ಬೆಂಗಳೂರಿನಲ್ಲಿ KOA ಅಧ್ಯಕ್ಷ ಕೆ. ಗೋವಿಂದರಾಜು ಅವರನ್ನು ಭೇಟಿಯಾದ ಜಪಾನ್ ಕಾನ್ಸುಲ್ ಜನರಲ್ ನವಾತ ಹಿರೋಶಿ; ಕಂಠೀರವ ಕ್ರೀಡಾಂಗಣಗಳಿಗೆ ಭೇಟಿ
ಬೆಂಗಳೂರು: ಬೆಂಗಳೂರಿನಲ್ಲಿರುವ ಜಪಾನ್ ಕಾನ್ಸುಲ್ ಜನರಲ್ ನವಾತ ಹಿರೋಶಿ ಅವರು ಶುಕ್ರವಾರ ಕರ್ನಾಟಕ ಒಲಿಂಪಿಕ್ ಭವನದಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ (KOA) ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಭೇಟಿಯ ವೇಳೆ KOA ಭವನದ ಹಾಲ್ ಆಫ್ ಫೇಮ್ ಆವರಣದಲ್ಲಿ ಅಳವಡಿಸಿರುವ ಒಲಿಂಪಿಯನ್ಸ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರ ಛಾಯಾಚಿತ್ರಗಳನ್ನು ಹಿರೋಶಿ ವೀಕ್ಷಿಸಿದರು. ಅಲ್ಲಿ ಸ್ಥಾನ ಪಡೆದಿರುವ ಕ್ರೀಡಾಪಟುಗಳು ಹಾಗೂ ಅಸೋಸಿಯೇಷನ್ನ ಕಾರ್ಯಚಟುವಟಿಕೆಗಳ ಕುರಿತು ಗೋವಿಂದರಾಜು ಅವರಿಗೆ ಮಾಹಿತಿ ನೀಡಿದರು.
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ನ ಕಾರ್ಯವೈಖರಿಯನ್ನು ಹಿರೋಶಿ ಮೆಚ್ಚಿಕೊಂಡಿದ್ದು, ಕರ್ನಾಟಕದ ಕ್ರೀಡಾ ಅಭಿವೃದ್ಧಿಗೆ ಸದಾ ಕೈಜೋಡಿಸುವುದಾಗಿ ತಿಳಿಸಿದರು.
ಬಳಿಕ ಅವರು ಬೆಂಗಳೂರಿನ ಕಂಠೀರವ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳಿಗೆ ಭೇಟಿ ನೀಡಿದರು.
ನಂತರ ಗೋವಿಂದರಾಜು ಅವರು ಹಿರೋಶಿ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ KOA ಪದಾಧಿಕಾರಿಗಳು ಉಪಸ್ಥಿತರಿದ್ದರು.
