Home ಬೆಂಗಳೂರು ನಗರ ಉಕ್ರೇನ್ ನಿಂದ ಆಗಮಿಸಿರುವ ಕನ್ನಡಿಗರನ್ನು ಅವರ ಊರುಗಳಿಗೆ ಕಳುಹಿಸಲು ಸರ್ಕಾರದ ನೆರವು : ಸಿಎಂ ಬಸವರಾಜ...

ಉಕ್ರೇನ್ ನಿಂದ ಆಗಮಿಸಿರುವ ಕನ್ನಡಿಗರನ್ನು ಅವರ ಊರುಗಳಿಗೆ ಕಳುಹಿಸಲು ಸರ್ಕಾರದ ನೆರವು : ಸಿಎಂ ಬಸವರಾಜ ಬೊಮ್ಮಾಯಿ

43
0
Government to help Kannadigas arriving from Ukraine to reach their homes: CM Bommai

ಬೆಂಗಳೂರು:

ಮುಂಬೈ ಅಥವಾ ದಿಲ್ಲಿಗೆ ಇಂದು ಆಗಮಿಸಿರುವ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆತಂದು ಅವರವರ ಊರುಗಳಿಗೆ ಕಳುಹಿಸಲು ಸಹಾಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ದಿಲ್ಲಿಯಲ್ಲಿರುವ ಮುಖ್ಯ ಆಯುಕ್ತರಿಗೂ ಬರುವವರಿಗೆ ಸಾರಿಗೆ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ ಎಂದರು. ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ಯುದ್ಧದಲ್ಲಿ ಕನ್ನಡಿಗ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ಬಗ್ಗೆ ನಿನ್ನೆ ಕೇಂದ್ರ ವಿದೇಶಾಂಗ ಸಚಿವ ಜಯಶಂಕರ್ ಅವರೊಂದಿಗೆ ಮಾತನಾಡಿದ ನಂತರ ಅವರ ಪಟ್ಟಿಯನ್ನು ಸಹ ಕಳುಹಿಸಿಕೊಡಲಾಗಿದೆ. ಪಶ್ಚಿಮ ಭಾಗದಲ್ಲಿರುವವರನ್ನು ರಸ್ತೆ ಮುಖಾಂತರ ಕಳುಹಿಸುವುದು ಎಂದು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದರು. ಆ ಪ್ರಕಾರ ರೋಮಾನಿಯಾ ಮತ್ತಿತರ ಕಡೆಯಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಅವರ ವಿವರಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು.

ಹೆಚ್ಚಿನ ವಿದ್ಯಾರ್ಥಿಗಳು ಖಾರಖೈ ಎಂಬಲ್ಲಿದ್ದಾರೆ. ಅದು ಈಶಾನ್ಯ ಭಾದಲ್ಲಿದ್ದು,ಅವರಿಗೆ ಸುರಕ್ಷಿತ ಸ್ಥಳದಲ್ಲಿರಲು ಸೂಚಿಸಲಾಗಿದೆ. ಹಾಗೂ ಅನಾವಶ್ಯಕವಾಗಿ ರಸ್ತೆಗೆ ಬರುವುದನ್ನು ತಪ್ಪಿಸಲು ತಿಳಿಸಲಾಗಿದೆ. ನಮ್ಮ ಪ್ರಧಾನ ಮಂತ್ರಿಗಳು ರಷ್ಯಾದ ಅಧ್ಯಕ್ಷರೊಂದಿಗೆ ಮಾತನಾಡಿದ್ದು, ಭಾರತೀಯರನ್ನು ಸ್ಥಳಾಂತರ ಮಾಡಲು ಇರುವ ವಿಮಾನಗಳಿಗೆ ಸುರಕ್ಷಿತ ಮಾರ್ಗವನ್ನು ಮಾಡಿಕೊಡುವಂತೆ ಕೋರಿದ್ದಾರೆ. ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ಯುದ್ಧದ ವಾತಾವರಣ ನಿಯಂತ್ರಣಕ್ಕೆ ಬಂದ ಮೇಲೆ ಆ ಪ್ರಕ್ರಿಯೆ ಕೂಡ ಪ್ರಾರಂಭವಾಗಲಿದೆ. ಕೆಲವೇ ದಿನಗಳಲ್ಲಿ ರಸ್ತೆ ಹಾಗೂ ವಿಮಾನಗಳ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ಕರೆತರಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

Also Read: Spoke to Jaishankar to bring back Kannadigas stuck in Ukraine: CM Bommai

ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಿಎಂ:

“ನಾನೂ ಸಹ ಕೆಲವು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ. ವಿಚಾರಗಳನ್ನು ತಿಳಿಸಿ ಸಂಪರ್ಕಿಸುವ ಸಂಖ್ಯೆಗಳನ್ನು ಒದಗಿಸಲಾಗಿದೆ. ಮಾಹಿತಿಗಳನ್ನು ಪಡೆದು ಧೈರ್ಯ ಹೇಳಿದ್ದೇನೆ. ರಷ್ಯಾ ಅಧ್ಯಕ್ಷ ರೊಂದಿಗೆ ನಮ್ಮ ಪ್ರಧಾನಿಗಳು ಮಾತನಾಡಿರುವ ಫಲಶ್ರುತಿಯಿಂದ ಭಾರತೀಯರು ಮತ್ತು ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರಲಾಗುವುದು ಎಂದರು.

ಯುದ್ಧ ನಡೆಯುತ್ತಿರುವುದರಿಂದ ಯಾವುದೇ ವ್ಯವಸ್ಥೆಗಳು ಇಲ್ಲ. ರಷ್ಯಾದವರು ಪ್ರವೇಶಿಸಿರುವ ನಗರ ಭಾಗಗಳಲ್ಲಿ ಬಹಳಷ್ಟು ಅವ್ಯವಸ್ಥೆ ಇದೆ. ಭಾರತೀಯರು ಸಹ ಅಲ್ಲಿ ಸಿಲುಕಿದ್ದಾರೆ. ಯಾವುದೇ ರೀತಿಯ ಅನಾಹುತ ಅಥವಾ ತೊಂದರೆ ಆಗಿಲ್ಲ.ಆದರೆ ಅವರಿಗೆ ಸರಿಯಾದ ಊಟ, ಇರಲು ವ್ಯವಸ್ಥೆ ಇಲ್ಲ. ಬಹಳಷ್ಟು ಜನ ಮೆಟ್ರೋದಲ್ಲಿರುವ ಬಂಕರ್ ಗಳಲ್ಲಿ ಆಶ್ರಯ ಪಡೆದಿದ್ದಾರೆ. ಬಹಳ ಜನ ಅಲ್ಲಿ ಸೇರಿರುವುದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ರಾಜತಾಂತ್ರಿಕವಾಗಿ ಭಾರತದ ಪ್ರಧಾನ ಮಂತ್ರಿಗಳ ಮಾತುಕತೆ ಯಶಸ್ವಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ ಎಂದ ಮುಖ್ಯ ಮಂತ್ರಿಗಳು, ನಮ್ಮ ವಿದೇಶಾಂಗ ಸಚಿವ ಸಹಕಾರದಿಂದ ಉಕ್ರೇನ್ ನಿಗೆ ಹೊಂದಿಕೊಂಡಿರುವ ದೇಶಗಳೊಂದಿಗೆ ಮಾತನಾಡಿ ರಷ್ಯಾ ಭಾಷೆ ತಿಳಿದಿರುವ ರಾಯಭಾರಿಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ರಷ್ಯಾ ದವರ ಮೇಲುಗೈ ಇರುವುದರಿಂದ ಅವರೊಂದಿಗೆ ಮಾತನಾಡಿ ಭಾರತೀಯರನ್ನು ಸುರಕ್ಷಿತವಾಗಿ ಹೊರ ತರಲು ಇದು ಸಹಕಾರಿಯಾಗಲಿದೆ ಎಂದರು.

ಪಶ್ಚಿಮ ಭಾಗದಿಂದ ರಸ್ತೆ ಮೂಲಕ ಕರೆತರಲು ಅವಕಾಶವಿದೆ. ಅದನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಪೂರ್ವ ಭಾಗದಲ್ಲಿರುವರನ್ನು ಕರೆತರಲು ಗಮನ ಹರಿಸಲಾಗಿದೆ. ಕೆಲವು ವಿಮಾನನಿಲ್ದಾಣಗಳು ಯಾರ ನಿಯಂತ್ರಣದಲ್ಲಿಯೂ ಇಲ್ಲದ ಕಾರಣ ಸುರಕ್ಷಿತ ಮಾರ್ಗಗಳ ಮೂಲಕ ಕರೆತರಲಾಗುತ್ತಿದೆ. ಅವರ ಪೈಕಿ ಬರುವ ಕನ್ನಡಿಗರನ್ನು ಊರು ತಲುಪಿಸುವ ಕೆಲಸ ಮಾಡಲಾಗುವುದು. ಅಲ್ಲಿನ ಸಹಾಯವಾಣಿಯೊಂದಿಗೆ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಸರ್ಕಾರದ ಸಹಾಯವಾಣಿಯೂ ಇದೆ. ಕರ್ನಾಟಕದ ಇನ್ನೂರಕ್ಕೂ ಹೆಚ್ವು ಜನ ಸಂಪರ್ಕ ಮಾಡಿದ್ದಾರೆ ಎಂದರು.

ಯುದ್ಧದ ನೀತಿಯಲ್ಲಿ ನಾಗರಿಕರಿಗೆ ತೊಂದರೆಯಾಗುವ ಉದ್ದೇಶವಿರುವುದಿಲ್ಲ. ಆಕಸ್ಮಿಕವಾಗಿ ಒಮ್ಮೊಮ್ಮೆ ಅನಾಹುತಗಳು ಸಂಭವಿಸಬಹುದು. ಉಕ್ರೇನ್ ನಲ್ಲಿರುವ ಭಾರತದ ದೂತವಾಸ ಕಚೇರಿಯವರೂ ಸಹ ಸಂಪರ್ಕದಲ್ಲಿದ್ದಾರೆ ಎಂದರು.

LEAVE A REPLY

Please enter your comment!
Please enter your name here