಳೆ ರಸ್ತೆ ಮೂಲಸೌಕರ್ಯ ಅಭಿವೃದ್ಧಿ, ಅಂಡರ್ಪಾಸ್ ನಿರ್ಮಾಣ, ರಸ್ತೆ ಅಗಲೀಕರಣ, ಫ್ರೀ ಲೆಫ್ಟ್ ಟರ್ನ್, ಸ್ಕೈವಾಕ್ ನಿರ್ಮಾಣ, ಬಫರ್ ರಸ್ತೆ ಅಭಿವೃದ್ಧಿ ಹಾಗೂ ವಿವಿಧ ಇಲಾಖೆಗಳ ಯುಟಿಲಿಟಿಗಳ ಸ್ಥಳಾಂತರ ಸೇರಿದಂತೆ ಸಂಚಾರ ದಟ್ಟಣೆ ನಿವಾರಣೆಗೆ ಅಗತ್ಯವಾದ ಶಾಶ್ವತ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಹೋಪ್ ಫಾರ್ಮ್ ಅಂಡರ್ಪಾಸ್ ಕಾಮಗಾರಿಗೆ ವೇಗ
ಹೋಪ್ ಫಾರ್ಮ್ ಜಂಕ್ಷನ್ನಲ್ಲಿ ಪ್ರಗತಿಯಲ್ಲಿರುವ ಅಂಡರ್ಪಾಸ್ ಕಾಮಗಾರಿಯನ್ನು ಪರಿಶೀಲಿಸಿದ ಆಯುಕ್ತರು, ಇದು ನಗರದ ಅತ್ಯಂತ ಸಂಚಾರ ದಟ್ಟಣೆ ಇರುವ ಜಂಕ್ಷನ್ಗಳಲ್ಲಿ ಒಂದಾಗಿರುವುದರಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಗೇಲ್ ಅನಿಲ ಕೊಳವೆ, ಬೆಸ್ಕಾಂ ವಿದ್ಯುತ್ ಜಾಲ, ಟ್ರಾನ್ಸ್ಫಾರ್ಮರ್ ಕಂಬಗಳು ಸೇರಿದಂತೆ ಕಾಮಗಾರಿಗೆ ಅಡ್ಡಿಯಾಗಿರುವ ಯುಟಿಲಿಟಿಗಳನ್ನು ತಕ್ಷಣ ಸ್ಥಳಾಂತರಿಸಿ, ಮೂರು ಪಾಳಿಗಳಲ್ಲಿ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
ಕಾಮಗಾರಿಯಿಂದ ಹಾಳಾಗಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ಡಾಂಬರೀಕರಣ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಹಾಗೂ ಅಗತ್ಯವಿದ್ದಲ್ಲಿ ಪರ್ಯಾಯ ಸಂಚಾರ ಮಾರ್ಗಗಳನ್ನು ಒದಗಿಸಲು ಸಂಚಾರ ಪೊಲೀಸರೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಿದರು.
ಅಲ್ಪೈನ್ ಇಕೋ ರಸ್ತೆಗೆ ರೈಲ್ವೆ ಅಂಡರ್ಪಾಸ್ ಪ್ರಸ್ತಾವನೆ
ಅಲ್ಪೈನ್ ಇಕೋ ರಸ್ತೆಯಿಂದ ಹೊರ ವರ್ತುಲ ರಸ್ತೆ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ಪರಿಶೀಲಿಸಿದ ಆಯುಕ್ತರು, ರೈಲ್ವೆ ಅಂಡರ್ಪಾಸ್ ನಿರ್ಮಾಣದ ಕಾರ್ಯಸಾಧ್ಯತೆಯನ್ನು ತಾಂತ್ರಿಕವಾಗಿ ಪರಿಶೀಲಿಸಿ ಭೂ ಮಾಲೀಕತ್ವ, ಸರ್ವೇ ವಿವರಗಳು ಹಾಗೂ ಭೂಸ್ವಾಧೀನ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಾರತಹಳ್ಳಿ ಜಂಕ್ಷನ್ನಲ್ಲಿ ಸ್ಕೈವಾಕ್, ಫ್ರೀ ಲೆಫ್ಟ್ ಪರಿಶೀಲನೆ
ಮಾರತಹಳ್ಳಿ ಜಂಕ್ಷನ್ನಲ್ಲಿ ಹೆಚ್ಎಎಲ್ ರಸ್ತೆಯಿಂದ ಬರುವ ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸ್ಕೈವಾಕ್ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಲಾಯಿತು.
ಅದೇ ರೀತಿ ವರ್ತೂರು ಕೋಡಿಯಿಂದ ಹೊರ ವರ್ತುಲ ರಸ್ತೆಗೆ ಸಂಪರ್ಕಿಸುವ ತಿರುವಿನಲ್ಲಿ ಫ್ರೀ ಲೆಫ್ಟ್ ಟರ್ನ್ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ತಾಂತ್ರಿಕ ಅಧ್ಯಯನ ನಡೆಸುವಂತೆ ಸೂಚಿಸಲಾಯಿತು.
ತೂಬರಹಳ್ಳಿ–ವಿಬ್ಗ್ಯಾರ್ ಶಾಲೆ ರಸ್ತೆಗೆ ಬಫರ್ ರಸ್ತೆ
ತೂಬರಹಳ್ಳಿ–ವಿಬ್ಗ್ಯಾರ್ ಶಾಲೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಹಾಲಿ ರಸ್ತೆಗೆ ಸಮಾನಾಂತರವಾಗಿ ಬಫರ್ ರಸ್ತೆ ನಿರ್ಮಾಣಕ್ಕಾಗಿ ಬಿ-ಸ್ಮೈಲ್ ವತಿಯಿಂದ ವಿವರವಾದ ಯೋಜನಾ ವರದಿ ಸಿದ್ಧವಾಗುತ್ತಿದ್ದು, ಕಾಮಗಾರಿ ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಪಣತ್ತೂರು ಎಸ್-ಕ್ರಾಸ್ನಲ್ಲಿ ರಸ್ತೆ ಅಗಲೀಕರಣ
ಪಣತ್ತೂರು ಎಸ್-ಕ್ರಾಸ್ನಿಂದ ರೈಲ್ವೆ ಅಂಡರ್ಪಾಸ್ ಬಳಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ಪರಿಶೀಲಿಸಿದ ಆಯುಕ್ತರು, ಅಗತ್ಯ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರಸ್ತೆ ಅಗಲೀಕರಣ ಹಾಗೂ ನೇರ ಸಂಪರ್ಕ ಕಲ್ಪಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ವರದಿ ಸಲ್ಲಿಸುವಂತೆ ಸೂಚಿಸಿದರು.
ಬೋಗನಹಳ್ಳಿ ರಸ್ತೆಗೆ ಫ್ರೀ ಲೆಫ್ಟ್ ಪ್ರಸ್ತಾವನೆ
ಬೋಗನಹಳ್ಳಿ ರಸ್ತೆ ಸಂಪರ್ಕಿಸುವ ಜಂಕ್ಷನ್ನಲ್ಲಿ ಫ್ರೀ ಲೆಫ್ಟ್ ಟರ್ನ್ ವ್ಯವಸ್ಥೆ ಕಲ್ಪಿಸುವ ಮೂಲಕ ವಾಹನ ದಟ್ಟಣೆ ಕಡಿಮೆ ಮಾಡುವ ಸಾಧ್ಯತೆ ಕುರಿತು ತಾಂತ್ರಿಕ ಅಧ್ಯಯನ ನಡೆಸಿ ಅನುಷ್ಠಾನಗೊಳಿಸಬಹುದಾದ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎಸ್. ರಮೇಶ್, ಪೂರ್ವ ಬೆಂಗಳೂರಿನ ಪ್ರಮುಖ ಜಂಕ್ಷನ್ಗಳಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ನಗರ ಪಾಲಿಕೆ, ಸಂಚಾರ ಪೊಲೀಸ್, ಬೆಸ್ಕಾಂ, ಗೇಲ್, ರೈಲ್ವೆ ಹಾಗೂ ಇತರ ಸೇವಾ ಸಂಸ್ಥೆಗಳ ಸಮನ್ವಯದೊಂದಿಗೆ ಶಾಶ್ವತ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಸಾರ್ವಜನಿಕರಿಗೆ ಸುರಕ್ಷಿತ, ವೇಗದ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು ನಗರ ಪಾಲಿಕೆಯ ಪ್ರಮುಖ ಆದ್ಯತೆಯಾಗಿದ್ದು, ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ನಿರಂತರ ಸ್ಥಳ ಪರಿಶೀಲನೆ ನಡೆಸಿ ಪ್ರಗತಿ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.
ಸ್ಥಳ ಪರಿಶೀಲನೆ ವೇಳೆ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತೆ (ಅಭಿವೃದ್ಧಿ) ಲೋಕಂಡೆ ಸ್ನೇಹಲ್ ಸುಧಾಕರ್, ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ, ಮುಖ್ಯ ಅಭಿಯಂತರ ಲೋಕೇಶ್ ಎಂ., ಟಿಡಿಆರ್ ವಿಭಾಗದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
