Home ಬೆಂಗಳೂರು ನಗರ Hampi World Heritage Area | ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮುಂದಿನ ಕ್ರಮಕ್ಕೆ ತೀರ್ಮಾನ:...

Hampi World Heritage Area | ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮುಂದಿನ ಕ್ರಮಕ್ಕೆ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

13
0
Hampi World Heritage Area | Decision on further action based on court verdict: Chief Minister Siddaramaiah
Hampi World Heritage Area | Decision on further action based on court verdict: Chief Minister Siddaramaiah
  • ಹಂಪಿ ವಿಶ್ವಪರಂಪರೆ ಪ್ರದೇಶದ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳ ಕುರಿತಂತೆ ಸಿಎಂ ಅಧ್ಯಕ್ಷತೆಯಲ್ಲಿ ಚರ್ಚೆ

ಬೆಂಗಳೂರು:

ವಿಶ್ವಪಾರಂಪರಿಕ ತಾಣವಾದ ಹಂಪಿಯ ಸುತ್ತಲಿನ ಗ್ರಾಮಗಳ ಕುರಿತು ನ್ಯಾಯಾಲಯ ಆದೇಶ ನೀಡಿರುವಂತೆ ಹೋಮ್ ಸ್ಟೇಗಳನ್ನು ತಕ್ಷಣಕ್ಕೆ ನಿಲ್ಲಿಸಬೇಕು. ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮುಂದಿನ ಕ್ರಮಕ್ಕೆ ತೀರ್ಮಾನ ತೆಗೆದುಕೊಳ್ಳುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ನೇತೃತ್ವದ ನಿಯೋಗವು ಇಂದು ಅವರನ್ನು ಭೇಟಿಯಾಗಿ ಚರ್ಚಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ವಿಶ್ವಪಾರಂಪರಿಕ ತಾಣವಾದ ಹಂಪಿಯಲ್ಲಿ ಮಾದಕವಸ್ತುಗಳ ಬಳಕೆ, ವೇಶ್ಯಾವಾಟಿಕೆಗಳಂಥ ಕಾನೂನು ಬಾಹಿರ ಚಟುವಟಿಕೆಗಳನ್ನು ಗುರುತಿಸುವಂತೆ ನ್ಯಾಯಾಲಯ ಸೂಚಿಸಿದ್ದು, ಇದನ್ನು ಗುರುತಿಸಿ ನಿಲ್ಲಿಸುವ ಕೆಲಸವಾಗಬೇಕು ಮತ್ತು ಗ್ರಾಮಸ್ಥರಿಗೆ ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಬಾರದು ಎಂದು ಅವರು ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.

ಹಂಪಿ ಪ್ರದೇಶದ 29 ಗ್ರಾಮಗಳಲ್ಲಿ 10 ಸಾವಿರ ಜನರಿದ್ದಾರೆ. 2009 ರಲ್ಲಿ ನಾಲ್ಕು ಸ್ವಾಮೀಜಿಗಳು ದಾವೆ ಹೂಡಿದ್ದು, ಅನಧಿಕೃತ ಚಟುವಟಿಕೆಗಳನ್ನು ಗುರುತಿಸುವ ಕೆಲಸ ಪ್ರಾಧಿಕಾರದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅದರ ಆಧಾರದ ಮೇಲೆ ಸ್ಥಳೀಯರಿಗೆ ಅಂಗಡಿ ಹಾಕಲು ಅವಕಾಶವಿಲ್ಲ. 230 ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹಂಪಿ ಅಭಿವೃದ್ಧಿಗೆ ಪ್ರಾಚ್ಯವಸ್ತು ಇಲಾಖೆ ಕ್ರಮವಹಿಸಿಲ್ಲ. ಹಂಪಿಗೆ ಬರುವ ಜನರಿಗೆ ಈ ಕ್ರಮದಿಂದ ತೊಂದರೆಯಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕಿದೆ. ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ, ಹಾಗೂ ಆರ್ಥಿಕ ಚಟುವಟಿಕೆ ಹಮ್ಮಿಕೊಳ್ಳಲು, ಹೋಮ್ ಸ್ಟೇ ನಡೆಸಲು ಅವಕಾಶ ಕಲ್ಪಿಸಲು ಅವಕಾಶ ನೀಡುವಂತೆ ಮಾಜಿ ಸಂಸದ ಉಗ್ರಪ್ಪ ಮನವಿ ಮಾಡಿದರು.

WhatsApp Image 2023 10 05 at 9.56.34 PM

ದಿನನಿತ್ಯದ ಅವಶ್ಯಕತೆಗಳಿಗೆ 50 ಚಟುವಟಿಕೆಗಳನ್ನು ಗುರುತಿಸಲಾಗಿದೆ. ಹೋಮ್ ಸ್ಟೇ ಗೆ ಇದರಲ್ಲಿ ಅವಕಾಶ ಕಲ್ಪಿಸಿಲ್ಲ.

ಹಿಂದಿನ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಜಾಗದಲ್ಲಿ ಸ್ಟಾರ್ ಹೋಟೆಲ್ ನಿರ್ಮಿಸಲು ಅನುಮತಿ ನೀಡಲಾಗಿದೆ. ಜೈನರ ಆಶ್ರಮ, ಮಠವಿದೆ, ಖಾಸಗಿಯವರಿಗೆ ಹೋಮ್ ಸ್ಟೇ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಬಡವರಿಗೆ ಹೋಟೆಲು, ಹೋಮ್ ಸ್ಟೇ ನಡೆಸಲು ಅವಕಾಶವಿಲ್ಲ ಎಂದು ಉಗ್ರಪ್ಪ ಅವರು ವಿವರಿಸಿದರು.

ಹೋಮ್ ಸ್ಟೇ ವಾಣಿಜ್ಯ ಚಟುವಟಿಕೆ ಯಾಗಿದೆ ಎಂದು ನ್ಯಾಯಾಲಯ ಪರಿಗಣಿಸಿದೆ. ಸದ್ಯ ನ್ಯಾಯಾಲಯ ಸ್ಥಳ ಪರಿಶೀಲನೆ ಮಾಡಲು ಸೂಚಿಸಿದ್ದು,ಈ ಚಟುವಟಿಕೆಗಳಿಂದ ಪಾರಂಪರಿಕ ತಾಣಕ್ಕೆ ಹಾನಿಯಾಗುತ್ತದೆಯೇ ಎಂಬ ಅಂಶಗಳನ್ನು ಪರಿಶೀಲಿಸಲು ತಿಳಿಸಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ತುಕಾರಾಂ, ಹಿರಿಯ ಕಾಂಗ್ರೆಸ್ ಮುಖಂಡ ಅಲ್ಲಂ ವೀರಭದ್ರಪ್ಪ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೇರಿ ಸಂತ್ರಸ್ಥ ಗ್ರಾಮದ 50ಕ್ಕೂ ಹೆಚ್ಚು ನಿವಾಸಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here