•ಎಫ್ ಕೆ ಸಿ ಸಿ ಐ ವತಿಯಿಂದ ಆಯೋಜಿಸಿದ್ದ ಸಂವಾದ ಸಭೆಯಲ್ಲಿ ಭಾಗಿ
•ಸಚಿವ ಸಂಫುಟ ಸಭೆಯಲ್ಲಿ ಈ ಬಗ್ಗೆ ಶೀಘ್ರದಲ್ಲೇ ಪ್ರಸ್ತಾಪ
•ಟೌನ್‌ಶಿಪ್‌ಗಳಿಗೆ ಅನುಮತಿ ನೀಡುವ ಕಾರ್ಯಕ್ಕೂ ಚುರುಕು
ಬೆಂಗಳೂರು:
ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಯ ಮಧ್ಯಸ್ಥವಾಗಿ ಕೈಗಾರಿಕೆಗಳಿಗೆ ಪ್ರತ್ಯೇಕ ಸ್ಲಾಬನ್ನ ಘೋಷಿಸುವ ಬಗ್ಗೆ ಶೀಘ್ರದಲ್ಲೇ ಕೈಗಾರಿಕಾ, ನಗರಾಭಿವೃದ್ದಿ ಹಾಗೂ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಎಫ್‌ಕೆಸಿಸಿಐ ನಲ್ಲಿ ನಗರಾಭಿವೃದ್ದಿ ಸಚಿವರು ಹಾಗೂ ಕೈಗಾರಿಕಾ ಸಚಿವರೊಂದಿಗೆ ಆಸ್ತಿ ತೆರಿಗೆ ಪರಿಷ್ಕರಣೆಯ ಕುರಿತಂತೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆಸ್ತಿ ತೆರಿಗೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಕೈಗಾರಿಕೋದ್ಯಮಿಗಳು ಸಾಕಷ್ಟು ಬಾರಿ ಮನವಿಯನ್ನು ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ನಗರಾಭಿವೃದ್ದಿ ಹಾಗೂ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಲವಾರು ಬಾರಿ ಸಭೆಗಳನ್ನು ನಡೆಸಲಾಗಿದೆ. ಅಲ್ಲದೆ, ಈ ಬಾರಿಯ ಆಯವ್ಯಯದಲ್ಲಿ ಹಾಗೂ ನೂತನ ಕೈಗಾರಿಕಾ ನೀತಿಯಲ್ಲೂ ಪ್ರಸ್ತಾಪಿಸಲಾಗಿದೆ. ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಯ ಮಧ್ಯಸ್ಥವಾಗಿ ಕೈಗಾರಿಕೆಗಳಿಗೆ ನೂತನ ಸ್ಲಾಬನ್ನು ರಚಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ವಿಷಯವಾಗಿ ಸಚಿವ ಸಂಪುಟದ ಮುಂದೆ ನಗರಾಭಿವೃದ್ದಿ ಇಲಾಖೆಯ ವತಿಯಿಂದ ಶೀಘ್ರದಲ್ಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಹಳೆಯ ತೆರಿಗೆಯ ಬಗ್ಗೆ:
ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಹಾಗೂ ಕೆಎಸ್‌ಎಸ್‌ಐಡಿಸಿ ವತಿಯಿಂದ ಅಭಿವೃದ್ದಿಪಡಿಸಲಾದ ಕೈಗಾರಿಕಾ ಪ್ರದೇಶಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವ ಮುನ್ನ ತೆರಿಗೆ ಸಂಗ್ರಹ ಮಾಡುವ ಹಾಗಿಲ್ಲ. ಆದರೆ, ಕೆಲವು ಕಡೆ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹಿಸುತ್ತಿವೆ. ಆದರೆ ತೆರಿಗೆ ನೀಡುವ ಕೈಗಾರಿಕೆಗಳು ಸ್ಥಳೀಯ ಸಂಸ್ಥೆಗಳಿಂದ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಆಗದೇ ಇರುವ ಹಿನ್ನಲೆಯಲ್ಲಿ ಹಲವಾರು ದೂರುಗಳನ್ನು ನೀಡುತ್ತಿದ್ದಾರೆ. ಹಳೆಯ ತೆರಿಗೆಯ ಬಗ್ಗೆ ಒಂದು ಸ್ಪಷ್ಟವಾದ ವೈಜ್ಞಾನಿಕ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೂರು ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈ ಎಲ್ಲಾ ರೀತಿಯ ಸಮಸ್ಯೆಗಳಿಗೆ ನಗರಾಭಿವೃದ್ದಿ ಸಚಿವರಾದ ಬಿ.ಎ ಬಸವರಾಜ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ಟೌನ್ ಶಿಪ್‌ಗಳ ಬಗ್ಗೆ:
ಟೌನ್ ಶಿಪ್‌ಗಳನ್ನು ನಿರ್ಮಿಸುವ ಬಗ್ಗೆ ಈಗಾಗಲೇ ಹಲವಾರು ಸುತ್ತಿನ ಚರ್ಚೆಗಳು ನಗರಾಭಿವೃದ್ದಿ ಇಲಾಖೆಯಿಂದಿಗೆ ನಡೆದಿವೆ. ಟೌನ್‌ಶಿಪ್‌ಗಳನ್ನು ನಿರ್ಮಿಸುವ ಮೂಲಕ ಸಂಗ್ರಹವಾಗುವ ಆದಾಯದಲ್ಲಿ ಶೇಕಡಾ 70 ರಷ್ಟು ಟೌನ್‌ಶಿಪ್ ಆಡಳಿತ ಮಂಡಳಿಗೆ ಹಾಗೂ ಶೇಡಕಾ 30 ರಷ್ಟು ಸ್ಥಳೀಯ ಸಂಸ್ಥೆಗಳೀಗೆ ನೀಡುವುದರಿಂದ ಎರಡೂ ಕಡೆ ಅಭಿವೃದ್ದಿ ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಇಂದು ಬೆಂಗಳೂರು ನಗರದಲ್ಲಿ ಎಫ್.ಕೆ.ಸಿ.ಸಿ.ಐ ವತಿಯಿಂದ ಆಯೋಜಿಸಲಾಗಿದ್ದ ಸಂವಾದಾತ್ಮಕ ಸಭೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು.
— Jagadish Shettar (@JagadishShettar) July 8, 2021
Attended an interactive meeting organized by FKCCI at Bengaluru and addressed the participants.#ಬೆಂಗಳೂರು | #Bengaluru @BJP4Karnataka pic.twitter.com/ouiXRjRQu0
ನಗರಾಭಿವೃದ್ದಿ ಸಚಿವ ಬಿ.ಎ ಬಸವರಾಜು ಮಾತನಾಡಿ, ರಾಜ್ಯಾದ್ಯಂತ ಇರುವ ಈ ಸಮಸ್ಯೆಗಳ ಬಗ್ಗೆ ಸರಕಾರದ ಮಟ್ಟದಲ್ಲಿ ಹಲವಾರು ಬಾರಿ ಚರ್ಚೆ ನಡೆದಿದೆ. ಕೈಗಾರಿಕೆಗಳು ಅನುಭಿವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾದ ಚರ್ಚೆ ನಡೆಸಲಾಗಿದೆ. ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಚಿವ ಸಂಪುಟ ಸಭೆಯ ಮುಂದೆ ಟೌನ್‌ಶಿಪ್ ಹಾಗೂ ಕೈಗಾರಿಕೆಗಳ ಆಸ್ತಿ ತೆರಿಗೆ ಆಕರಣೆಯ ಬಗ್ಗೆ ಕ್ಯಾಬಿನೆಟ್ ನೋಟ್ ಮಂಡಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭುಷಣ್, ನಿರ್ದೇಶಕಿ ಶ್ರೀಮತಿ ಕಾವೇರಿ ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಾಲ್ ಎಂ ಸುಂದರ್, ಹಿರಿಯ ಉಪಾಧ್ಯಕ್ಷ ಡಾ. ಐ.ಎಸ್ ಪ್ರಸಾದ್ ಸೇರಿದಂತೆ ರಾಜ್ಯದ ವಿವಿಧ ಬಾಗಗಳಿಂದ ಆಗಮಿಸಿದ್ದ ಎಫ್‌ಕೆಸಿಸಿಐ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.