ಬೆಂಗಳೂರು ಜಾತ್ರೆಯ ಸಿದ್ಧತೆ ಕುರಿತು ಉತ್ತರ ನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು; ಪಾಲಿಕೆ ಹಂಚಿಕೊಂಡ ಚಿತ್ರ. ಚಿತ್ರ: ಜಿಬಿಎ
ಬೆಂಗಳೂರು: ಸಾರ್ವಜನಿಕರ ಸಹಭಾಗಿತ್ವಕ್ಕೆ ಆದ್ಯತೆ ನೀಡಿ ಬೆಂಗಳೂರು ಜಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದರು ಎಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮ ಯೋಜನೆ, ಸಾರ್ವಜನಿಕ ಸೌಕರ್ಯಗಳು, ಅಲಂಕಾರ, ಸ್ವಚ್ಛತೆ ಹಾಗೂ ವಿವಿಧ ಸ್ಪರ್ಧೆಗಳು ಮತ್ತು ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು.
ಜಾತ್ರೆಯ ಕಾರ್ಯಕ್ರಮಗಳು ನಡೆಯುವ ಉದ್ಯಾನಗಳು ಮತ್ತು ಕೆರೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಲು, ಸಾರ್ವಜನಿಕರಿಗೆ ಸಾಕಷ್ಟು ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಕಾರ್ಯಕ್ರಮಗಳು ಒಂದಕ್ಕೊಂದು ಅತಿಕ್ರಮಿಸದಂತೆ ವೇಳಾಪಟ್ಟಿ ರೂಪಿಸಲು ಮತ್ತು ಎಲ್ಲ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಯಲ್ಲಿ ಆಯೋಜಿಸುವ ಕಾರ್ಯಕ್ರಮಗಳ ವಿವರ ಸಲ್ಲಿಸಲು ಸೂಚಿಸಲಾಯಿತು. ಆಚರಣೆಯುದ್ದಕ್ಕೂ ಕಾರ್ಯಕ್ರಮ ಸ್ಥಳಗಳು ಕಸಮುಕ್ತವಾಗಿರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅನುಮತಿ ಪಡೆದ ವ್ಯಾಪಾರಿಗಳು ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸಬೇಕು ಎಂದು ಪ್ರಕಟಣೆ ಹೇಳಿದೆ.
ಜಾತ್ರೆ ಕೇವಲ ಕಾರ್ಯಕ್ರಮ ವೀಕ್ಷಣೆಗೆ ಸೀಮಿತವಾಗದೆ ಜನರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುವಂತಿರಬೇಕು ಎಂದು ಪ್ರಕಟಣೆ ತಿಳಿಸಿದೆ. ಪ್ರತಿಭಾವಂತ ಕಲಾವಿದರ ಸಂಗೀತ ಕಾರ್ಯಕ್ರಮ, ನೃತ್ಯ ಪ್ರದರ್ಶನ, ಆಟಗಳು, ರಂಗೋಲಿ ಸ್ಪರ್ಧೆ ಮತ್ತು ಇತರ ಸಂವಾದಾತ್ಮಕ ಮನರಂಜನಾ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು; ಎಲ್ಲ ವಯೋಮಾನದವರಿಗೂ ಆಸಕ್ತಿದಾಯಕವಾಗುವಂತೆ ಸಾಮಾನ್ಯ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ಯೋಜಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ರಸ್ತೆಬದಿ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಬಣ್ಣದ ಥೀಮ್ ಅಳವಡಿಸಲು ಸೂಚಿಸಲಾಯಿತು. ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳು ಮತ್ತು ಕಾರ್ಯಕ್ರಮ ಸ್ಥಳಗಳಲ್ಲಿ ಅಲಂಕಾರಿಕ ದೀಪಗಳು ಹಾಗೂ ಸೌಂದರ್ಯೀಕರಣವನ್ನು ಲಭ್ಯ ಬಜೆಟ್ ಮತ್ತು ಸಿಎಸ್‌ಆರ್ ಪಾಲುದಾರಿಕೆ ಮೂಲಕ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಜನರು ಕುಟುಂಬ ಸಮೇತ ಬಂದು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹಬ್ಬದ ವಾತಾವರಣ ಆನಂದಿಸುವಂತೆ ಜಾತ್ರೆಯನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಮೋನಾ ರೋಟ್, ಅಪರ ಆಯುಕ್ತರು (ಕಂದಾಯ) ಸತೀಶ್ ಕುಮಾರ್, ಜಂಟಿ ಆಯುಕ್ತರಾದ ಪಲ್ಲವಿ ಮತ್ತು ಮೊಹಮ್ಮದ್ ನಯೀಂ ಮೊಮಿನ್, ಉಪ ಆಯುಕ್ತರಾದ ಅಮರೇಗೌಡ ಮಾಲಿಪಾಟೀಲ್, ಸೋಮಶೇಖರ್ ಮತ್ತು ಮಂಗಳಗೌರಿ, ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳು, ಕಾರ್ಯಪಾಲಕ ಅಭಿಯಂತರರು, ಡಿಜಿಎಂ ಹಾಗೂ ಪಾಲಿಕೆಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ, ಡಿಸೆಂಬರ್ 4ರಿಂದ ಆರಂಭವಾಗಲಿರುವ ಜಾತ್ರೆಗೆ ಕಾರ್ಯಕ್ರಮ ಸ್ಥಳಗಳನ್ನು ಸಿದ್ಧಪಡಿಸಲು ಪೂರ್ವ ನಗರ ಪಾಲಿಕೆಗೆ ಸೂಚಿಸಲಾಗಿತ್ತು.
