ಬೆಂಗಳೂರು:
ರಾಜ್ಯದಲ್ಲಿ ಲಾಕ್ಡೌನ್ ಅವಧಿ ವಿಸ್ತರಣೆ ಮಾಡುವ ಸಂಬಂಧ ಪರಿಸ್ಥಿತಿ ಪರಾಮರ್ಶೆ ಮಾಡಿ ಮುಂದೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಿ. ಎಸ್ . ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ಕೆಲದಿನಗಳಲ್ಲಿ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುವ ವಿಶ್ವಾಸವಿದೆ ಎಂದರು.
ಜನರು ಸಹಕರಿಸಿದರೆ ಮತ್ತೆ ಲಾಕ್ ಡೌನ್ ಅವಧಿ ವಿಸ್ತರಣೆ ಮಾಡುವ ಅವಶ್ಯಕತೆ ಉಂಟಾಗುವುದಿಲ್ಲ ಎಂದು ಅವರು ಹೇಳಿದರು.
ಸದ್ಯ ಘೋಷಣೆಯಾಗಿರುವ ಆದೇಶದ ಪ್ರಕಾರ ಮುಂದಿನ ತಿಂಗಳ 7 ವರೆವಿಗೂ ಹಾಲಿ ಲಾಕ್ಡೌನ್ ನಿಯಮ ಜಾರಿಯಲ್ಲಿದ್ದು ಪರಿಸ್ಥಿತಿ ಪರಾಮರ್ಶೆ ಮಾಡಿ, ಬಳಿಕ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ ಮಾಡಿ ನಂತರ ಸಂದರ್ಭಕ್ಕೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಸೋಂಕು ನಿವಾರಿಸಲು ಗ್ರಾಮಪಂಚಾಯಿತಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.