Home ಬೆಂಗಳೂರು ನಗರ ಮುಂದಿನ ಚುನಾವಣೆಗೆ ಜೆಡಿಎಸ್‌ ನೇತೃತ್ವದಲ್ಲಿ ‘ಕನ್ನಡಗರ ಮಹಾಮೈತ್ರಿಕೂಟ’: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುಳಿವು

ಮುಂದಿನ ಚುನಾವಣೆಗೆ ಜೆಡಿಎಸ್‌ ನೇತೃತ್ವದಲ್ಲಿ ‘ಕನ್ನಡಗರ ಮಹಾಮೈತ್ರಿಕೂಟ’: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುಳಿವು

49
0
bengaluru

ಬೆಂಗಳೂರು:

ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನೂ ವರ್ಷ ಇರುವಾಗಲೇ ಸದ್ದಿಲ್ಲದೆ ಸಿದ್ಧತೆಗಳನ್ನು ಆರಂಭಿಸಿರುವ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು; ಕನ್ನಡ ಸಂಘಟನೆಗಳು, ರೈತ ಮುಖಂಡರು, ನೀರಾವರಿ ಹೋರಾಟಗಾರರು, ದಲಿತ ನಾಯಕರು ಒಳಗೊಂಡ ʼಕನ್ನಡಿಗರ ಮಹಾಮೈತ್ರಿಕೂಟʼ ರಚನೆ ಮಾಡುವ ಸುಳಿವು ನೀಡಿದ್ದಾರೆ.

ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಕನ್ನಡಿಗರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ನೋಡುತ್ತಿರುವುದಕ್ಕೆ ಸಡ್ಡು ಹೊಡೆಯಲು ನಿರ್ಧರಿಸಿರುವ ಅವರು; ನಾಡು, ನುಡಿ, ನೆಲ, ಜಲ ಸೇರಿದಂತೆ ಕರ್ನಾಟಕ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ʼಕನ್ನಡಿಗರ ಪ್ರಾದೇಶಿಕ ಸರಕಾರʼ ತರುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ವರ್ಷಕ್ಕೆ ಮುನ್ನವೇ ಹೊಸ ಹೆಜ್ಜೆ ಇರಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಚುನಾವಣೆಗೆ ಇನ್ನೂ ೧೪ ತಿಂಗಳ ಸಮಯವಿದೆ. ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದೇನೆ. ಈಗಾಗಲೇ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಮಾಡಿದ್ದೇನೆ. ಅದೇ ರೀತಿ ರೈತರು, ದಲಿತ ಮುಖಂಡರು, ನೀರಾವರಿ ಹೋರಾಟಗಾರರನ್ನು ಕೂಡ ಸದ್ಯದಲ್ಲೇ ಭೇಟಿ ಮಾಡಲಿದ್ದೇನೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಸರಕಾರ ತರಬೇಕು. ಕನ್ನಡಿಗರದ್ದೇ ಸರಕಾರ ತರಲು ʼಕನ್ನಡಿಗರ ಮಹಾಮೈತ್ರಿಕೂಟʼವನ್ನು ಚುನಾವಣೆಗೆ ಮುನ್ನವೇ ರಚನೆ ಮಾಡಲು ಸಿದ್ಧತೆ ನಡೆಸಿದ್ದೇನೆ. ಇನ್ನೆರಡು ತಿಂಗಳಲ್ಲಿ ಅದರ ರೂಪುರೇಷೆಯ ಜನತೆಗೆ ತಿಳಿಯಲಿದೆ” ಎಂದರು.

bengaluru

ರಾಜ್ಯವನ್ನು ರಾಷ್ಟ್ರೀಯ ಪಕ್ಷಗಳು ಹಾಳು ಮಾಡಿದ್ದು ಸಾಕು. ಕನ್ನಡಿಗರ ಹಿತಾಸಕ್ತಿಗಳನ್ನು ಅವರು ಕಡೆಗಣಿಸಿ ರಾಜ್ಯವನ್ನು ದುಃಸ್ಥಿತಿಗೆ ದೂಡಿದ್ದೂ ಸಾಕು. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಅವರು ಹೇಳಿದರು.

ನಮ್ಮ ಗುರಿ 123 ಕ್ಷೇತ್ರ:

ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರಕಾರ ಬರುತ್ತದೆ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕಚ್ರಿಯಿಸಿದ ಅವರು; “ಈಗಿನ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೆ ಹೇಳಿದ್ದಾರೆ. ನಾನು ಸಹ ಮೊನ್ನೆ ಒಂದು ಕಡೆ ಹೇಳಿದ್ದೆ. ಜೆಡಿಎಸ್ ಬಿಟ್ಟು ಯಾರೂ ಸರಕಾರ ಮಾಡಲಿಕ್ಕೆ ಆಗಲ್ಲ ಎಂದಿದ್ದೆ. ಹಾಗೆಂದ ಮಾತ್ರಕ್ಕೆ 123 ಸ್ಥಾನಕ್ಕಿಂತ ಕೆಳಗೆ ಬರುತ್ತೇವೆ ಎಂದಲ್ಲ. ನಮ್ಮ ಗುರಿ 123 ಸ್ಥಾನ ಗೆಲ್ಲುವುದು. ಮುಂದಿನ ಚುನಾವಣೆಗೆ ಈ ಗುರಿ ಇಟ್ಟುಕೊಂಡೇ ಹೊರಟಿದ್ದೇವೆ” ಎಂದರು ಅವರು.

123 ಸ್ಥಾನ ಗೆಲ್ಲಲೇಬೇಕೆಂಬ ಛಲ ನಮ್ಮ ಪಕ್ಷದ್ದು. ಅದು ದೊಡ್ಡ ಸವಾಲು ಎನ್ನುವ ಅರಿವೂ ನನಗಿದೆ. ದೇವೇಗೌಡರ ಹೇಳಿಕೆ ಇವತ್ತಿನ ಪರಿಸ್ಥಿತಿಯನ್ನು ಬಿಂಬಿಸುವಂತಿದೆ. ಇಂದಿನ ಸ್ಥಿತಿಯಲ್ಲಿ ಯಾರಿಗೂ ಬಹುಮತ ಬರವುದಿಲ್ಲ. ಇದು ರಾಜಕೀಯ ಪಂಡಿತರ ಲೆಕ್ಕಾಚಾರ, ಈ ಹಿನ್ನೆಲೆಯಲ್ಲಿ ಅವರು ಹೇಳಿದ್ದಾರೆ. ಇನ್ನೂ ಒಂದು ವರ್ಷ ಸಮಯವಿದ್ದು, ಏನು ಬೇಕಾದರೂ ಆಗಬಹುದು. ಈಗ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಬಿಜೆಪಿಗೆ ಭಾರೀ ಪೈಪೋಟಿ ನೀಡುತ್ತಿದೆ. ಅದೇ ರೀತಿ‌ ಕರ್ನಾಟಕದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು ಪ್ರಾದೇಶಿಕ ಪಕ್ಷವನ್ನು ಜನ ಬೆಂಬಲಿಸಿ, ಪ್ರಾದೇಶಿಕ ಹಿನ್ನೆಲೆಯುಳ್ಳ ಕನ್ನಡಿಗರ ಸರಕಾರ ತರುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಈ ನಿಟ್ಟಿನಲ್ಲಿ ಸಂಘಟನೆಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಹೇಳಿದರು.

ಹಿಜಾಬ್‌, ಕೇಸರಿ ಶಾಲು; ಸರಕಾರಕ್ಕೆ ಸಲಹೆ:

ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಬಂದ್‌ ಆಗಿರುವ ಶಾಲೆ ಕಾಲೇಜುಗಳನ್ನು ತೆರೆಯುವ ಮುನ್ನ ಸರಕಾರ ಮಕ್ಕಳ ಹಿತೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಮಾಜಿ ಮುಖ್ಯಮಂತ್ರಿಗಳು ಸಲಹೆ ಮಾಡಿದರು.

ಯಾವುದೇ ಕಾರಣಕ್ಕೂ ಶಾಲೆ-ಕಾಲೇಜುಗಳಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರ ಸೂಕ್ತ, ಬಿಗಿ ಕ್ರಮಗಳನ್ನು ವಹಿಸಲಿ. ಈ ಹಿಂದಿನಂತೆ ಗಲಾಟೆ ನಡೆಯದಂತೆ ನೋಡಿಕೊಳ್ಳಬೇಕು. ಹಿಂದಿನ ವಾರ ರಾಜ್ಯದ ವಿವಿಧೆಡೆ ಆಗಿದ್ದಂತೆ ಅಶಾಂತಿ ಉಂಟಾಗಬಾರದು. ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಸರಕಾರ ಉಪೇಕ್ಷೆ ಮಾಡಬಾರದು. ರಾಜ್ಯ ಸರಕಾರದ ಜತೆಗೆ ಶಾಲಾ ಕಾಲೇಜುಗಳ ಆಡಳಿತ ಮಂಡಗಳು ಕೂಡ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆ ನಾನೇ ನಡೆಸುವೆ:

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭೆ ಚುನಾವಣೆ ಅಭ್ಯರ್ಥಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ:

ಈಚೆಗೆ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಕಾರ್ಯಕರ್ತರು ಈ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿ ಯಾರು? ಎಂದು ಕೇಳಿದರು. ಅದಕ್ಕೆ ನಾನೇ ಬರ್ತೀನಿ, ನಡೆಯಿರಿ ಎಂದು ಹೇಳಿದ್ದೆ. ನಾನೇ ಬರುತ್ತೇನೆ ಅಂದರೆ ಚುನಾವಣೆಗೆ ನಾನೇ ನಿಲ್ಲುತ್ತೇನೆ ಎಂದಲ್ಲ. ಹಿಂದೆ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣೆ ನಡೆಸಿದಂತೆ ಮುಂದಿನ ಬಾರಿ ಚುನಾವಣೆ ನಡೆಸಲು ಬರುತ್ತೇನೆ ಎಂದರ್ಥ. ಈ ಬಗ್ಗೆ ಗೊಂದಲ ಏನೂ ಇಲ್ಲ ಎಂದರು ಕುಮಾರಸ್ವಾಮಿ ಅವರು.

ಹಿಂದೆ ಹತ್ತು ದಿನಗಳ ಕಾಲ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಳ್ಳಿಹಳ್ಳಿಗೂ ಭೇಟಿ ನೀಡಿ ಚುನಾವಣೆ ಕೆಲಸ ಮಾಡಿದ್ದೇನೆ. ನಮ್ಮ ಅಭ್ಯರ್ಥಿಗಾಗಿ ಹಗಲಿರುಳೂ ದುಡಿದಿದ್ದೇನೆ. ಅದೇ ರೀತಿ ಮುಂದೆ ನಿಂತು ನಾಯಕತ್ವ ವಹಿಸಿಕೊಂಡು ಕೆಲಸ ಮಾಡುತ್ತೇನೆ ಎಂದಿದ್ದೇನೆ. ಅದರ ಹೊರತಾಗಿ ನಾನೇ ಬಂದು ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದೆನಾ? ಇಲ್ಲ. ಅದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಕಾಂಗ್ರೆಸ್‌ ರಾಮನಗರದಲ್ಲಿ ಬೆಳೆಯಲು ಅಸಾಧ್ಯ:

ಏನೇ ಸರ್ಕಸ್‌ ಮಾಡಿದರೂ ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವೂ ಬೆಳೆಯುವುದು ಕಷ್ಟ. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಬೇರೂರಲು ಸಾಧ್ಯವೇ ಇಲ್ಲ. ಇನ್ನು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಶೀಘ್ರವೇ ತೀರ್ಮಾನ ಮಾಡುತ್ತೇನೆ. ರಾಮನಗರ ನನ್ನ ಕರ್ಮಭೂಮಿ. ರಾಜಕೀಯವಾಗಿ ನನಗೆ ಜನ್ಮ ನೀಡಿದ ಕ್ಷೇತ್ರವಿದು. ಯಾವುದೇ ಕಾರಣಕ್ಕೂ ಈ ಕ್ಷೇತವನ್ನು ಬಿಟ್ಟು ಕೊಡಲ್ಲ. ಬೇರೆ ಪಕ್ಷಗಳ ಪಾಲಾಗಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಅವರು ಸ್ಪರ್ಧೆ ಮಾಡುವ ಬಗ್ಗೆ ಜೆಡಿಎಸ್ ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ. ನನ್ನ ಕಾರ್ಯಕರ್ತರು ಬಲಾಢ್ಯರಿದ್ದಾರೆ. ಚುನಾವಣೆಗೆ ಇನ್ನೂ ಸಮಯವಿದ್ದು, ಸಮಯ ಬಂದಾಗ ಕಾರ್ಯಕರ್ತರೇ ನಿರ್ಧಾರ ಮಾಡುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ರಾಮನಗರ ಕ್ಷೇತ್ರದ ಕೆಲಸ ಮಾಡಿದ್ದೇನೆ:

ನನ್ನ ಕೆಲಸದ ಬಗ್ಗೆ ಯಾರೂ ಚರ್ಚೆ ಮಾಡಲು ಸಾಧ್ಯವಿಲ್ಲ. ರಾಮನಗರದ ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಯಾವುದೇ ರೀತಿಯಲ್ಲಿ ಶಾಸಕ ಸ್ಥಾನವನ್ನು ದುರುಪಯೋಗ ಮಾಡಿಕೊಂಡಿಲ್ಲ. ಯಾವುದೇ ಸುಳ್ಳು ದಾಖಲೆ ಸೃಷ್ಟಿಸಿ ಭೂಮಿ ಮಾರಾಟ ಮಾಡಿಲ್ಲ. ರಾಮನಗರದಲ್ಲಿ ಶಾಸಕನಾಗಿ ಯಾವ ರೀತಿ ಬದುಕು ನಡೆಸಿದ್ದೇನೋ ಹಾಗೆ ಇವತ್ತೂ ಹಾಗೆಯೇ ಬದುಕುತ್ತಿದ್ದೇನೆ. ಯಾರಿಂದಲೂ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ನನಗೆ ಇಲ್ಲ ಎಂದು ಮಾಜಿ ಸಿಎಂ ಅವರು ತಮ್ಮ ಟೀಕಾಕಾರರಿಗೆ ತಿರುಗೇಟು ಕೊಟ್ಟರು.

ಮಾಕಳಿ ಏತ ನೀರಾವರಿ ವಿಚಾರದಲ್ಲಿ ಸಿ.ಪಿ.ಯೋಗೇಶ್ವರ ಅವರ ಬೆಂಬಲಿಗರ ಹೇಳಿಕೆ ಗಮನಿಸಿದ್ದೇನೆ. 15 ಕೋಟಿ ರೂ. ವೆಚ್ಚದ ಕಾರ್ಯಕ್ರಮವಂತೆ ಅದು. ಟೆಂಡರ್ ಆಗಿದೆ ಎಂದಿದ್ದಾರೆ ಅವರು. ನಾವೇ ಯೋಜನೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಲ್ಲೇ ಜನರಿಗೆ ಅರ್ಥವಾಗಬೇಕಿತ್ತು. ಸತ್ಯ ಸಂಗತಿ ಏನೆಂದರೆ; ಮಾಕಳಿ ಏತ ನೀರಾವರಿ ಯೋಜನೆ 28 ಕೋಟಿ ರೂ. ವೆಚ್ಚದ ಯೋಜನೆ. ಸಣ್ಣ ನೀರಾವರಿ ಇಲಾಖೆ ಜಾರಿ ಮಾಡುತ್ತಿರುವ ಯೋಜನೆ ಅದು. ನಾನು ಮುಖ್ಯಮಂತ್ರಿ ಆಗಿದ್ದಾಗ ನಿರ್ಧಾರ ತೆಗೆದುಕೊಂಡಿದ್ದೆ. ಈಗಿನ ಸರಕಾರದಲ್ಲಿ ನಾನೇ ಒಪ್ಪಿಗೆ ಕೊಡಿದ್ದೇನೆ. ಭೂಮಿ ಪೂಜೆ ಮಾಡಿದಾಗ ಸೋಲ್ಲೆತ್ತಲಿಲ್ಲ. ಈಗ ಕೆರೆಗೆ ನೀರು ತುಂಬುವ ವೇಳೆ ರಾಜಕೀಯ ಮಾಡಿಕೊಂಡು ಹೊರಟಿದ್ದಾರೆ. ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಅವರು ಟಾಂಗ್‌ ನೀಡಿದರು.

bengaluru

LEAVE A REPLY

Please enter your comment!
Please enter your name here