Home ಚಿಕ್ಕಬಳ್ಳಾಪುರ ನಂದಿಬೆಟ್ಟದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಸಿ.ಪಿ.ಯೋಗೇಶ್ವರ್

ನಂದಿಬೆಟ್ಟದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಸಿ.ಪಿ.ಯೋಗೇಶ್ವರ್

130
0
Holistic development of Nandi Hills without harming environment: Minister CP Yogeshwar

ಚಿಕ್ಕಬಳ್ಳಾಪುರ:

ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ಪರಿಸರ ಹಾಗೂ ಜೀವ ಸಂಕುಲಕ್ಕೆ ಯಾವುದೇ ರೀತಿಯಲ್ಲೂ ಹಾನಿ, ತೊಂದರೆಯಾಗದಂತೆ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ್ ಅವರು ಹೇಳಿದರು.

ತಾಲೂಕಿನ ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಹಾಗೂ ವಾಹನ ಪಾರ್ಕಿಂಗ್ ಸ್ಥಾಪನೆ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಷ್ಟು ದಿನ ನಂದಿಬೆಟ್ಟವು ಮೂರು ನಾಲ್ಕು ಇಲಾಖೆಗಳ ಅಡಿಯಲ್ಲಿತ್ತು. ಇದೀಗ ಸಂಪೂರ್ಣ ನಿಯಂತ್ರಣ ಪ್ರವಾಸೋದ್ಯಮ ಇಲಾಖೆ ಸುಪರ್ಧಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದಲೇ ನಂದಿಬೆಟ್ಟದ ಪ್ರವಾಸಿ ತಾಣದ ಸಮಗ್ರ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಂದಿಬೆಟ್ಟದ ಸಮಗ್ರ ಅಭಿವೃದ್ಧಿ ಇಷ್ಟು ದಿನ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂಬ ಅಪಾದನೆಗಳು ಇವೆ. ಅದರೆ, ಇನ್ನು ಮುಂದೆ ಅವುಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಈ ಮೂಲಕ ನಂದಿಗಿರಿಧಾಮವನ್ನು ಪರಿಸರ ಸ್ನೇಹಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಇದುವರೆಗೆ ಎಲ್ಲೂ ಕೂಡ ರೋಪ್ ವೇ ಮಾಡಲು ಸಾಧ್ಯವಾಗಿಲ್ಲ. ನಂದಿಬೆಟ್ಟಕ್ಕೆ ರೋಪ್ ವೇ ಮಾಡಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಇದೀಗ ಸಕಾರಗೊಳ್ಳುವ ಎಲ್ಲಾ ಲಕ್ಷಣಗಳು ಕಣ್ಣಮುಂದೆ ನಡೆಯುತ್ತಿದ್ದು, ಈ ದಿಸೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಿರ್ಮಾಣ ಮಾಡಿರುವ ಹೆಗ್ಗಳಿಕೆ ಹೊಂದಿರುವ ಲಾಲ್ ಅವರ ಒಡೆತನದ ಪ್ರತಿಷ್ಠಿತ ದೇಶೀಯ ಖಾಸಗಿ ಸಂಸ್ಥೆಯೊಂದು ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಲು ಮುಂದೆ ಬಂದಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಮುಂದಿನ 2 ವರ್ಷದೊಳಗೆ ರೋಪ್ ವೇ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೋಪ್ ವೇ ನಿರ್ಮಾಣ ಸಂಬಂಧ ಸಂಸ್ಥೆಯವರು ಈಗಾಗಲೇ ನಂದಿಬೆಟ್ಟದಲ್ಲಿ ಸ್ಥಳ ಸರ್ವೇ ಕಾರ್ಯ, ಸ್ಥಳೀಯ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಹಾಗೂ ಡ್ರೋಣ್ ಸರ್ವೇಕಾರ್ಯ ನಡೆಸಿದ್ದು, ತಾಂತ್ರಿಕವಾಗಿ ಇನ್ನೂ ಕೆಲವೊಂದು ಕೆಲಸಗಳು ಪ್ರಾರಂಭವಾಗಿವೆ. ರೋಪ್ ವೇನಲ್ಲಿ ಎಷ್ಟು ಜನರನ್ನು ಮೇಲಕ್ಕೆ ಕರೆದೊಯ್ಯಬೇಕು. ವಾಪಸ್ ಕರೆತರಬೇಕು ಸೇರಿದಂತೆ ಜನರ ಸುರಕ್ಷಣೆ ಹಾಗೂ ಇನ್ನಿತರೆ ಪೂರಕವಾದ ಎಲ್ಲಾ ಮಾಹಿತಿಯ ಆಧರಿಸಿ ಈ ಯೋಜನೆಗೆ ಎಷ್ಟು ಅನದಾನ ವೆಚ್ಚವಾಗಲಿದೆ ಎಂಬುದು ಗೊತ್ತಾಗಲಿದೆ. ಸರ್ಕಾರಕ್ಕೆ ಹಣದ ಹೊರೆಯಾಗದಂತೆ ಇದೆಲ್ಲವನ್ನೂ ಖಾಸಗಿ ಸಹಭಾಗಿತ್ವದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಪ್ರವಾಸೋದ್ಯಮ ದೃಷ್ಠಿಯಲ್ಲಿ ನಂದಿಬೆಟ್ಟದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಬಹುದಾಗಿದೆ. ಪ್ರಸ್ತುತ ಬೆಂಗಳೂರಿಗೆ ಹತ್ತಿರ ಇರುವುದರಿಂದ ಪ್ರವಾಸಿಗರ ದಟ್ಟಣೆ ಹೆಚ್ಚಾಗುತ್ತಿದೆ. ಪಾರ್ಕಿಂಗ್ ಜತೆಗೆ ಕುಡಿಯುವ ನೀರು, ಕೆಲವೊಂದು ಮೂಲಭೂತ ಸೌಲಭ್ಯಗಳ ಸಮಸ್ಯೆಯೂ ಇದೆ. ಇದನ್ನೆಲ್ಲಾ ಬಗೆಹರಿಸಬೇಕಾದರೆ ಕೆಲವೊಂದು ವೈಜ್ಞಾನಿಕ ತಳಹದಿಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಬೇಕಿದೆ. ಪಾರ್ಕಿಂಗ್ ಗೆ ಬೆಟ್ಟದ ಕೆಳಗಡೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಒಳಪಟ್ಟ ಸುಮಾರು 30-35 ಎಕರೆ ಸರ್ಕಾರಿ ಜಮೀನು ಇದೆ. ಅದನ್ನು ಇಲಾಖೆಗೆ ಮಂಜೂರು ಮಾಡುವಂತೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲಿ ರೋಪ್ ವೇ ಹಾಗೂ ಇತರೆ ಸಾರ್ವಜನಿಕ ವಾಹನಗಳಿಗೆ ಪಾರ್ಕಿಂಗ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಸಿಂಧೂ ರೂಪೇಶ್, ಕೆಎಸ್ ಟಿಡಿಸಿ ಯ ಅಧ್ಯಕ್ಷ ಕಾಪು ಸಿದ್ಧಲಿಂಗಸ್ವಾಮಿ, ವ್ಯವಸ್ಥಾಪಕ ನಿರ್ದೇಶಕರಾದ ವಿಜಯಶರ್ಮಾ, ಜೆಎಲ್ಆರ್ ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಜಿತೇಂದ್ರನಾಥ್, ಐಡೆಸ್ಕ್ ರೋಪ್ ವೇ ಸಂಸ್ಥೆಯ ಮುಖ್ಯಸ್ಥ ಲಾಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here