ಮಂಗಳೂರು:
ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡು, ಬಳಿಕ ಆಕೆಯ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ರಾಯಚೂರಿನ 22 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಯಮನೂರ, ತಾನು ವಾಮಂಜೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂದು ಹೇಳಿಕೊಂಡು, ಇನ್‌ಸ್ಟಾಗ್ರಾಮ್‌ನಲ್ಲಿ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಜೊತೆ ಸ್ನೇಹ ಬೆಳೆಸಿದ್ದಾನೆ. ನಂತರ ಕದ್ರಿ ದೇವಸ್ಥಾನ ಮತ್ತು ಮಂಗಳೂರಿನ ತಣ್ಣಿರಭಾವಿ ಬೀಚ್‌ನಲ್ಲಿ ಭೇಟಿಯಾದ ಸಂದರ್ಭದಲ್ಲಿ ತಮ್ಮಿಬ್ಬರ ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ.
ನಂತರ ಆ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ ಆರೋಪಿ, ಯುವತಿಯನ್ನು ಬೆಂಗಳೂರಿನ ನೆಲಮಂಗಲದ ಲಾಡ್ಜ್‌ಗೆ ಕರೆದೊಯ್ದು, ನಂತರ ಮಂಗಳೂರಿನ ಕಿನ್ನಿಗೋಳಿಯಲ್ಲಿರುವ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಮತ್ತು ಆಕೆಯ ನಗ್ನ ಚಿತ್ರಗಳನ್ನು ತೆಗೆದಿದ್ದಾನೆ.
ಬಳಿಕ ಆರೋಪಿಯು ವಿದ್ಯಾರ್ಥಿನಿಯ ನಗ್ನ ಚಿತ್ರಗಳನ್ನು ಆಕೆಯ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಹಂಚಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಆ ಚಿತ್ರಗಳನ್ನು ತೆಗೆದು ಹಾಕಲು 1.50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಬಳಿಕ ವಿದ್ಯಾರ್ಥಿನಿ ಮಂಗಳವಾರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಮಂಗಳೂರಿನಲ್ಲಿ ಬುಧವಾರ ಬಂಧಿಸಿದ್ದಾರೆ.
ಆರೋಪಿ ಬೀದಿ ನಾಟಕ ಕಲಾವಿದನಾಗಿದ್ದು, ನಾಟಕ ಪ್ರದರ್ಶನದ ವೇಳೆ ಧರಿಸಿದ್ದ ಪೊಲೀಸ್ ಸಮವಸ್ತ್ರವನ್ನು ವಿದ್ಯಾರ್ಥಿನಿಗೆ ತೋರಿಸಿ, ತಾನು ನಿಜವಾದ ಪೋಲೀಸ್ ಅಧಿಕಾರಿ ಎಂದು ನಂಬುವಂತೆ ಮಾಡಿದ್ದಾನೆ. ಅಲ್ಲದೆ ತನ್ನ ಪ್ರಭಾವ ಬಳಸಿಕೊಂಡು ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ವಿದ್ಯಾರ್ಥಿನಿಯ ಸಂಬಂಧಿಕರೊಬ್ಬರ ದಾಖಲೆಗಳನ್ನೂ ತೆಗೆದುಕೊಂಡಿದ್ದಾನೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.