ಮರು ಮಂಜೂರಾತಿಗೆ ಅರ್ಜಿ ಸಲ್ಲಿಸಲು ಒಂದು ವರ್ಷದ ಕಾಲಾವಕಾಶ
ಬೆಂಗಳೂರು:
ಇನಾಂ ಜಮೀನುಗಳ ಮರು ಮಂಜೂರಾತಿ ಅರ್ಜಿ ಸಲ್ಲಿಸುವ ಅವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಲಾಗಿದೆ.
ಇನಾಂ ಜಮೀನುಗಳ ಮರು ಮಂಜೂರಾತಿ ಸಂಬಂಧ ಅರ್ಜಿ ಸಲ್ಲಿಸುವ ಅವಧಿ ಕಳೆದ ವರ್ಷಕ್ಕೆ ಮುಕ್ತಾಯವಾಗಿತ್ತು. ಕಂದಾಯ ಸಚಿವ ಆರ್.ಅಶೋಕ್ ಅವರು ಈ ಸಂಬಂಧ ಡಿಸಂಬರ್ ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಅವಧಿ ವಿಸ್ತರಣೆ ಸಂಬಂಧಿತ ತಿದ್ದುಪಡಿ ವಿಧೇಯಕ ಮಂಡಿಸಿದ್ದರು. ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿರುವುದರಿಂದ ಕಾಯ್ದೆ ಜಾರಿಗೆ ಬಂದಿದ್ದು, ಇದರಿಂದಾಗಿ ಸಾವಿರಾರು ರೈತರಿಗೆ ಅನುಕೂಲವಾಗಲಿದೆ.



ಏನಿದು ಮರು ಮಂಜೂರಾತಿ ಅರ್ಜಿ?
ರಾಜ್ಯದಲ್ಲಿ ಸುಮಾರು 70 ಸಾವಿರ ಎಕರೆ ಇನಾಂ ಜಮೀನು ಇದೆ. ಈ ಹಿಂದೆ ರಾಜ ಮಹಾರಾಜರು ಹಾಗೂ ಬ್ರಿಟಿಷ್ ಕಾಲದಲ್ಲಿ 100 ರಿಂದ ಸಾವಿರ ಎಕರೆ ಪ್ರದೇಶವನ್ನು ಹಲವರಿಗೆ ಇನಾಂ ರೂಪದಲ್ಲಿ ನೀಡಲಾಗಿತ್ತು. ಈ ಜಮೀನಿನಲ್ಲಿ ಕಾಲಕ್ರಮೇಣ ರೈತರು ಬೇಸಾಯ ಮಾಡುತ್ತಿದ್ದರು. ಇನಾಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಪಹಣಿ ಕೊಡುವ ಕೆಲಸ ಸರ್ಕಾರದಿಂದ ನಡೆಯುತ್ತಿತ್ತು. ತಿಳುವಳಿಕೆಯ ಕೊರತೆಯಿಂದ ಲಕ್ಷಾಂತರ ರೈತರು ಅರ್ಜಿ ಸಲ್ಲಿಸದೆ ಸಮಸ್ಯೆಗೆ ಒಳಗಾಗಿದ್ದರು. ಈ ಬಗ್ಗೆ ಚಿಂತನೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ರೈತರಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಸಮಿತಿ ವರದಿ ನೀಡಿತ್ತು, ಅದರಂತೆ ತಿದ್ದುಪಡಿ ವಿಧೇಯಕ ಮಂಡಿಸಲಾಗಿದ್ದು, ಈಗ ಕಾನೂನು ಜಾರಿಯಾಗಿದೆ ಎಂದು ಕಂದಾಯ ಸಚಿವರು ಹೇಳಿದರು.