Home ಬೆಂಗಳೂರು ನಗರ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಡಿ.ಕೆ. ಶಿವಕುಮಾರ್

ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಡಿ.ಕೆ. ಶಿವಕುಮಾರ್

39
0
Former minister Baburao Chinchansur joins Congress two days after quitting BJP
ಚಿಂಚನಸೂರು ಅವರಿಗೆ ಪಕ್ಷದ ಶಾಲು ಹಾಕುವ ಮೂಲಕ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು.

ಬೆಂಗಳೂರು

ಮಾಜಿ ಸಚಿವ, ಮಾಜಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರು ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಚಿಂಚನಸೂರು ಅವರಿಗೆ ಪಕ್ಷದ ಶಾಲು ಹಾಕುವ ಮೂಲಕ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಶರಣು ಪ್ರಕಾಶ್ ಪಾಟೀಲ್ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ‘ಈಗಾಗಲೇ ಹಳ್ಳಿಗಳಿಂದ ರಾಜ್ಯ ಮಟ್ಟದವರೆಗೆ ನೂರಾರು ಅನ್ಯ ಪಕ್ಷಗಳ ನಾಯಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕೆಲ ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ನಾಲ್ಕೂವರೆ ವರ್ಷಗಳ ಕಾಲ ಅಧಿಕಾರ ಇದ್ದರೂ ಪುಟ್ಟಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರು ಅವರು ಪರಿಷತ್ ಸದಸ್ಯರಾಗಿ ಒಂದೂವರೆ ವರ್ಷಗಳ ಕಾಲ ಅಧಿಕಾರ ಬಾಕಿ ಇದ್ದರೂ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ನಾನು ಅವರು ಜತೆಯಲ್ಲಿ ಅನೇಕ ಬಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇವೆ ಎಂದರು.

ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡವರ ಕಲ್ಯಾಣವಾಗಿ, ಅವರ ಜೀವನ ಭದ್ರಾವಾಗಲಿದೆ. ಈ ಸಮಾಜಕ್ಕೆ ನ್ಯಾಯ ಸಿಗಲಿದೆ ಎಂದು ನಂಬಿಕೆ ಇಟ್ಟು, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ವಿಶ್ವಾಸ ಇಟ್ಟು, ಅವರ ಅನುಯಾಯಿಯಾಗಿ ಪಕ್ಷ ಸೇರುತ್ತಿದ್ದಾರೆ. ಅವರ ರಾಜೀನಾಮೆ ನಿನ್ನೆ ಅಂಗೀಕಾರವಾಗಿದ್ದು, ಇಂದು ಹೊಸ ವರ್ಷದ ಹೊಸ ದಿನ ಆರಂಭವಾಗಲಿ ಎಂದು ಪಕ್ಷಕ್ಕೆ ಸೇರುತ್ತಿದ್ದಾರೆ. ನಾಳೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇಟ್ಟುಕೊಳ್ಳಬೇಕು ಎಂದು ಭಾವಿಸಿದ್ದೆವು. ಪ್ರಿಯಾಂಕ್ ಖರ್ಗೆ ಅವರು ಊರಿನಲ್ಲಿ ಇಲ್ಲ. ಈ ಸಂದರ್ಭದಲ್ಲಿ ಒಂದು ದಿನವೂ ವ್ಯರ್ಥ ಮಾಡುವುದು ಬೇಡ ಎಂದು ಈ ಶುಭದಿನ ಪಕ್ಷಕ್ಕೆ ಸೇರುತ್ತಿದ್ದಾರೆ. ಪಕ್ಷದ ಎಲ್ಲ ನಾಯಕರ ಜತೆ ಚರ್ಚೆ ಮಾಡಿ ಅವರನ್ನು ಬಹಳ ಸಂತೋಷದಿಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

Also Read: Former minister Baburao Chinchansur joins Congress two days after quitting BJP

‘ನಾಡಿನ ಜನರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷ ಹೊಸ ಆಯಾಮ, ಹೊಸ ಬದಲಾವಣೆ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಈಗ ರಾಜ್ಯದಲ್ಲಿ ಬದಲಾವಣೆ ತರಲು ದೇವರು ಒಂದು ಅವಕಾಶ ಕಲ್ಪಿಸಿದ್ದಾನೆ. ನಾವು ರಾಜ್ಯದ ಜನರಿಗೆ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದು ನಾವು ನುಡಿದಂತೆ ನಡೆಯುತ್ತೇವೆ. ನಾವು ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದು, ನಮ್ಮ ನಿರೀಕ್ಷೆಗೂ ಮೀರಿ ಜನರಿಂದ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದರು.

ಬೊಮ್ಮಾಯಿ ಅವರು ಮತ್ತೆ ತಾವೇ ಸಿಎಂ ಆಗುತ್ತೇನೆ ಎಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಅಮಿತ್ ಶಾ ಆರಂಭದಲ್ಲಿ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಹೇಳಿದ್ದರು. ನಂತರ ಮೋದಿ ಮುಖ ನೋಡಿ ಮತ ನೀಡಿ ಎಂದಿದ್ದಾರೆ. ಅಲ್ಲಿಗೆ ಬೊಮ್ಮಾಯಿ ನಾಯಕತ್ವದ ಮೇಲೆ ನಂಬಿಕೆ ಇಲ್ಲವಾಗಿದೆ ಎಂಬುದು ಸ್ಪಷ್ಟವಾಗಿದೆ. ಬೊಮ್ಮಾಯಿ ಅವರು ಅವರು ನಮ್ಮ ಗ್ಯಾರಂಟಿ ಕಾರ್ಡನ್ನು ಬೋಗಸ್ ಕಾರ್ಡ್ ಎಂದಿದ್ದಾರೆ. ನಾನು ಕೆಲ ದಿನಗಳಲ್ಲಿ ಅವರ ಪ್ರಣಾಳಿಕೆ ಮುಂದಿಟ್ಟು ಯಾರದ್ದು ಬೋಗಸ್ ಎಂದು ಹೇಳುತ್ತೇನೆ. ನಾನು ಅವರ ಜತೆ ಚರ್ಚೆ ಮಾಡಲು ಸಿದ್ಧ. ನಮ್ಮ ಸ್ಥಾನಮಾನಕ್ಕೆ ತಕ್ಕಂತ ಯಾವುದೇ ನಾಯಕರು ಮುಂದೆ ಬಂದರೆ ಯಾವುದೇ ವೇದಿಕೆಯಲ್ಲಿ ಚರ್ಚೆ ಮಾಡಲು ಸಿದ್ಧ. ನಾವು ಬಸವಣ್ಣ, ಶಿಶುನಾಳ ಶರೀಫರ ನಾಡಿನಿಂದ ಬಂದಿದ್ದು, ಕೊಟ್ಟ ಮಾತಿನಂತೆ ನಡೆಯುತ್ತೇವೆ. ನಾವು ಘೋಷಿಸಿರುವ ಕಾರ್ಯಕ್ರಮಗಳನ್ನು ಜಾರಿ ಮಾಡಿಯೇ ತೀರುತ್ತೇವೆ.

ನಾವು ಮುಂದಿನ ದಿನಗಳಲ್ಲಿ ಸಂಸತ್ ಚುನಾವಣೆ ಎದುರಿಸಲಿದ್ದು, ಈ ಯೋಜನೆಗಳನ್ನು ಹೇಗೆ ಜಾರಿ ಮಾಡಬಹುದು ಎಂದು ತಿಂಗಳು ಗಟ್ಟಲೆ ಚರ್ಚೆ ಮಾಡಿದ್ದೇವೆ. ನಾವು ಬಿಜೆಪಿಯವರಂತೆ ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿ ಮತ ಪಡೆದು ಮೋಸ ಮಾಡುವುದಿಲ್ಲ. ನಾವು ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುತ್ತೇವೆ’ ಎಂದರು.

ಸಿದ್ದರಾಮಯ್ಯ ಅವರನ್ನು ಸೋಲಿಸಲು ಷಡ್ಯಂತ್ರ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ‘ಸಿದ್ದರಾಮಯ್ಯ ಅವರ ಬಗ್ಗೆ ಕುಮಾರಸ್ವಾಮಿ ಅವರು ಪ್ರೀತಿ ತೋರುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೇಳಿದಾಗ ಕುಮಾರಸ್ವಾಮಿ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರು ನಮ್ಮ ಶಾಸಕಾಂಗ ಪಕ್ಷದ ನಾಯಕರು. ಅವರು ತಮ್ಮನ್ನು ಗೆಲ್ಲಿಸಿದ ಜನರ ಋಣ ತೀರಿಸಬೇಕು ಎಂದು ಬಾದಾಮಿ ಕ್ಷೇತ್ರದಲ್ಲಿ ಹೆಚ್ಚಿನ ಅಬಿವೃದ್ಧಿ ಮಾಡಿ ಕ್ಷೇತ್ರದ ಚಿತ್ರಣ ಬದಲಿಸಿದ್ದಾರೆ. ಮೈಸೂರಿನಲ್ಲಿ ಅವರದೇ ಆದ ಕೊಡುಗೆ ದೆ. ಅವರು ಹೈಕಮಾಂಡ್ ಒಪ್ಪಿದರೆ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಹೈಕಮಾಂಡ್ ಕೂಡ ನನಗೆ ಮತ್ತು ಅವರಿಗೆ ರಾಜ್ಯ ಪ್ರವಾಸದ ಜವಾಬ್ದಾರಿ ನೀಡಿದ್ದು, ಹೆಚ್ಚು ಸಮಯ ವ್ಯರ್ಥ ಮಾಡುವುದು ಬೇಡ ಎಂದು ಹೇಳಿದ್ದಾರೆ. ನನಗೂ ಕೆಲವು ಕ್ಷೇತ್ರಗಳಲ್ಲಿ ಆಹ್ವಾನ ಇದೆ. ಆದರೆ ನಾನು ನನ್ನ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ. ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧಿಸಬೇಕು ಎಂಬ ತೀರ್ಮಾನವನ್ನು ಅವರಿಗೆ ಬಿಡಲಾಗಿದೆ. ಹೈಕಮಾಂಡ್ ಕೂಡ ಅವರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ, ನಾನು ಕೂಡ ಹೇರುವುದಿಲ್ಲ. ಅವರು ಎಲ್ಲಿ ಸ್ಪರ್ಧಿಸುತ್ತಾರೋ ನಾನು ಅಲ್ಲಿ ಅವರ ಬೆಂಬಲವಾಗಿ ನಿಲ್ಲುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆ ರಾಜ್ಯವನ್ನು ಸಾಲದ ಕೂಪಕ್ಕೆ ಕೊಂಡೊಯ್ಯುತ್ತಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ‘ನೀವು ಬಿಜೆಪಿಯ ಪ್ರಣಾಳಿಕೆ ತೆಗೆದು ನೋಡಿ. ಜ.16ರಂದು ಅವರು ಸರ್ಕಾರದ ವತಿಯಿಂದ ಜಾಹೀರಾತು ನೀಡಿ ಏನು ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ರೈತರಿಗೆ 10 ಗಂಟೆ ವಿದ್ಯುತ್ ನೀಡುವುದಾಗಿ ಯಾಕೆ ಹೇಳಿದ್ದಾರೆ? ಇನ್ನು ಸಾಲ ಮನ್ನಾ ವಿಚಾರವಾಗಿ ಹೇಗೆ ಭರವಸೆ ನೀಡಿದ್ದರು? ಈ ಬಗ್ಗೆ ಅವರು ಮೊದಲು ಉತ್ತರ ನೀಡಲಿ’ ಎಂದು ತಿಳಿಸಿದರು.

ವೈಎಸ್ ವಿ ದತ್ತಾ ಅವರ ಆಡಿಯೋ ಕುರಿತು ಕೇಳಿದಾಗ, ‘ರಾಜಕೀಯದಲ್ಲಿ ಹೂವಿನ ಹಾರ ಹಾಕುವವರೂ ಇರುತ್ತಾರೆ. ಕಲ್ಲು ಹೊಡೆಯುವವರೂ ಇರುತ್ತಾರೆ. ನಾವು ಎಲ್ಲರ ಸಲಹೆ, ಅಭಿಪ್ರಾಯವನ್ನು ಸ್ವೀಕಾರ ಮಾಡುತ್ತೇವೆ. ಅವರು ಹಿರಿಯರಿದ್ದಾರೆ. ಅವರನ್ನು ಮೇಸ್ಟ್ರು ಎಂದು ಸ್ವೀಕಾರ ಮಾಡಿದ್ದೇವೆ. ಅವರ ಮಾತನ್ನು ನಾವು ಆಶೀರ್ವಾದ ಎಂದು ಸ್ವೀಕರಿಸಿ ಅವರ ಜತೆ ಕೆಲಸ ಮಾಡುತ್ತೇವೆ’ ಎಂದರು.

ಪಕ್ಷದಲ್ಲಿ ಟಿಕೆಟ್ ವಿಚಾರವಾಗಿ ಮೂಲ ಕಾಂಗ್ರೆಸಿಗರು ಹಾಗೂ ವಲಸಿಗರ ನಡುವಣ ಸಂಘರ್ಷದ ಬಗ್ಗೆ ಕೇಳಿದಾಗ, ‘ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಭಾವನೆ ಎಲ್ಲರಿಗೂ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಹಾಗೂ ದಳದವರಿಗೂ ಗೊತ್ತಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇನ್ನು ಅರ್ಜಿ ಹಾಕುವವರು ಇದ್ದಾರೆ. ಚಿಂಚನಸೂರು ಅವರು ಕೂಡ ಅರ್ಜಿ ಹಾಕಬೇಕಿದೆ. ಯಾರು ಕ್ಷೇತ್ರದಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಾರೆ ಅವರಿಗೆ ಅನೇಕ ಅವಕಾಶಗಳಿವೆ. 75 ಪರಿಷತ್, 12 ರಾಜ್ಯಸಭಾ, ಲೋಕಸಭಾ ಹಾಗೂ ನಿಗಮ ಮಂಡಳಿಗಳಿವೆ. ಎಲ್ಲರಿಗೂ ಅಧಿಕಾರವನ್ನು ಹಂಚುತ್ತೇವೆ’ ಎಂದರು.

ಟಿಕೆಟ್ ಯಾವಾಗ ಎಂದು ಕೇಳಿದಾಗ, ‘ಇಂದು ಪ್ರಕಟಿಸುವ ಉದ್ದೇಶವಿತ್ತು. ಆದರೆ ಹಬ್ಬದ ಆಚರಣೆ ಹಿನ್ನೆಲೆಯಿಂದ ನಾಳೆ ನಾಡಿದ್ದು ಪ್ರಕಟಿಸುತ್ತೇವೆ’ ಎಂದು ತಿಳಿಸಿದರು.

ಖರ್ಗೆ ಅವರ ಮೇಲೆ ಕೋಪಗೊಂಡು ನೀವು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಿರಿ ಎಂದು ಚಿಂಚನಸೂರು ಅವರನ್ನು ಕೇಳಿದಾಗ, ‘ತಂದೆ ಮಗನ ಜಗಳ ಇದ್ದೇ ಇರುತ್ತದೆ. ಅದು ಈಗ ಸರಿ ಹೋಗಿದೆ‘ ಎಂದು ಉತ್ತರಿಸಿದರು.

ಖರ್ಗೆ ಅವರನ್ನು ಸೋಲಿಸುತ್ತೇನೆ ಎಂದು ಬಿಜೆಪಿ ಕಚೇರಿಯಲ್ಲಿ ತೊಡೆ ತಟ್ಟಿದ್ದವರು ಈಗ ಅವರ ಪಕ್ಷ ಸೇರುತ್ತಿದ್ದೀರಿ, ಇದು ಅವಕಾಶವಾದಿ ರಾಜಕಾರಣವಲ್ಲವೇ ಎಂದು ಕೇಳಿದಾಗ, ‘ನಾನು ಅವಕಾಶವಾದಿ ರಾಜಕಾರಣ ಮಾಡುವ ಅಗತ್ಯವಿಲ್ಲ. ನನಗೆ ತಂದೆ, ತಾಯಿ, ಮಕ್ಕಳಿಲ್ಲ. ನಾನು ಮತ್ತು ನನ್ನ ಪತ್ನಿ ಮಾತ್ರ ಇದ್ದೇವೆ. ಸುಮಾರು 30 ವರ್ಷಗಳಿಂಗ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ಪಕ್ಷಕ್ಕೆ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ನೀಡುತ್ತೇನೆ. ಚಿತ್ತಾಪುರದಲ್ಲಿ ಬಿಜೆಪಿ ಹೇಳಹೆಸರಿಲ್ಲದಂತೆ ಮಾಡುತ್ತೇವೆ’ ಎಂದರು.

ನಿಮ್ಮ ಜತೆ ಬಿಜೆಪಿ ಸೇರಿದ್ದವರನ್ನು ಕರೆ ತರುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ‘2023 ರ ಚುನಾವಣೆಯಲ್ಲಿ ಯಾರು ಎಲ್ಲಿರುತ್ತಾರೆ ಎಂದು ಎಲ್ಲರಿಗೂ ತಿಳಿಯಲಿದೆ’ ಎಂದರು.

ಬಾಬುರಾವ್ ಚಿಂಚನಸೂರು ಮಾತನಾಡಿ: “ಮಲ್ಲಿಕಾಂರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ದೇಶವೇ ಗುರುತಿಸುವ ಮಟ್ಟಿಗೆ ಬೆಳೆದಿದ್ದಾರೆ. ಅವರ ಅಧ್ಯಕ್ಷತೆ ಹಾಗೂ ಡಿ.ಕೆ. ಶಿವಕುಮಾರ್ ಅವರ ರಾಜ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ. ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಕೊಡಿಸಿದ್ದು ಶಿವಕುಮಾರ್ ಅವರು. ಅವರ ಸಹಾಯವನ್ನು ನಾನು ಏಳೇಳು ಜನ್ಮಕ್ಕೂ ಮರೆಯಲು ಸಾಧ್ಯವಿಲ್ಲ,” ಎಂದರು.

ಪೈದರಾಬಾದ್ ಕರ್ನಾಟಕ ಖರ್ಗೆ ಅವರ ಭದ್ರಕೋಟೆ, ಅದನ್ನು ಛಿದ್ರ ಮಾಡಬೇಕು ಎಂದು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಆದರೆ ಖರ್ಗೆ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಾನು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಹೈದರಾಬಾದ್ ಕರ್ನಾಟಕದಲ್ಲಿ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ 25 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಂಡ ಗೆಲವು ಸಾಧಿಸಲಿದೆ. 2023ರಲ್ಲಿ ಬಾಬುರಾವ್ ಚಿಂಚನಸೂರು ಸಾಮರ್ಥ್ಯ ಏನು ಎಂದು ತೋರಿಸುತ್ತೇನೆ ಎಂದರು.

LEAVE A REPLY

Please enter your comment!
Please enter your name here