Home ಬೆಂಗಳೂರು ನಗರ ಸತ್ಯಗಳ ಹುಡುಕಾಟ ಸಾಹಿತ್ಯದ ಶಕ್ತಿ – ಡಾ.ಎಚ್.ಎಸ್. ರಾಘವೇಂದ್ರರಾವ್

ಸತ್ಯಗಳ ಹುಡುಕಾಟ ಸಾಹಿತ್ಯದ ಶಕ್ತಿ – ಡಾ.ಎಚ್.ಎಸ್. ರಾಘವೇಂದ್ರರಾವ್

18
0
Advertisement
bengaluru

ಬೆಂಗಳೂರು:

ಸೃಜನಶೀಲ ಸಾಹಿತ್ಯ ರಚನೆಯ ಮೂಲ ಆಶಯ ಸತ್ಯಗಳ ಹುಡುಕಾಟ ಆಗಿರಬೇಕು. ಇಂದಿನ ಯುವಲೇಖಕರು ಮೌಲ್ಯಯುತ ಸಾಹಿತ್ಯ ರಚನೆ ಮಾಡಬೇಕಾದರೆ ಬಹುಮುಖ ಸತ್ಯದ ಶೋಧನೆಯಲ್ಲಿ ತೊಡಗುವುದು ಅವಶ್ಯ ಎಂದು ಖ್ಯಾತ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ, ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಕನ್ನಡ ಸಾಹಿತ್ಯ ತನ್ನಿಂದ ತಾನೆ ಶಕ್ತವಾಗಿದೆ. ಈ ಸಾಹಿತ್ಯ ಲೋಕಕ್ಕೆ ಹೊಸದಾಗಿ ಪಾದಾರ್ಪಣೆ ಮಾಡುವವರು ಮೌಲಿಕ ಕೃತಿಗಳನ್ನು ಕೊಡಬೇಕಾದರೆ ಮೊದಲು ತನ್ನ ಸುತ್ತಲ ಪರಿಸರವನ್ನು ಗ್ರಹಿಸಿ ಹೇಳಬೇಕಾದ ವಿಷಯದ ಬಗ್ಗೆ ಸತ್ಯಶೋಧನೆಯಲ್ಲಿ ತೊಡಗಬೇಕು. ಸತ್ಯವೆನ್ನುವುದು ವಕೀಲರಿಗೆ, ವ್ಯವಸ್ಥೆಗೆ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಒಂದು ರೀತಿಯಲ್ಲಿದ್ದರೆ ನಿಜವಾದ ಬರಹಗಾರನಿಗೆ ಸತ್ಯದ ಹತ್ತು ಮುಖಗಳು ಪರಿಚಯವಾಗುತ್ತದೆ. ಇದನ್ನು ಸಮರ್ಥವಾಗಿ ಹೇಳಬಲ್ಲವನು ಉತ್ತಮ ಲೇಖಕನಾಗುತ್ತಾನೆ ಎಂದು ಅವರ ಹೇಳಿದರು. ಸಮಕಾಲೀನ ಕನ್ನಡ ಸಾಹಿತ್ಯ, ಅಪೇಕ್ಷೆ ಮತ್ತು ಸಂಘರ್ಷಗಳ ನಡುವಿನ ದ್ವಂದ್ವಕ್ಕೆ ಸಿಲುಕಿದೆ. ಕುವೆಂಪು ಅವರ ಪೂರ್ಣ ದೃಷ್ಟಿ ಹೊಂದಿರುವ ಲೇಖಕ ಸತ್ವಯುತ ಸಾಹಿತ್ಯ ಸೃಷ್ಟಿ ಮಾಡಬಲ್ಲವನಾಗುತ್ತಾನೆ ಎಂದು ಅವರು ತಿಳಿಸಿದರು. ಹೊಗಳಿಕೆಯ ಮುಳ್ಳಿನ ಕಿರೀಟ ಧರಿಸಿದರೆ ಸಾಹಿತ್ಯದ ಸತ್ವ ಅಲ್ಲಿಗೆ ಸೀಮಿತವಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.

WhatsApp Image 2021 01 20 at 15.24.06

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಸಾಹಿತ್ಯ, ಪತ್ರಕರ್ತ ಜೋಗಿ ಅವರು ಮಾತನಾಡಿ ಯುವಲೇಖಕರು ಕೆಲವೇ ಪ್ರಕಾಶಕರಿಂದ ಹಾದಿ ತಪ್ಪಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಪುಸ್ತಕ ಪ್ರಕಾಶನದ ಬಗ್ಗೆ ಸರಿಯಾದ ಮಾಹಿತಿಯನ್ನು ಕಲೆಹಾಕಿ ತಮ್ಮ ಕೃತಿ ಪ್ರಕಟಣೆಗೆ ಮುಂದಾಗಬೇಕು ಎಂದರು. ಸ್ವತಃ ಬೆರಳಚ್ಚು ಮಾಡುವ, ಸ್ವತಃ ಮುಖಪುಟ ರಚಿಸುವ ಬಗ್ಗೆ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಬಹಳ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹವನ್ನು ಹಾಕಿ ಅದಕ್ಕೆ ಬರುವ ಟೀಕೆ, ಟಿಪ್ಪಣಿ, ವಿಮರ್ಶೆಗಳಿಂದ ತಮ್ಮ ಬರವಣಿಗೆಯನ್ನು ತಿದ್ದುಕೊಳ್ಳಲು ಇಂದಿನ ಯುವಲೇಖಕರು ಪ್ರಯತ್ನಿಸಬೇಕು ಎಂದು ಹೇಳಿದರು. ಸತತ ಬರವಣಿಗೆ ಮತ್ತು ಸತತ ಓದು ಯಾವುದೇ ಲೇಖಕನ ಶಕ್ತಿ ಆಗಿರುತ್ತದೆ. ನಿರಂತವಾಗಿ ಬರೆದು ಅದರಲ್ಲಿ ಸತ್ವಯುತವಾದದ್ದನ್ನು ಮಾತ್ರವೇ ಪ್ರಕಟಿಸಬೇಕು. ದಿಢೀರ್ ಜನಪ್ರಿಯತೆ ಬರವಣಿಗೆಯ ಮೌಲ್ಯವನ್ನು ಕುಗ್ಗಿಸಿಬಿಡುತ್ತದೆ. ಆ ಬಗ್ಗೆ ಎಚ್ಚರ ವಹಿಸಬೇಕು ಎಂದು ಜೋಗಿ ಹೇಳಿದರು.

bengaluru bengaluru

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎಂ.ಎನ್. ನಂದೀಶ್ ಹಂಚೆ ಮಾತನಾಡಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಚೊಚ್ಚಲ ಕೃತಿಗಳ ಪ್ರಕಟಣೆ ಯೋಜನೆಯಡಿ 161 ಹಸ್ತಪ್ರತಿಗಳು ಸ್ವೀಕೃತವಾಗಿದ್ದವು ಅದರಲ್ಲಿ 55 ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಯಿತು. ಪ್ರತೀ ಲೇಖಕರಿಗೆ ರೂ.15,000-00ಗಳ ಧನಸಹಾಯವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

WhatsApp Image 2021 01 20 at 15.24.05

ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮಾತನಾಡಿ ಯುವಬರಹಗಾರರು ತಮ್ಮ ಸುತ್ತಲ ಪರಿಸರವನ್ನು ಗ್ರಹಿಸಿ ಅದರ ಸಾರವನ್ನು ತಮ್ಮ ಬರವಣಿಗೆಯಲ್ಲಿ ಅಳವಡಿಸುವುದರಿಂದ ಆ ಕೃತಿ ಸತ್ವಯುತವಾಗುತ್ತದೆ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಸೌಭಾಗ್ಯ ವಂದಿಸಿದರು.


bengaluru

LEAVE A REPLY

Please enter your comment!
Please enter your name here