Home ಕ್ರೀಡೆ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ 43 ರನ್‌ ನಿಂದ ಭರ್ಜರಿ ಜಯ

ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ 43 ರನ್‌ ನಿಂದ ಭರ್ಜರಿ ಜಯ

16
0

ಪಲ್ಲೆಕೆಲೆ : ನೂತನ ನಾಯಕ ಸೂರ್ಯಕುಮಾರ್ ಯಾದವ್(58 ರನ್, 26 ಎಸೆತ, 8 ಬೌಂಡರಿ, 2 ಸಿಕ್ಸರ್) ಅರ್ಧಶತಕ, ರಿಯಾನ್ ಪರಾಗ್(3-5)ನೇತೃತ್ವದ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್ ತಂಡ ಆತಿಥೇಯ ಶ್ರೀಲಂಕಾ ತಂಡವನ್ನು ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ 43 ರನ್‌ ನಿಂದ ಮಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಶನಿವಾರ ಟಾಸ್ ಜಯಿಸಿದ ಶ್ರೀಲಂಕಾ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತು. ಭಾರತವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಲಂಕಾ ತಂಡ ಪಥುಮ್ ನಿಸ್ಸಾಂಕ(79ರನ್, 48 ಎಸೆತ), ಕುಶಾಲ್ ಮೆಂಡಿಸ್(45 ರನ್, 27 ಎಸೆತ) ನೀಡಿದ ಉತ್ತಮ ಆರಂಭದ ಹೊರತಾಗಿಯೂ 19.2 ಓವರ್‌ಗಳಲ್ಲಿ 170 ರನ್‌ಗೆ ಆಲೌಟಾಯಿತು.

ಭಾರತದ ಪರ ಪರಾಗ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಅರ್ಷದೀಪ್ ಸಿಂಗ್(2-24), ಅಕ್ಷರ್ ಪಟೇಲ್(2-38)ತಲಾ 2 ವಿಕೆಟ್ ಪಡೆದರು. ಮುಹಮ್ಮದ್ ಸಿರಾಜ್(1-23) ಹಾಗೂ ರವಿ ಬಿಷ್ನೋಯ್(1-37) ತಲಾ ಒಂದು ವಿಕೆಟ್ ಪಡೆದರು.

ಯಶಸ್ವಿ ಜೈಸ್ವಾಲ್(40 ರನ್, 21 ಎಸೆತ) ಹಾಗೂ ಶುಭಮನ್ ಗಿಲ್(34 ರನ್, 16 ಎಸೆತ)ಮೊದಲ ವಿಕೆಟ್‌ಗೆ ಕೇವಲ 6 ಓವರ್‌ಗಳಲ್ಲಿ 74 ರನ್ ಜೊತೆಯಾಟ ನಡೆಸಿ ಭಾರತಕ್ಕೆ ಬಿರುಸಿನ ಆರಂಭ ಒದಗಿಸಿದರು.

ಗಿಲ್ ಹಾಗೂ ಜೈಸ್ವಾಲ್ ಬೆನ್ನುಬೆನ್ನಿಗೆ ಔಟಾದಾಗ ಜೊತೆಯಾದ ಸೂರ್ಯಕುಮಾರ್ ಹಾಗೂ ರಿಷಭ್ ಪಂತ್(49 ರನ್, 33 ಎಸೆತ) 3ನೇ ವಿಕೆಟ್‌ಗೆ 76 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಪಂತ್ ಒಂದು ರನ್‌ ನಿಂದ ಅರ್ಧಶತಕ ವಂಚಿತರಾದರು.

ಹಾರ್ದಿಕ್ ಪಾಂಡ್ಯ(9), ರಿಯಾನ್ ಪರಾಗ್(7ರನ್), ರಿಂಕು ಸಿಂಗ್(1ರನ್) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

ಶ್ರೀಲಂಕಾದ ಪರ ವೇಗದ ಬೌಲರ್ ಮಥೀಶ ಪಥಿರನ(4-40)ಅತ್ಯಂತ ಯಶಸ್ವಿ ಪ್ರದರ್ಶನ ನೀಡಿದರು. ಲಂಕಾವು ಕೆಲವು ಕ್ಯಾಚ್ ಕೈಚೆಲ್ಲಿತು.

LEAVE A REPLY

Please enter your comment!
Please enter your name here