ಭಾರತದಲ್ಲಿ ಹೂಡಿಕೆಗೆ ಉತ್ತಮ ವಾತಾವರಣ: ಫಿಲಡೆಲ್ಫಿಯಾದ AKKA ಬಿಸಿನೆಸ್ ಫೋರಂನಲ್ಲಿ ಎಚ್.ಡಿ. ಕುಮಾರಸ್ವಾಮಿ; ಉದ್ಯೋಗ ಸೃಷ್ಟಿಗೆ ಅನಿವಾಸಿ ಭಾರತೀಯರಿಗೆ ಕರೆ
ಫಿಲಡೆಲ್ಫಿಯಾ/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಆರ್ಥಿಕತೆ ಸದೃಢವಾಗಿ ಏರುಗತಿಯಲ್ಲಿ ಸಾಗುತ್ತಿದ್ದು, ದೇಶದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣವಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಮ್ಮ ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ಅನುಭವವನ್ನು ಬಳಸಿಕೊಂಡು ಭಾರತದಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯುತ್ತಿರುವ AKKA ರಜತ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ‘ಬಿಸಿನೆಸ್ ಫೋರಂ–2026’ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಉದ್ಯಮಶೀಲತೆ, ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿದ್ದು, ಕೇಂದ್ರ ಸರ್ಕಾರ ಉದ್ಯಮಿಗಳು ಮತ್ತು ಯುವಜನರಿಗೆ ಹಲವು ಸೌಲಭ್ಯಗಳು ಹಾಗೂ ಅವಕಾಶಗಳನ್ನು ಒದಗಿಸುತ್ತಿದೆ ಎಂದರು.
ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸೇರಿದಂತೆ ಭಾರತೀಯರು ಈ ಅವಕಾಶಗಳನ್ನು ಬಳಸಿಕೊಂಡು ಭಾರತದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.
“ನಿಮ್ಮ ತಾಂತ್ರಿಕ ಜ್ಞಾನ ಮತ್ತು ಅನುಭವವನ್ನು ಭಾರತದಲ್ಲಿ ಉದ್ಯಮ ಕಟ್ಟಲು ಬಳಸಿಕೊಳ್ಳಿ. ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ನೀಡುವ ಉದ್ಯಮಿಗಳಾಗಿ. ನಿಮ್ಮ ಅನುಭವ ಮತ್ತು ಪರಿಣತಿಯನ್ನು ದೇಶದ ಅಭಿವೃದ್ಧಿಗೆ ಬಳಸಿಕೊಂಡು ಹೊಸ ಅವಕಾಶಗಳನ್ನು ಸೃಷ್ಟಿಸಬೇಕು,” ಎಂದು ಕುಮಾರಸ್ವಾಮಿ ಹೇಳಿದರು.
ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ತಂತ್ರಜ್ಞಾನ, ಕೈಗಾರಿಕೆ, ಉದ್ಯಮ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ತಮ್ಮ ಜ್ಞಾನ ಮತ್ತು ಅನುಭವವನ್ನು ಭಾರತದೊಂದಿಗೆ ಹಂಚಿಕೊಳ್ಳುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.
ಬದಲಾಗುತ್ತಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಹೊಸ ಉದ್ಯಮಗಳು, ನವೀನ ಆಲೋಚನೆಗಳು ಮತ್ತು ತಂತ್ರಜ್ಞಾನ ಆಧಾರಿತ ವ್ಯವಹಾರಗಳಿಗೆ ಹೆಚ್ಚಿನ ಅವಕಾಶಗಳಿವೆ. ಯುವ ಉದ್ಯಮಿಗಳು ಇಂತಹ ಅವಕಾಶಗಳನ್ನು ಗುರುತಿಸಿ ಮುನ್ನಡೆಯಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಪ್ರಧಾನಿ ಮೋದಿ ಅವರ ವಿಕಸಿತ ಭಾರತ 2047ರ ಕನಸನ್ನು ಸಾಕಾರಗೊಳಿಸಲು ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳ ಮೂಲಕ ದೇಶ ಮುನ್ನಡೆಯುತ್ತಿದೆ. ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಭಾರತ ಜಾಗತಿಕವಾಗಿ ತನ್ನ ಸ್ಥಾನವನ್ನು ಬಲಪಡಿಸುತ್ತಿದೆ ಎಂದು ಅವರು ಹೇಳಿದರು.
ಮೋದಿ ಸಂಪುಟದಲ್ಲಿ ತಾವು ಬೃಹತ್ ಕೈಗಾರಿಕೆ ಮತ್ತು ಉಕ್ಕು ಎಂಬ ಎರಡು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದು, ಈ ಎರಡೂ ಕ್ಷೇತ್ರಗಳು ರಾಷ್ಟ್ರದ ಅಭಿವೃದ್ಧಿಗೆ ಪ್ರಮುಖ ಆಧಾರಸ್ತಂಭಗಳಾಗಿವೆ. ತಂತ್ರಜ್ಞಾನ, ಉತ್ಪಾದನೆ ಮತ್ತು ನಾವೀನ್ಯತೆಗೆ ಈ ಕ್ಷೇತ್ರಗಳು ಹೆಚ್ಚಿನ ಒತ್ತು ನೀಡುತ್ತಿವೆ ಎಂದು ಕುಮಾರಸ್ವಾಮಿ ಹೇಳಿದರು.
ಬೃಹತ್ ಕೈಗಾರಿಕೆ ಕ್ಷೇತ್ರದ ಕ್ರಮಗಳನ್ನು ವಿವರಿಸಿದ ಅವರು, ಮಾಲಿನ್ಯಮುಕ್ತ ಸಾರಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ₹10,900 ಕೋಟಿ ಮೊತ್ತದ PM E-DRIVE ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ಟ್ರಕ್ಗಳು ಮತ್ತು ಬಸ್ಗಳು ದೇಶದ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ ಎಂದು ಹೇಳಿದರು.
ಆಟೋಮೊಬೈಲ್ ಕ್ಷೇತ್ರವನ್ನು ಸದೃಢಗೊಳಿಸಿ ಸ್ವಾವಲಂಬನೆ ಉತ್ತೇಜಿಸಲು ₹25,938 ಕೋಟಿ ಮೊತ್ತದ ಉತ್ಪಾದನಾ ಉತ್ತೇಜನ ಯೋಜನೆಯನ್ನು ಜಾರಿಗೊಳಿಸಲಾಗಿದೆ. 50 ಗಿಗಾವ್ಯಾಟ್ ACC ಬ್ಯಾಟರಿ ಸಾಮರ್ಥ್ಯದ ಕಾರ್ಯಕ್ರಮದಡಿ ₹18,100 ಕೋಟಿ ಮೊತ್ತದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ವಿರಳ ಖನಿಜ ಸಂಪನ್ಮೂಲಗಳ ಉತ್ಪಾದನೆ ಮತ್ತು ಅಭಿವೃದ್ಧಿಗಾಗಿ ₹7,280 ಕೋಟಿ ಮೊತ್ತದ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಲಾಗಿದೆ ಎಂದೂ ಕುಮಾರಸ್ವಾಮಿ ತಿಳಿಸಿದರು.
ಉಕ್ಕು ಕ್ಷೇತ್ರದಲ್ಲಿ ಭಾರತ ದೃಢವಾದ ಬೆಳವಣಿಗೆ ಸಾಧಿಸುತ್ತಿದ್ದು, 2030ರ ವೇಳೆಗೆ ದೇಶೀಯವಾಗಿ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
2070ರ ವೇಳೆಗೆ ಉಕ್ಕು ಉತ್ಪಾದನೆಯಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ತರುವ ಗುರಿಯನ್ನೂ ದೇಶ ಹೊಂದಿದೆ. ದೇಶೀಯ ಉಕ್ಕು ಉತ್ಪಾದನೆಗೆ ಉತ್ತೇಜನ ನೀಡಲು ₹6,322 ಕೋಟಿ ಮೊತ್ತದ ಉತ್ಪಾದನಾ ಉತ್ತೇಜನ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅವರು ಹೇಳಿದರು.
ಉಕ್ಕು ಉತ್ಪಾದನೆ ಮತ್ತು ಬಳಕೆಯಲ್ಲಿ ಭಾರತದ ಪ್ರಮುಖ ಸ್ಥಾನವು ವಿವಿಧ ಕ್ಷೇತ್ರಗಳಲ್ಲಿ ದೇಶ ಸಾಧಿಸುತ್ತಿರುವ ವೇಗದ ಅಭಿವೃದ್ಧಿಯನ್ನು ಪ್ರತಿಬಿಂಬಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತವು ಹೂಡಿಕೆಗೆ ಮಹತ್ವದ ಅವಕಾಶಗಳನ್ನು ಹೊಂದಿರುವ ರಾಷ್ಟ್ರವಾಗಿದೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.
ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಮ್ಮ ಪರಿಣತಿ, ಅನುಭವ ಮತ್ತು ಉದ್ಯಮಶೀಲ ಸಾಮರ್ಥ್ಯವನ್ನು ಭಾರತದಲ್ಲಿ ಉದ್ಯಮಗಳನ್ನು ನಿರ್ಮಿಸಲು ಬಳಸಿಕೊಳ್ಳಬೇಕು ಎಂದು ಅವರು ಮತ್ತೊಮ್ಮೆ ಕರೆ ನೀಡಿದರು.
ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದರು. AKKA ಪ್ರಮುಖ ಅಮರನಾಥ ಗೌಡ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, AKKA ಅಧ್ಯಕ್ಷ ಮಧು ರಂಗಯ್ಯ ಹಾಗೂ ಅಮೆರಿಕದಲ್ಲಿರುವ ಭಾರತದ ಡೆಪ್ಯುಟಿ ಕಾನ್ಸುಲ್ ಜನರಲ್ ವಿಶಾಲ್ ಹರ್ಷ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಉದ್ಯಮಿಗಳು, ವೃತ್ತಿಪರರು, ತಂತ್ರಜ್ಞಾನ ಕ್ಷೇತ್ರದ ಪರಿಣತರು ಮತ್ತು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ವೇದಿಕೆಯಲ್ಲಿ ಭಾಗವಹಿಸಿ ಭಾರತ–ಅಮೆರಿಕ ನಡುವಿನ ಉದ್ಯಮ, ಹೂಡಿಕೆ, ತಂತ್ರಜ್ಞಾನ ಮತ್ತು ವೃತ್ತಿಪರ ಸಹಕಾರದ ಕುರಿತು ಚರ್ಚಿಸಿದರು.
