ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸೋಮವಾರ(ಸೆ.2) ಮಧ್ಯಾಹ್ನ 2:30ಕ್ಕೆ ವಿಚಾರಣೆ ಮುಂದೂಡಿದೆ.
ಪ್ರಾಸಿಕ್ಯೂಷನ್ ರದ್ದು ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಸರ್ಕಾರ, ಮಧ್ಯಂತರ ಅರ್ಜಿದಾರರಿಗೆ ವಾದ ಮಂಡಿಸಲು ಕಾಲಾವಕಾಶ ನೀಡಿದೆ. ರಾಜ್ಯಪಾಲರು, ಖಾಸಗಿ ದೂರುದಾರರ ಪರ ವಕೀಲರ ವಾದ ಮುಕ್ತಾಯ ಆಗಿದೆ.
ಸಿಎಂ ಪರ ವಕೀಲ ರವಿವರ್ಮ ಕುಮಾರ್ ವಾದ
‘ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳಡಿಯಲ್ಲಿ ತನಿಖೆಗೆ ಅನುಮತಿ ನೀಡಲಾಗಿದೆ. ಆರೋಪಿತ ಘಟನೆ ನಡೆದಾಗ ಭಾರತೀಯ ನ್ಯಾಯ ಸಂಹಿತೆ ಜಾರಿಯಲ್ಲಿರಲಿಲ್ಲ. ಹೀಗಾಗಿ ರಾಜ್ಯಪಾಲರ ಅನುಮತಿಯೇ ಕಾನೂನುಬಾಹಿರ. ಐಪಿಸಿ ಸೆಕ್ಷನ್‌ನಡಿ ಅನುಮತಿ ನೀಡುತ್ತೇನೆಂದು ಹೇಳಬಹುದಿತ್ತು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿಲ್ಲವೆಂಬುದಕ್ಕೆ ಇದು ಸಾಕ್ಷಿ. ಸಿಎಂ ಪತ್ನಿ ಪಾರ್ವತಿ ಹಾಗೂ ಅವರ ಸಹೋದರನ ವಿರುದ್ಧ ಆರೋಪವಿದೆ. ಪತ್ನಿ ಹಾಗೂ ಮೈದುನನ ಲೋಪಗಳಿಗೆ ಸಿಎಂ ಜವಾಬ್ದಾರಿಯಾಗುತ್ತಾರೆಯೇ?’ ಹೀಗೆಂದು ಸಿಎಂ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದಿಸಿದರು.
ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪತ್ನಿ ಪರವಾಗಿ ಪತಿಗೆ ಪವಿತ್ರವಾದ ಹೊಣೆಗಾರಿಕೆ ಇರುತ್ತದೆ. ಎಲ್ಲಾ ಲೋಪಗಳನ್ನೂ ಪತಿ ಪತ್ನಿ ಮೇಲೆ ಹೊರಿಸಬಾರದು ಎಂದು ಹೇಳಿದರು.
17A ಅಡಿಯಲ್ಲಿ ಮೇಲ್ನೋಟಕ್ಕೆ ಅಪರಾಧ ಕಂಡುಬರುತ್ತದೆಯೇ ನೋಡಬೇಕು. ರಾಜ್ಯಪಾಲರು ನ್ಯಾಯಮೂರ್ತಿಯಲ್ಲ, ಅವರು ಅಂತಿಮ ತೀರ್ಪು ನೀಡುತ್ತಿಲ್ಲ. ಮೇಲ್ನೋಟಕ್ಕೆ ಅಪರಾಧದ ಅಂಶಗಳಿವೆಯೇ ಇಲ್ಲವೇ ನೋಡಬೇಕು. ರಾಜ್ಯಪಾಲರು ವಿವರ ಕಾರಣ ನೀಡಿದರೆ ತನಿಖೆ ಮೇಲೆ ಪ್ರಭಾವವಾಗುತ್ತದೆ. ಹೀಗಾಗಿ ಕೇವಲ ವಿವೇಚನೆ ಬಳಸಿ ರಾಜ್ಯಪಾಲರು ತೀರ್ಮಾನಿಸಬೇಕು. 17 ಎ ಹಂತದಲ್ಲಿ ಸಹಜ ನ್ಯಾಯ ಪಾಲಿಸಬೇಕಾದ ಅಗತ್ಯವಿಲ್ಲ. ಸಿಎಂಗೆ ಶೋಕಾಸ್ ನೋಟಿಸ್ ನೀಡಲೇಬೇಕೆಂಬ ನಿಯಮವಿಲ್ಲ. ಹೀಗಾಗಿ ಅಬ್ರಹಾಂ ದೂರಿಗೆ ಮಾತ್ರ ಶೋಕಾಸ್ ನೋಟಿಸ್ ನೀಡಿದ್ದಾರೆ. ಉಳಿದ ಇಬ್ಬರ ದೂರಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್ ನೀಡಿಲ್ಲ. ಶೋಕಾಸ್ ನೋಟಿಸ್ ನೀಡಬೇಕಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ತುಷಾರ್ ಮೆಹ್ತಾ ವಾದ ಮಂಡನೆ ಮಾಡಿದರು.
ಮುಖ್ಯಮಂತ್ರಿಯ ಪ್ರಾಸಿಕ್ಯೂಷನ್ ವೇಳೆ ಸಚಿವ ಸಂಪುಟದ ನಿರ್ಣಯ ಬೇಕಿಲ್ಲ. ಹೀಗೆಂದು ಹಲವು ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.
ಇದಾದ ನಂತರ ವಾದ ಮುಂದುವರಿಸಿದ ತುಷಾರ್ ಮೆಹ್ತಾ, ಸಿಎಂ ಪರ ಅಭಿಷೇಕ್ ಮನುಸಿಂಘ್ವಿ ಉಲ್ಲೇಖಿಸಿದ ತೀರ್ಪುಗಳು ರಾಜ್ಯಪಾಲರ ಪರವಾಗಿಯೇ ಇವೆ ಎಂದರು. ಅಲ್ಲದೇ ರಾಜ್ಯಪಾಲರ ಬಗ್ಗೆ ಕಾಂಗ್ರೆಸ್ ನಾಯಕರು ಬಳಸಿದ್ದ ಪದಗಳನ್ನೂ ಉಲ್ಲೇಖಿಸಿದರು.