ಗುರುವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಚಿತ್ರ: ಲಭ್ಯವಾದದ್ದು
ಬೆಂಗಳೂರು: ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ನಂಬಿಕೆ ಮತ್ತು ಸಹಾನುಭೂತಿ ಇದೆ, ಆದರೆ ಬೇಡಿಕೆಗಳ ಬಗ್ಗೆ ಒಂದೇ ದಿನಕ್ಕೆ ತೀರ್ಮಾನ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ತಂಡದ ಪ್ರಕಟಣೆ ತಿಳಿಸಿದೆ. ಸಂಬಂಧಪಟ್ಟ ಸಚಿವರು, ಸಚಿವ ಸಂಪುಟ ಸಭೆ ಹಾಗೂ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದ ಅವರು, ಬೇಡಿಕೆಗಳ ಬಗ್ಗೆ ಚಳಿಗಾಲದ ಅಧಿವೇಶನದ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಹೇಳಿದೆ.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಅವರು, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಹೋರಾಟ ಕೈಬಿಡುವಂತೆ ಆಶಾ ಕಾರ್ಯಕರ್ತೆಯರಲ್ಲಿ ಮನವಿ ಮಾಡಿದ ಅವರು, ಪ್ರತಿಭಟನೆ ಹಿಂಪಡೆಯುವ ವಿಶ್ವಾಸವಿದೆ ಎಂದರು.
ಎಸ್‌ಐಆರ್ ಹಾಗೂ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯ ಕೆಲಸ ಮಾಡಿದ್ದಕ್ಕೆ ಯಾವುದೇ ಗೌರವಧನ ಬಂದಿಲ್ಲ ಎಂದು ಆಶಾ ಕಾರ್ಯಕರ್ತೆಯರು ತಿಳಿಸಿದಾಗ, ಸಮೀಕ್ಷಾ ಕಾರ್ಯಗಳಿಗೆ ಬಳಸಿಕೊಂಡವರಿಗೆ ಗೌರವಧನ ಕೊಡಬೇಕು, ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಆಶ್ವಾಸನೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.
ಗೃಹಲಕ್ಷ್ಮಿ ಯೋಜನೆಯಡಿ ಆಶಾ ಕಾರ್ಯಕರ್ತೆಯರನ್ನು ಸೇರಿಸಬಾರದು ಎಂದಾಗ ಅದನ್ನು ಒಪ್ಪದೆ ಯೋಜನೆ ಕೊಟ್ಟಿದ್ದೇವೆ, ಉಚಿತ ಬಸ್ಸು, ವಿದ್ಯುತ್ ಕೊಟ್ಟಿದ್ದೇವೆ ಎಂದ ಅವರು, “ನನ್ನ ಮೇಲೆ ವಿಶ್ವಾಸವಿರಲಿ. ನಿಮಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ” ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಪಿಂಚಣಿ ಯೋಜನೆ ಜಾರಿ ಮಾಡಿದ್ದು ತಮ್ಮ ಸರ್ಕಾರ ಎಂದ ಶಿವಕುಮಾರ್, ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಹೆಚ್ಚಳ ಮಾಡಿಲ್ಲ, ಕೇಂದ್ರ ಸರ್ಕಾರವನ್ನೂ ಕೇಳಬೇಕು ಎಂದು ಕಾರ್ಯಕರ್ತೆಯರಿಗೆ ಹೇಳಿದರು.
ರಾಜ್ಯದ ಸುಮಾರು 41 ಸಾವಿರ ಆಶಾ ಕಾರ್ಯಕರ್ತೆಯರ ಸೇವೆ ಹಾಗೂ ಅವರ ಆರ್ಥಿಕ ಸಂಕಷ್ಟದ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಸಹಾನುಭೂತಿ ಇದೆ, ಗೌರವಧನ ಹೆಚ್ಚಳದ ಬೇಡಿಕೆಯನ್ನು ತಳ್ಳಿಹಾಕುವುದಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರ ಯೋಜನೆ ಆರಂಭವಾಗಿ ಆಗ ₹200 ನೀಡಲಾಗುತ್ತಿತ್ತು; ಈಗ ಕೇಂದ್ರ ಸರ್ಕಾರ ₹2 ಸಾವಿರ ನೀಡುತ್ತಿದ್ದರೆ ರಾಜ್ಯ ಸರ್ಕಾರ ₹5 ಸಾವಿರ ನೀಡುತ್ತಿದೆ, ಜೊತೆಗೆ ರಾಜ್ಯದಿಂದ ₹1 ಸಾವಿರ ಪ್ರೋತ್ಸಾಹಧನವೂ ಇದ್ದು, ಕೆಲಸದ ಆಧಾರದ ಮೇಲಿನ ಇತರ ಪ್ರೋತ್ಸಾಹಧನ ಸೇರಿ ಒಟ್ಟಾರೆ ಸುಮಾರು ₹8 ಸಾವಿರದವರೆಗೆ ದೊರೆಯುತ್ತಿದೆ ಎಂದು ವಿವರಿಸಿದರು.
ಆಶಾ ಕಾರ್ಯಕರ್ತೆಯರು ತಮ್ಮ ಮಾಸಿಕ ಗೌರವಧನವನ್ನು ₹15 ಸಾವಿರಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದು, ಈ ಬೇಡಿಕೆಯ ವಾಸ್ತವಿಕತೆ ಹಾಗೂ ಸರ್ಕಾರದ ಆರ್ಥಿಕ ಇತಿಮಿತಿಗಳನ್ನು ಅವರಿಗೆ ವಿವರಿಸಲಾಗಿದೆ; ಇದು ಆಶಾ ಕಾರ್ಯಕರ್ತೆಯರ ಬೇಡಿಕೆಯೊಂದೇ ಅಲ್ಲ, ವಿವಿಧ ವರ್ಗಗಳಿಂದಲೂ ಹಲವು ಬೇಡಿಕೆಗಳಿವೆ ಎಂದು ತಿಳಿಸಿದರು.
ಇತರೆ ಯಾವ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂಬ ಪ್ರಶ್ನೆಗೆ, ಒಟ್ಟು ಎಂಟರಿಂದ ಒಂಬತ್ತು ಬೇಡಿಕೆಗಳನ್ನು ಸಲ್ಲಿಸಿದ್ದಾರೆ, ಎಲ್ಲ ಬೇಡಿಕೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು, ಗೃಹ ಸಚಿವರೂ ಈ ವಿಚಾರವಾಗಿ ಮಾತನಾಡಲಿದ್ದಾರೆ, ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ, ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು ಮುಖ್ಯಮಂತ್ರಿಯನ್ನು ಕೃಷ್ಣಾದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
