ಎಚ್‌ಎಸ್‌ಆರ್ ಲೇಔಟ್ ಸ್ಮಾರ್ಟ್ ಪಾರ್ಕಿಂಗ್ ಒಪ್ಪಂದ ಪತ್ರದೊಂದಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಮತ್ತು ಪಾರ್ಕ್‌ಲೆನ್ಸ್ ಇಂಡಿಯಾ ಪ್ರತಿನಿಧಿಗಳು.
ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಕೃತಕ ಬುದ್ಧಿಮತ್ತೆ (ಎಐ) ಆಧಾರದಲ್ಲಿ 12 ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ, ಇದರಿಂದ ಪಾರ್ಕಿಂಗ್ ಸಮಸ್ಯೆ ನಿವಾರಣೆ, ಸುಗಮ ಸಂಚಾರ ಮತ್ತು ಪಾದಚಾರಿಗಳ ಸುರಕ್ಷಿತ ನಡಿಗೆ ಸಾಧ್ಯ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ ಎಂದು ಪಾಲಿಕೆಯ ಪ್ರಕಟಣೆ ಹೇಳಿದೆ.
ಜಯನಗರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಜಾರಿಯ ನಂತರ ಪಾಲಿಕೆಯು ಎಚ್‌ಎಸ್‌ಆರ್ ಲೇಔಟ್‌ಗೆ ಪ್ರದೇಶಾಧಾರಿತ ಪಾರ್ಕಿಂಗ್ ಕ್ರಿಯಾಯೋಜನೆ ಸಿದ್ಧಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಯೋಜನೆಯಡಿ ನಡೆಸಿದ ಅಧ್ಯಯನದಲ್ಲಿ ಒಟ್ಟು 18.02 ಕಿ.ಮೀ. ಉದ್ದದ 12 ವಾಣಿಜ್ಯ ರಸ್ತೆಗಳನ್ನು ರಸ್ತೆಬದಿ ಸ್ಮಾರ್ಟ್ ಪಾರ್ಕಿಂಗ್‌ಗೆ ಗುರುತಿಸಲಾಗಿದೆ.
ಗುರುತಿಸಿದ ರಸ್ತೆಗಳಲ್ಲಿ ಸುಮಾರು 3,355 ದ್ವಿಚಕ್ರ ವಾಹನ ಮತ್ತು 627ಕ್ಕೂ ಹೆಚ್ಚು ಕಾರುಗಳ ಪಾರ್ಕಿಂಗ್ ಸ್ಥಳಗಳನ್ನು ಸಿದ್ಧಪಡಿಸಲಾಗುತ್ತಿದೆ. ಸೈಕಲ್ ಮತ್ತು ಆಟೋರಿಕ್ಷಾಗಳಿಗೆ ಪ್ರತ್ಯೇಕ ಸ್ಥಳ, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮತ್ತು ಇಳಿಸಲು ವಲಯಗಳು, ವಿಕಲಚೇತನರು ಹಾಗೂ ತುರ್ತು ಸೇವಾ ವಾಹನಗಳಿಗೆ ಮೀಸಲು ಸ್ಥಳಗಳನ್ನೂ ನೀಡಲಾಗಿದೆ.
ಪಾರ್ಕಿಂಗ್ ಶುಲ್ಕ ದ್ವಿಚಕ್ರ ವಾಹನಕ್ಕೆ ಗಂಟೆಗೆ ₹15 ಮತ್ತು ಕಾರಿಗೆ ಗಂಟೆಗೆ ₹30 ಆಗಿದ್ದು, ಎಲ್ಲ ಪಾವತಿಗಳು ಡಿಜಿಟಲ್ ಮೂಲಕವೇ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ. ಖಾಲಿ ಇರುವ ಸ್ಥಳಗಳನ್ನು ನೈಜ ಸಮಯದಲ್ಲಿ ಪತ್ತೆ ಹಚ್ಚಲು ಮತ್ತು ನಿಯಮ ಪಾಲನೆಯ ಮೇಲೆ ನಿಗಾ ಇಡಲು ಎಐ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಕೈಯಾರೆ ಶುಲ್ಕ ಸಂಗ್ರಹದಲ್ಲಿ ಈ ಹಿಂದೆ ಆಗುತ್ತಿದ್ದ ಸೋರಿಕೆ ಮತ್ತು ವಂಚನೆಗೆ ಇದರಿಂದ ಕಡಿವಾಣ ಬೀಳಲಿದೆ ಎಂದು ಪಾಲಿಕೆ ಹೇಳಿದೆ.
ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆಯ ನಂತರ ಈ ವ್ಯವಸ್ಥೆಯ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಎಐ ಆಧಾರಿತ ಪಾರ್ಕಿಂಗ್ ಸೇವೆ ಒದಗಿಸುವ ಪಾರ್ಕ್‌ಲೆನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು ಪಾಲಿಕೆ ಆಯ್ಕೆ ಮಾಡಿದೆ. ಪಾಲಿಕೆಯ ಸಂಚಾರ ಎಂಜಿನಿಯರಿಂಗ್ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಮತ್ತು ಸಂಸ್ಥೆ ಶುಕ್ರವಾರ ಆಯುಕ್ತರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು ಎಂದು ಪ್ರಕಟಣೆ ತಿಳಿಸಿದೆ.
ಮುಖ್ಯ ಎಂಜಿನಿಯರ್‌ಗಳಾದ ಬಸವರಾಜ ಕಬಾಡೆ ಮತ್ತು ಮಾಲತಿ, ಕಾರ್ಯಕಾರಿ ಎಂಜಿನಿಯರ್ ಜನಾರ್ದನ್ ಹಾಗೂ ಪಾರ್ಕ್‌ಲೆನ್ಸ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
