ಬೆಂಗಳೂರು:
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಅವರು ಅಲ್ಪಸಂಖ್ಯಾತರ ಮತಗಳಿಗಾಗಿ ಹಲ್ಲುಗಿಂಜುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅರಗ ಜ್ಞಾನೇಂದ್ರ,ಅಲ್ಪಸಂಖ್ಯಾತ ಮತಗಳಿಗೋಸ್ಕರ ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ಆರ್‌ಎಸ್‍ಎಸ್ ವಿಚಾರದಲ್ಲಿ ಆಕ್ಷೇಪಣಾರ್ಹ ಟೀಕೆ ಮಾಡುವಲ್ಲಿ ಸ್ಫರ್ಧೆಗಿಳಿದಿದ್ದಾರೆ. ಆರ್‍ಎಸ್‍ಎಸ್ ವಿಶ್ವದಲ್ಲಿ ಅತೀ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂಬುದು ಅವರಿಬ್ಬರಿಗೂ ಗೊತ್ತಿದೆ ಎಂದು ತಿಳಿಸಿದರು.
ಬಿನ್ನಿ ಮಿಲ್ ಭಾಗದಲ್ಲಿ 10 ಸಾವಿರ ಪೊಲೀಸ್ ಕ್ವಾರ್ಟರ್‍ಸ್ ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಈ ಕಟ್ಟಡಗಳ ನಿರ್ಮಾಣವಾದರೆ ಪೊಲೀಸರ ವಸತಿ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಕೆಲವೆಡೆ ಪೊಲೀಸ್ ವಸತಿ ಗೃಹಗಳು ಇದ್ದರೂ ಪೊಲೀಸರು ಅಲ್ಲಿ ವಾಸಿಸುತ್ತಿಲ್ಲ. ಎಚ್‍ಆರ್‍ಎ (ಬಾಡಿಗೆ ಭತ್ಯೆ) ಹೆಚ್ಚು ಪ್ರಮಾಣದಲ್ಲಿ ಸಿಗುತ್ತಿರುವುದೇ ಇದಕ್ಕೆ ಕಾರಣ.ಹಿಂದೆ ವರ್ಷಕ್ಕೆ ಐದಾರು ಪೊಲೀಸ್ ಸ್ಟೇಷನ್ ನಿರ್ಮಿಸಲಾಗುತ್ತಿತ್ತು. ಕಳೆದೆರಡು ವರ್ಷಗಳಲ್ಲಿ 100 ಪೊಲೀಸ್ ಸ್ಟೇಷನ್‍ಗಳ ನಿರ್ಮಾಣಕ್ಕೆ 200 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅರಗ ಜ್ಞಾನೇಂದ್ರ ಉತ್ತರಿಸಿದರು.