ಬೆಂಗಳೂರು:
ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ. ಒಂದೇ ಕುಟುಂಬಕ್ಕೆ ಎಂಎಲ್ಎ, ನಿಗಮ ಮಂಡಳಿ, ಲೋಕಸಭೆ, ರಾಜ್ಯಸಭೆ, ಪಕ್ಷದ ಜವಾಬ್ದಾರಿ ಎಲ್ಲವೂ ಕೊಡಬಾರದು ಎಂದು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ದಿನದಲ್ಲಿ ಒಂದು ಕುಟುಂಬಕ್ಕೆ ಒಬ್ಬರಿಗೇ ಅಧಿಕಾರ ಕೊಡಬೇಕು ಎಂದು ನಾನು ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಈ ಬಗ್ಗೆ ನಾನು ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುತ್ತೇನೆ. ವಂಶ ಪಾರಂಪರ್ಯ ಆಡಳಿತ ಅಂತ್ಯ ಆಗಬೇಕು, ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡಬೇಕು ಎಂಬುದು ಪ್ರಧಾನಿ ಕನಸು. ಈ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅವರ ಮನೆಯಲ್ಲೇ ಅಷ್ಟೂ ಜನ ಇದ್ದಾರೆ ಎಂದು ಹೇಳುತ್ತಿದ್ದೇನೆ. ಯಾರ ಯಾರ ಮನೆಯಲ್ಲಿ ಜಾಸ್ತಿ ಜನ ಇದ್ದಾರೋ, ಅವರಿಗೆ ನೀಡಿರುವ ಅಧಿಕಾರವನ್ನು ಕತ್ತರಿಸಿ ಒಂದೇ ಹುದ್ದೆ ಕೊಡಬೇಕು. ಕಾರ್ಯಕರ್ತರಿಗೆ ಬಿಟ್ಟು ಕೊಡಬೇಕು. ಕಾರ್ಯಕರ್ತರು ಏನು ಇವರನ್ನು ತಲೆ ಮೇಲೆ ಹೊತ್ತು ಅಡ್ಡಾಡಲು ಇದ್ದಾರಾ?. ಕಾರ್ಯಕರ್ತರನ್ನು ಸಮರ್ಥವಾಗಿ ಬೆಳೆಸಿ. ಇದರಲ್ಲಿ ನನ್ನ ವೈಯಕ್ತಿಕ ಏನೂ ಇಲ್ಲ, ಮಂತ್ರಿ ಮಾಡಬೇಕು ಅಂತಾನೂ ಇಲ್ಲ ಎಂದು ಕಿಡಿ ಕಾರಿದರು. UNI