ಬೆಳಗಾವಿ: ಪತ್ನಿ ಹಾಗೂ ಅತ್ತೆ ಸೇರಿಕೊಂಡು ಸಾಲಗಾರ ಪತಿಯನ್ನು ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಪೀರವನಾಡಿ ನಿವಾಸಿ ವಿನಾಯಕ್ ಜಾಧವ್ (48) ಕೊಲೆಯಾದ ಪತಿ. ಜುಲೈ 29ರಂದು ರಾತ್ರಿ ಅಮ್ಮ-ಮಗಳು ಸೇರಿಕೊಂಡು ಸಾಲಗಾರ ಪತಿಯನ್ನು ಹತ್ಯೆ ಮಾಡಿದ್ದಾರೆ. ವಿನಾಯಕ್ ಜಾಧವ್ ಉದ್ಯಮಬಾಗದಲ್ಲಿ ಸ್ವಂತ ಉದ್ಯಮ ಹೊಂದಿದ್ದ.
ಉದ್ಯಮದಲ್ಲಿ ನಷ್ಟವಾದ ಹಿನ್ನೆಲೆ ವಿಪರೀತ ಸಾಲ ಮಾಡಿಕೊಂಡಿದ್ದ. ಬಳಿಕ ಸಾಲಗಾರರ ಕಾಟಕ್ಕೆ ಬೇಸತ್ತು ಮನೆಯನ್ನು ಸಾಲಕ್ಕೆ ಅಡಮಾನವಾಗಿ ಇಟ್ಟು ಜನರ ಕಿರುಕುಳಕ್ಕೆ ನೊಂದು ಬೆಳಗಾವಿ ಬಿಟ್ಟುh ಮೂರು ವರ್ಷಗಳಿಂದ ಪರಾರಿಯಾಗಿದ್ದ. ಜುಲೈ 29ರಂದು ವಿನಾಯಕ್ ಜಾಧವ್ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಮನೆಯಲ್ಲಿ ಪತ್ನಿ ರೇಣುಕಾ ಜೊತೆಗೆ ವಿಪರೀತ ಜಗಳ ಮಾಡಿದ್ದ.
ಬಳಿಕ ಪತಿಯನ್ನು ಹಗ್ಗದಿಂದ ಕುತ್ತಿಗೆ ಕಟ್ಟಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಹತ್ಯೆಗೆ ಪತ್ನಿ ರೇಣುಕಾಗೆ ಆಕೆಯ ತಾಯಿ ಶೋಭಾ ಸಾಥ್ ನೀಡಿದ್ದರು. ಹತ್ಯೆ ಬಳಿಕ ಶವವನ್ನು ಮನೆಯ ಮುಂಭಾಗದಲ್ಲಿ ಬಿಸಾಡಿದ್ದರು. ಬೆಳಗ್ಗೆ ಅಕ್ಕಪಕ್ಕದ ಮನೆಯವರನ್ನು ಕರೆದು ಪತಿ ಮದ್ಯಪಾನ ಮಾಡಿ ಬಿದ್ದಿದ್ದಾನೆ. ಇದು ಕೊಲೆಯಲ್ಲ, ಸಹಜ ಸಾವು ಎಂದು ತಾಯಿ, ಮಗಳು ಬಿಂಬಿಸಿದ್ದರು.
ಆದರೆ ವಿನಾಯಕ್ ಜಾಧವ್ ಸಹೋದರ ಅರುಣ್ ಸಾವಿನಲ್ಲಿ ಶಂಕೆ ಇದೆ ಎಂದು ದೂರು ನೀಡಿದ್ದರು. ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಿಂದ ಕೊಲೆ ರಹಸ್ಯ ಬಯಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸರು ಕೊಲೆಯ ರಹಸ್ಯ ಬಯಲು ಮಾಡಿದ್ದಾರೆ. ಪ್ರಕರಣ ಸಂಬಂಧ ಪತ್ನಿ ರೇಣುಕಾ ಹಾಗೂ ಆಕೆಯ ತಾಯಿ ಶೋಭಾಳನ್ನು ಪೊಲೀಸರು ಬಂಧಿಸಿದ್ದಾರೆ.