
Fire mishap in tug boat at naval base in Karwar
ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಅರ್ಗಾದ ಕದಂಬ ನೌಕಾನೆಲೆಯ ಡಾಕ್‌ಯಾರ್ಡ್‌ನಲ್ಲಿದ್ದ ಟಗ್ ಬೋಟ್‌ನಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದೆ.
ಇಂದು ಮಧ್ಯಾಹ್ನ ಈ ಅವಘಡ ಸಂಭವಿಸಿದ್ದು, ದೊಡ್ಡ ಗಾತ್ರದ ದೋಣಿಗಳನ್ನು ನೌಕಾನೆಲೆಗೆ ತರಲು ಬಳಸುವ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಮೂಲಗಳ ಪ್ರಕಾರ, ಟಗ್ ಬೋಟ್ ನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಡೀಸೆಲ್ ಟ್ಯಾಂಕ್‌ಗೆ ಹರಡಿ, ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ನೌಕಾಪಡೆಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಆದರೆ ಬೆಂಕಿ ಹೆಚ್ಚು ತೀವ್ರವಾಗಿ ಹರಡುತ್ತಿದ್ದರಿಂದ ಕಾರವಾರದಿಂದ ಅಗ್ನಿಶಾಮಕ ವಾಹನಗಳನ್ನು ಕರೆಯಿಸಿಕೊಂಡು ಬೆಂಕಿ ನಿಯಂತ್ರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಂತ್ರಿಕ ದೋಷದಿಂದ ಈ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಯಾವುದೇ ಜೀವ ಹಾನಿಯಾಗಿಲ್ಲ. ಆದರೆ ನೌಕಾಪಡೆಯ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ.