Home ಮಂಡ್ಯ ಕಾವೇರಿ ನದಿಯಲ್ಲಿ ಪ್ರವಾಹ: ದೇವಾಲಯ, ರಸ್ತೆ, ಜಮೀನು ಜಲಾವೃತ

ಕಾವೇರಿ ನದಿಯಲ್ಲಿ ಪ್ರವಾಹ: ದೇವಾಲಯ, ರಸ್ತೆ, ಜಮೀನು ಜಲಾವೃತ

18
0

ಮಂಡ್ಯ: ಜಲಾಶಯಕ್ಕೆ ಒಳಹರಿವು ಏರಿಕೆ ಹಿನ್ನೆಲೆಯಲ್ಲಿ ಕೆಆರ್‍ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ ಒಂದು ಲಕ್ಷದ ಮೂವತ್ತು ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಸುತ್ತಿದ್ದು, ನದಿಯಲ್ಲಿ ಪ್ರವಾಹ ಉಂಟಾಗಿದೆ. ಶ್ರೀರಂಗಪಟ್ಟಣದ ನದಿ ತೀರದ ದೇವಾಲಯ, ಐತಿಹಾಸಿಕ ಕಟ್ಟಡಗಳು, ರಸ್ತೆಗಳು ಜಲಾವೃತವಾಗಿವೆ.

ಪಟ್ಟಣದ ಹೊರವಲಯದ ಗಂಜಾಂನಲ್ಲಿರುವ ಪ್ರಸಿದ್ಧ ನಿಮಿಷಾಂಬ ದೇವಾಲಯದ ಆವರಣ ಜಲಾವೃತವಾಗಿದೆ. ದೇವಾಲಯದ ಮೆಟ್ಟಿಲುಗಳು ಮುಳುಗಡೆಯಾಗಿವೆ. ದೇವಸ್ಥಾನದಲ್ಲಿ ತರಕಾರಿ, ಇತರೆ ಪದಾರ್ಥಗಳನ್ನು ನೆಲದ ಮೇಲೆ ಮಾರಾಟ ಮಾಡುತ್ತಿದ್ದ ವ್ಯಾಪಾರಗಾರರು ತೊಂದರೆಗೊಳಗಾಗಿದ್ದಾರೆ. 1991ರಲ್ಲೂ ದೇವಾಲಯದ ಆವರಣ ಜಲಾವೃತವಾಗಿತ್ತು.

1280438 27mdy 2a a4lRiL

ಪ್ರಸಿದ್ಧ ರಂಗನತಿಟ್ಟು ಬಳಿ ಕಾವೇರಿ ತುಂಬಿ ಹರಿಯುತ್ತಿರುವುದರಿಂದ ಪಕ್ಷಿಧಾಮಕ್ಕೆ ನೀರು ನುಗ್ಗಿದೆ. ಮರಗಳು ಮರಳಗಳಲ್ಲಿರುವ ಪಕ್ಷಿಗಳು ತೊಂದರೆಯಲ್ಲಿವೆ. ಶ್ರೀರಂಗಪಟ್ಟಣದ ಬಳಿ ಇರುವ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮಟ್ಟದವರೆಗೆ ನದಿಯಲ್ಲಿ ನೀರು ಹರಿಯುತ್ತಿದ್ದು, ಮುಳುಗುವ ಹಂತ ತಲುಪಿದೆ.

ಪಟ್ಟಣದಿಂದ ಪಾಲಹಳ್ಳಿ ಮಾರ್ಗವಾಗಿ ಮೈಸೂರು, ಕೆಆರ್‍ಎಸ್, ರಂಗನತಿಟ್ಟು ಪಕ್ಷಿಧಾಮಕ್ಕೆ ಸಂಪರ್ಕ ಕಲ್ಪಿಸುವ ಪಶ್ಚಿಮ ವಾಹಿನಿ ಬಳಿಯ ರೈಲ್ವೆ ಸೇತುವೆಯ ಕೆಳಗಿನ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರಕ್ಕೆ ಅಡೆತಡೆಯಾಗಿದೆ. ದ್ವಿಚಕ್ರವಾಹನ, ಆಟೋರಿಕ್ಷಾ ಚಾಲಕರು ಸೇತುವೆ ಕೆಳಗೆ ಚಲಿಸಲು ಪರದಾಡುತ್ತಿದ್ದಾರೆ.

ದೊಡ್ಡ ಗೋಸಾಯಿಘಾಟ್ ಬಳಿ ಇರುವ ಪಾಂಡುರಂಗ, ಕಾಶಿ ವಿಶ್ವನಾಥ, ಆಂಜನೇಯಸ್ವಾಮಿ ದೇವಾಲಯಗಳು ಭಾಗಶಃ ಮುಳುಗಿವೆ. ಚಿಕ್ಕ ಗೋಸಾಯಿಘಾಟ್ ಬಳಿಯ ವಿಶ್ವನಾಥ ದೇವಾಲಯದ ಗರ್ಭಗುಡಿಯಲ್ಲಿ ಸುಮಾರು ಮೂರು ಅಡಿಯಷ್ಟು ನೀರು ತುಂಬಿದೆ. ಕಾವೇರಿಪುರ ಬಡಾವಣೆಯ ಶನೇಶ್ವರಸ್ವಾಮಿ ದೇವಾಲಯ ಮತ್ತು ಕೆಲವು ಮನೆಗಳಿಗೆ ನೀರು ನುಗ್ಗಿದೆ.

ನದಿಯಲ್ಲಿ ನೀರಿನ ಪ್ರವಾಹ ಏರಿಕೆಯಾಗುತ್ತಿದ್ದಂತೆ ಎರಡು ತೀರದ ಜಮೀನುಗಳು ಮುಳುಗಡೆಯಾಗುತ್ತಿವೆ. ತಗ್ಗುಪ್ರದೇಶಗಳು ಭಾಗಶಃ ಮುಳುಗಡೆಯಾಗಿವೆ. ಭತ್ತದ ಪೈರು ಒಡ್ಡಿದ್ದ ರೈತರು ಕಂಗಾಲಾಗಿದ್ದಾರೆ. ನದಿಯಲ್ಲಿ ಪ್ರವಾಹ ಹೆಚ್ಚಾಗುವ ಸಂಭವವಿದ್ದು, ಮತ್ತಷ್ಟು ಜಮೀನು ಮುಳುಗಡೆಯಾಗುವ ಆತಂಕ ರೈತರಲ್ಲಿ ಮೂಡಿದೆ.

ಶನಿವಾರವೂ ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳ ಜತೆ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನದಿಯಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾನುವಾರುಗಳು, ಇತರ ವಸ್ತುಗಳ ರಕ್ಷಣೆಗೆ ಎಚ್ಚರಿಕೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here