ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸುತ್ತಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ.
ಬೆಂಗಳೂರು: ಬೆಂಗಳೂರಿನ ಐದು ನೂತನ ಪೊಲೀಸ್ ಆಯುಕ್ತಾಲಯಗಳ ಕಾರ್ಯನಿರ್ವಹಣೆ ಕುರಿತು ಚರ್ಚಿಸಲು ಗೃಹ, ಐಟಿ ಮತ್ತು ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿದರು ಎಂದು ಪ್ರಕಟಣೆ ತಿಳಿಸಿದೆ. ಈ ವಾರದ ಆರಂಭದಲ್ಲಿ ಆಯುಕ್ತಾಲಯಗಳನ್ನು ರಚಿಸಲಾಗಿದೆ.
ಸಭೆಯಲ್ಲಿ ಹೊಸದಾಗಿ ರಚಿಸಲಾದ ಐದು ಪೊಲೀಸ್ ಆಯುಕ್ತಾಲಯಗಳ ಮುಂದಿನ ಕಾರ್ಯಯೋಜನೆ, ಪೊಲೀಸ್ ವ್ಯವಸ್ಥೆಯ ಸಾಮರ್ಥ್ಯವರ್ಧನೆ, ವಿವಿಧ ಘಟಕಗಳ ನಡುವಿನ ಸಮನ್ವಯ ಮತ್ತು ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಪ್ರಕಟಣೆ ಹೇಳಿದೆ. ಬೆಂಗಳೂರಿನ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಪೊಲೀಸ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸುವುದು, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ಮತ್ತು ಪೊಲೀಸ್ ಸೇವೆಗಳನ್ನು ಜನಸ್ನೇಹಿಯಾಗಿ ರೂಪಿಸುವುದು ಉದ್ದೇಶ.
ಬೆಂಗಳೂರಿನ ಪೊಲೀಸ್ ವ್ಯವಸ್ಥೆ ಬಲಪಡಿಸಲು ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಯಿತು ಎಂದು ಪ್ರಕಟಣೆ ಹೇಳಿದೆ. ನೂತನ ಆಯುಕ್ತಾಲಯಗಳ ನಡುವೆ ಉತ್ತಮ ಸಮನ್ವಯ ಹಾಗೂ ಇಲಾಖೆಯ ದಕ್ಷತೆ, ಹೊಣೆಗಾರಿಕೆ ಮತ್ತು ಸ್ಪಂದನಶೀಲತೆ ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆಯಿತು.
ಪರಿಣಾಮಕಾರಿ, ಸ್ಪಂದನಶೀಲ ಮತ್ತು ಜನಕೇಂದ್ರಿತ ಪೊಲೀಸ್ ವ್ಯವಸ್ಥೆ ರೂಪಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಮತ್ತು ಪೊಲೀಸ್ ಸೇವೆ ಸುಧಾರಿಸಲು ಹೊಸ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ಬದ್ಧ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.
