ಟ್ರಾಫಿಕ್, ಮಾಲಿನ್ಯ ಕಡಿಮೆ ಮಾಡಲು ಜಿಬಿಎ ‘1 ಕಿ.ಮೀ ಚಾಲೆಂಜ್’; ಸಣ್ಣ ದೂರಗಳಿಗೆ ನಡೆದು ಹೋಗುವಂತೆ ಕರೆ
ಬೆಂಗಳೂರು, ಮೇ 31: ಟ್ರಾಫಿಕ್ ದಟ್ಟಣೆ, ವಾಯು ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ‘1 ಕಿ.ಮೀ ಚಾಲೆಂಜ್’ ಅಭಿಯಾನವನ್ನು ಆರಂಭಿಸಿದೆ. ಒಂದು ಕಿಲೋಮೀಟರ್ಗಿಂತ ಕಡಿಮೆ ದೂರದ ಪ್ರಯಾಣಗಳಿಗೆ ವಾಹನಗಳ ಬದಲು ನಡೆದು ಹೋಗುವಂತೆ ನಾಗರಿಕರಿಗೆ ಜಿಬಿಎ ಕರೆ ನೀಡಿದೆ.
ಈ ಅಭಿಯಾನದ ಮೂಲಕ ಸಣ್ಣ ದೂರಗಳಿಗೂ ಆಟೋ ಅಥವಾ ಇತರೆ ವಾಹನಗಳನ್ನು ಬಳಸುವ ಅಭ್ಯಾಸವನ್ನು ಮರುಪರಿಶೀಲಿಸುವಂತೆ ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ. ಒಂದು ಕಿಲೋಮೀಟರ್ಗಿಂತ ಕಡಿಮೆ ದೂರದ ಪ್ರಯಾಣಗಳು ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಟ್ರಾಫಿಕ್ ದಟ್ಟಣೆ, ಇಂಧನ ಬಳಕೆ ಮತ್ತು ವಾಯು ಮಾಲಿನ್ಯಕ್ಕೂ ಕಾರಣವಾಗುತ್ತವೆ ಎಂದು ಜಿಬಿಎ ತಿಳಿಸಿದೆ.
‘1 ಕಿ.ಮೀ ಚಾಲೆಂಜ್’ ಅಡಿಯಲ್ಲಿ ಆಟೋ ಬುಕ್ ಮಾಡುವ ಮೊದಲು “ನಾನು ಇದನ್ನು ನಡೆದು ಹೋಗಬಹುದೇ?” ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ತಮ್ಮನ್ನು ತಾವು ಕೇಳಿಕೊಳ್ಳಬೇಕು ಎಂದು ಜಿಬಿಎ ಸಲಹೆ ನೀಡಿದೆ.
ಜಿಬಿಎ ಪ್ರಕಾರ ಕೇವಲ 10 ನಿಮಿಷಗಳ ನಡಿಗೆ ವ್ಯಕ್ತಿಯ ಕಾರ್ಬನ್ ಹೆಜ್ಜೆಗುರುತನ್ನು ಕಡಿಮೆ ಮಾಡುವುದು, ಆರೋಗ್ಯ ಸುಧಾರಿಸುವುದು, ನಗರದ ರಸ್ತೆಗಳಲ್ಲಿ ಟ್ರಾಫಿಕ್ ಒತ್ತಡ ತಗ್ಗಿಸುವುದು ಹಾಗೂ ಬೆಂಗಳೂರನ್ನು ಹೆಚ್ಚು ಪಾದಚಾರಿ ಸ್ನೇಹಿ ನಗರವನ್ನಾಗಿ ರೂಪಿಸಲು ಸಹಕಾರಿಯಾಗಲಿದೆ.
ನಾಗರಿಕರ ಸಣ್ಣ ಸಣ್ಣ ನಡೆ ಬದಲಾವಣೆಗಳು ಒಟ್ಟಾಗಿ ನಗರದ ಸಂಚಾರ ವ್ಯವಸ್ಥೆ ಮತ್ತು ಪರಿಸರದ ಮೇಲೆ ದೊಡ್ಡ ಮಟ್ಟದ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಪ್ರಾಧಿಕಾರ ತಿಳಿಸಿದೆ.
ಸಣ್ಣ ದೂರಗಳಿಗೆ ವಾಹನ ಬಳಸುವ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಈ ಚಾಲೆಂಜ್ ನೀಡುವ ಮೂಲಕ ಹೆಚ್ಚು ಜನರನ್ನು ನಡೆದು ಹೋಗುವ ಅಭ್ಯಾಸಕ್ಕೆ ಪ್ರೇರೇಪಿಸಲು ಜಿಬಿಎ ಕರೆ ನೀಡಿದೆ. ಸ್ವಚ್ಛ, ಆರೋಗ್ಯಕರ ಮತ್ತು ಪಾದಚಾರಿ ಸ್ನೇಹಿ ಬೆಂಗಳೂರಿನ ನಿರ್ಮಾಣಕ್ಕೆ ಪ್ರತಿಯೊಂದು ಹೆಜ್ಜೆಯೂ ಮಹತ್ವದ್ದಾಗಿದೆ ಎಂದು ಪ್ರಾಧಿಕಾರ ಹೇಳಿದೆ.
