ಬಾಡೂಟಕ್ಕೆ ಕರೆದು ಸ್ನೇಹಿತನ ಕೊಲೆ: ಹಳೆಯ ದ್ವೇಷಕ್ಕೆ ಬಲಿ ಆದ ಯುವಕ
ಬೆಂಗಳೂರು: ನಗರ ಹೊರವಲಯದ ಆನೆಕಲ್ ತಾಲ್ಲೂಕಿನಲ್ಲಿ ಸ್ನೇಹಿತನೇ ಬಾಡೂಟದ ನೆಪದಲ್ಲಿ ಕರೆದುಕೊಂಡು ಹೋಗಿ ಯುವಕನನ್ನು ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಹಳೆಯ ದ್ವೇಷವೇ ಈ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು ಮೋಹನ್ ಎಂದು ಗುರುತಿಸಲಾಗಿದ್ದು, ತಮಿಳುನಾಡು ಮೂಲದವನಾಗಿದ್ದ ಆತ ದ್ವಿಚಕ್ರ ವಾಹನ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಸಂಬಂಧಿಕರ ಮನೆಗೆ ಬಂದಿದ್ದ ಮೋಹನ್, ಏಪ್ರಿಲ್ 16ರಂದು ಸ್ನೇಹಿತ ಮಧು ನೀಡಿದ ಆಹ್ವಾನಕ್ಕೆ ಸ್ಪಂದಿಸಿ ಬಾಡೂಟಕ್ಕೆ ತೆರಳಿದ್ದ.
ಮಧು ಜೊತೆ ಹೊರಟ ಮೋಹನ್, ಮಟ್ಟನಹಳ್ಳಿ ಸಮೀಪದ ಬಾರ್ ಬಳಿ ಹೋಗಿದ್ದು, ಅಲ್ಲಿ ಮುಖ್ಯ ಆರೋಪಿ ಮನೋಜ್ ಕೂಡ ಸೇರಿದ್ದಾನೆ. ಮೂವರು ಮದ್ಯ ಸೇವಿಸಿ ನಂತರ ನಿರ್ಜನ ಪ್ರದೇಶಕ್ಕೆ ತೆರಳಿದ್ದಾರೆ. ಈ ವೇಳೆ ಎರಡು ವರ್ಷಗಳ ಹಿಂದೆ ನಡೆದಿದ್ದ ಸಣ್ಣ ಗಲಾಟೆಯ ವಿಚಾರ ಮತ್ತೆ ಪ್ರಸ್ತಾಪವಾಗಿ ವಾಗ್ವಾದಕ್ಕೆ ಕಾರಣವಾಗಿದೆ.
ವಾಗ್ವಾದ ತೀವ್ರಗೊಂಡಾಗ ಮನೋಜ್ ಮೋಹನ್ ಮೇಲೆ ಹಲ್ಲೆ ನಡೆಸಿ ನೆಲಕ್ಕುರುಳಿಸಿದ ನಂತರ ಕಲ್ಲಿನಿಂದ ಹೊಡೆದು ಕೊಂದು ಹಾಕಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರ ಪ್ರಕಾರ, ಎರಡು ವರ್ಷಗಳ ಹಿಂದೆ ನಡೆದಿದ್ದ ಸಣ್ಣ ವಿಚಾರದಲ್ಲಿ ಮನೋಜ್ಗೆ ಅವಮಾನವಾಗಿದೆ ಎಂಬ ಭಾವನೆ ಮೂಡಿದ್ದು, ಅದಕ್ಕೆ ಸೇಡು ತೀರಿಸಿಕೊಳ್ಳಲು ಈ ಸಂಚು ರೂಪಿಸಿದ್ದಾನೆ. ಮೋಹನ್ ಊರಿಗೆ ವಾಪಸ್ ಬಂದಿರುವುದನ್ನು ತಿಳಿದು ಈ ಕೊಲೆ ಯೋಜನೆ ಜಾರಿಗೆ ತಂದಿದ್ದಾನೆ.
ಕೊಲೆ ಮಾಡಿದ ಬಳಿಕ ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಅಪರಾಧ ಒಪ್ಪಿಕೊಂಡಿದ್ದಾನೆ. ಮಧು ಪಾತ್ರದ ಕುರಿತಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದ್ದು, ಸಣ್ಣ ಗಲಾಟೆಯೂ ಹೇಗೆ ಭೀಕರ ಕೊಲೆಗೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ.
