ಉಪ ಮುಖ್ಯಮಂತ್ರಿಗಳಿಗೆ ಒಪ್ಪಿಗೆ ಪತ್ರ ನೀಡಿದ ಜೈನ್ ಸಮೂಹದ ಅಧ್ಯಕ್ಷ
ಬೆಂಗಳೂರು:
ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಒಂದು ಸಾವಿರ ಪದವಿ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ಶಿಕ್ಷಣ ನೀಡಲು ಮುಂದೆ ಬಂದಿರುವ ಜೈನ್ ವಿಶ್ವವಿದ್ಯಾಲಯವು, ಈ ಕುರಿತ ಒಪ್ಪಿಗೆ ಪತ್ರವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ನೀಡಿತು.
ಜೈನ್ ಸಂಸ್ಥೆಯ 30ನೇ ವಾರ್ಷಿಕೋತ್ಸವದ ನಿಮಿತ್ತ ಶೇಷಾದ್ರಿಪುರದ ಕಾಲೇಜು ಕ್ಯಾಂಪಸ್ ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಚೆನ್‌ರಾಜ್ ರಾಯ್‌ಚಂದ್ ಅವರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ, ಅದನ್ನು ಡಿಸಿಎಂಗೆ ಹಸ್ತಾಂತರ ಮಾಡಿದರು.
ಈ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ಅತ್ಯುತ್ತಮ ಶಿಕ್ಷಣ ನೀಡಲಾಗುವುದು. ಜತೆಗೆ, ಅವರಿಗೆ ಅಗತ್ಯವಾದ ಎಲ್ಲ ಶೈಕ್ಷಣಿಕ ಅಗತ್ಯಗಳನ್ನೂ, ಪರಿಕರಗಳನ್ನೂ ಒದಗಿಸಲಾಗುವುದು ಎಂದು ಜೈನ್ ಸಂಸ್ಥೆ ತಿಳಿಸಿದೆ. ಇಂಥ ವಿದ್ಯಾರ್ಥಿಗಳಿಗೆ 100% ಸ್ಕಾಲರ್‌ಶಿಪ್ ಅನ್ನೂ ಸಂಸ್ಥೆ ಘೋಷಣೆ ಮಾಡಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಸಂಕಷ್ಟಕ್ಕೆ ಸಿಲುಕಿರುವ ಪ್ರತಿ ವಿದ್ಯಾರ್ಥಿಯನ್ನೂ ವಿಶೇಷವಾಗಿ ಗಮನಿಸಲಾಗುವುದು. ಅವರ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಜೈನ್ ಸಂಸ್ಥೆ ನೀಡಿದ ಭರವಸೆಗೆ ಡಿಸಿಎಂ ಸಂತಸ ವ್ಯಕ್ತಪಡಿಸಿದರು.
I appreciate @JainDeemedtbUnv for providing 100% scholarships to children of #COVID19 victims. Every gesture of support matters.
— Dr. Ashwathnarayan C. N. (@drashwathcn) July 7, 2021
Participated in the institution's 30th Year Celebrations. Continue to excel in education sector. My best wishes! pic.twitter.com/EXCQIGarXE
ಪಾರಂಪರಿಕ ಕಾಲೇಜು ಕಟ್ಟಡಗಳ ಅಭಿವೃದ್ಧಿ:
ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ಸರಕಾರಿ ಶಾಲೆಯ ಪಾರಂಪರಿಕ ಕಲ್ಲು ಕಟ್ಟಡ ಹಾಗೂ ರೆಸ್‌ಕೋರ್ಸ್ ರಸ್ತೆಯಲ್ಲಿ ಪಾರಂಪರಿಕ ಆರ್.ಸಿ.ಕಾಲೇಜಿನ ಕಲ್ಲು ಕಟ್ಟಡಗಳನ್ನು ಸಂರಕ್ಷಿಸಿ ನವೀಕರಣ ಮಾಡುವುದಕ್ಕೂ ಜೈನ್ ಶಿಕ್ಷಣ ಸಂಸ್ಥೆ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಈ ಬಗ್ಗೆ ಉಪ ಮುಖ್ಯಮಂತ್ರಿಗಳು ಇಟ್ಟ ಪ್ರಸ್ತಾವನೆಗೆ ಅತ್ಯಂತ ಸಕಾರಾತ್ಮಕವಾಗಿ ಪ್ರತಿಕ್ರಿಸಿದ ಡಾ.ಚೆನ್‌ರಾಜ್ ರಾಯ್‌ಚಂದ್, ಆದಷ್ಟು ಬೇಗ ನಮ್ಮ ಪರಿಶೀಲನಾ ತಂಡವನ್ನು ಎರಡೂ ಕಟ್ಟಡಗಳನ್ನು ವೀಕ್ಷಿಸಲು ಕಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪ ಕುಲಪತಿ, ಪ್ರಾಧ್ಯಾಪಕರು, ಸಿಬ್ಬಂದಿ ಇನ್ನಿತರರು ಹಾಜರಿದ್ದರು. ಇದೇ ವೇಳೆ 30ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬೃಹತ್ ಕೇಕ್ ಅನ್ನು ಕೂಡ ಕತ್ತರಿಸಿ ಸಂಭ್ರಮಿಸಲಾಯಿತು.