ಬೆಂಗಳೂರು:
ಕೋವಿಡ್ ಲಸಿಕೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ದೋಚುತ್ತಿರುವುದರಿಂದ ಏಕರೂಪದ ದರ ನಿಗದಿ ಮಾಡುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಲಸಿಕೆ ನೀಡುವ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ದಂಧೆಯಲ್ಲಿ ಬಿಜೆಪಿ ಶಾಸಕರೂ ಶಾಮೀಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ಮೂರನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮಕ್ಕಳಿಗೆ ವಿತರಿಸಲು ಪ್ರದೇಶ ಮಹಿಳಾ ಕಾಂಗ್ರೆಸ್ ಸಿದ್ಧಪಡಿಸಿರುವ ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥ ಹಾಗೂ ಔಷಧ ಮಾತ್ರೆಗಳನ್ನು ಒಳಗೊಂಡ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚಾಲನೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ 900ರಿಂದ 1,250 ರೂ.ಗಳ ವರೆಗೆ ದರ ನಿಗದಿ ಮಾಡಲಾಗಿದೆ. ಸಚಿವರು, ಸಂಸದರು, ಶಾಸಕರೇ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಹಾಗಾದರೆ ಬಡವರ ಪರಿಸ್ಥಿತಿ ಏನು ? ದುಬಾರಿ ಹಣ ಕೊಟ್ಟು ಲಸಿಕೆ ಪಡೆಯಲು ಅವರಿಂದ ಸಾಧ್ಯವೇ ? ಇದೊಂದು ಕೆಟ್ಟ ಸರ್ಕಾರ. ಕೆಟ್ಟ ಮುಖ್ಯಮಂತ್ರಿ ಎಂದು ಕಿಡಿ ಕಾರಿದರು.
ಲಸಿಕೆ ಮೂಲಕ ಕೊರೊನಾ ಸೋಂಕನ್ನು ಶೇ.80ರಷ್ಟು ತಡೆಯಬಹುದು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಎಲ್ಲರಿಗೂ ಲಸಿಕೆ ಸಿಗುವಂತೆ ಸರ್ಕಾರ ಗಮನ ಹರಿಸಬೇಕು. ಸರ್ಕಾರಕ್ಕೆ ಸಲಹೆ ನೀಡಿದರೂ ಸಿದ್ದರಾಮಯ್ಯ ರಾಜಕೀಯಕ್ಕೆ ಮಾತನಾಡುತ್ತಾರೆ ಎಂದು ಬಿಜೆಪಿಯವರು ಕಿರಿ ಕಾರುತ್ತಾರೆ. ದೇಶದ ಜನಸಂಖ್ಯೆ 130 ಕೋಟಿ. 20 ಕೋಟಿ ಮಂದಿಗೆ ಲಸಿಕೆ ಹಾಕಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ.
ಕೊರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂದು ತಜ್ಞರು ಹೇಳುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಎರಡನೇ ಅಲೆ ನಿಯಂತ್ರಣಕ್ಕೂ ಯಾವುದೇತಯಾರಿ ಮಾಡಿಕೊಂಡಿರಲಿಲ್ಲ.
ಸರ್ಕಾರಿ ಆಸ್ಪತ್ರೆಗಳಿಗೆ ಸಿಗದ ಲಸಿಕೆ ಖಾಸಗಿಯವರಿಗೆ ಹೇಗೆ ಸಿಗುತ್ತಿದೆ. ಈ ಮಧ್ಯೆ ಬ್ಲಾಕ್ ಫಂಗಸ್ ಕಾಯಿಲೆಗೂ ಚುಚ್ಚುಮದ್ದು ಸಿಗುತ್ತಿಲ್ಲ. ಸೋಂಕಿನ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ ? ಇದ್ದಿದ್ದರೆ ತಯಾರಿ ಮಾಡಿಕೊಂಡಿಲ್ಲವೇಕೆ ? ಇಂಜೆಕ್ಷನ್ ಸಿಗುತ್ತಿಲ್ಲ ಎಂಬುದು ಸತ್ಯ. ಈ ಸತ್ಯವನ್ನು ಹೇಳಿದರೆ ಅದಕ್ಕೂ ಬಿಜೆಪಿಯವರು ತಕರಾರು ತೆಗೆಯುತ್ತಾರೆ. ಜನರ ಪ್ರಾಣ ರಕ್ಷಣೆ ಸರ್ಕಾರದ ಜವಾಬ್ದಾರಿ ಎಂದು ಸಂವಿಧಾನ ಹೇಳುತ್ತದೆ.
ಅಪೊಲೋ ಆಸ್ಪತ್ರೆಯಲ್ಲಿ ಸ್ಫುಟ್ನಿಕ್ ವ್ಯಾಕ್ಸಿನ್ ಲಭ್ಯವಿದೆ ಎಂದು ಆರೋಗ್ಯ ಸಚಿವರೇ ಹೇಳುತ್ತಾರೆ. ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಿ ಎಂದು ಸಚಿವರೇ ಹೇಳುವುದಾದರೆ ಸರ್ಕಾರ ಏನು ಮಾಡುತ್ತಿದೆ. ರಾಜ್ಯ, ಹೊರ ರಾಜ್ಯ, ದೇಶ, ವಿದೇಶಗಳ ಲ್ಯಾಬ್‍ಗಳು ತಯಾರಿಸುವ ಲಸಿಕೆಯನ್ನು ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಖರೀದಿ ಮಾಡಬೇಕು.
ಮಮತಾ ಬ್ಯಾನರ್ಜಿ ನಡೆ ಸರಿಯಾಗಿದೆ :
ಪ್ರಧಾನಿ ಮೋದಿಯವರು ಕರೆದಿದ್ದ ಸಭೆಯಿಂದ ಅರ್ಧಕ್ಕೆ ಹೊರ ನಡೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿರ್ಧಾರ ಸರಿಯಾಗಿದೆ. ಆದರೆ, ಇದನ್ನೇ ದೊಡ್ಡದಾಗಿ ಬಂಬಿಸಿ ಬಿಜೆಪಿಯವರು ಮಮತಾ ಅವರನ್ನು ಟೀಕಿಸುತ್ತಿದ್ದಾರೆ.
ಆ ರಾಜ್ಯದ ವಿಧಾನಸಭೆಯ ಪ್ರತಿಪಕ್ಷ ನಾಯಕರನ್ನು ಪ್ರಧಾನಿಯವರ ಸಭೆಗೆ ಆಹ್ವಾನಿಸಲಾಗಿತ್ತು. ಹೀಗಾಗಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಮಮತಾ ಬ್ಯಾನರ್ಜಿಯವರು ಬೇಸರದಿಂದ ಹೊರ ನಡೆದಿದ್ದಾರೆ.
ಇಲ್ಲಿ ವಿಪಕ್ಷ ನಾಯಕರು ಸಭೆ ನಡೆಸುವಂತಿಲ್ಲ ಎನ್ನುತ್ತಾರೆ. ಅಲ್ಲಿ, ಪ್ರಧಾನಿಯವರೇ ವಿರೋಧ ಪಕ್ಷದ ನಾಯಕರನ್ನು ಕರೆಯಿಸಿಕೊಂಡು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಆದರೆ, ಇದೇ ಪ್ರಧಾನಿಯವರು ಗುಜರಾತ್‍ಗೆ ಹೋದಾಗ ಮಾತ್ರ ಯಾವುದೇ ಸಭೆಗಳಿಗೆ ಪ್ರತಿಪಕ್ಷ ನಾಯಕರನ್ನು ಆಹ್ವಾನಿಸುವುದಿಲ್ಲ. ಏಕೆಂದರೆ ಅಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಕಾಂಗ್ರೆಸ್ಸಿಗರು.
ಝೂಮ್ ಸಭೆಯ ಜಿಲ್ಲಾಧಿಕಾರಿಗಳಿಂದ ಮೂಲಕ ಮಾಹಿತಿ ಸಂಗ್ರಹಿಸುವೆ ಎಂದರೆ ಇಲ್ಲ ಎನ್ನುತ್ತಾರೆ. ಮಾಹಿತಿ ಇಲ್ಲದೆ ರಾಜ್ಯದ ಜನರನ್ನು ರಕ್ಷಣೆ ಮಾಡುವುದಾದರೂ ಹೇಗೆ ? ಸರ್ಕಾರ ಕೊಡುವ ಸುಳ್ಳು ಅಂಕಿ-ಅಂಶ ನೆಚ್ಚಿಕೊಂಡು ಕೂರಲು ಆಗುವುದೇ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.