ಹರಳೂರು ಮುಖ್ಯ ರಸ್ತೆ ಅಗಲೀಕರಣ: ಆಸ್ತಿಗಳ ಸರ್ವೆಗೆ ಬೆಂಗಳೂರು ದಕ್ಷಿಣ ಆಯುಕ್ತರ ಸೂಚನೆ; ಫುಟ್ಪಾತ್, ಬೇಸ್ಮೆಂಟ್ ಪಾರ್ಕಿಂಗ್ ಉಲ್ಲಂಘನೆ ವಿರುದ್ಧ ಕ್ರಮ
ಬೆಂಗಳೂರು: ಹರಳೂರು ಮುಖ್ಯ ರಸ್ತೆ ಅಗಲೀಕರಣಕ್ಕೆ ಒಳಪಡುವ ಆಸ್ತಿಗಳ ಸಮಗ್ರ ಸರ್ವೆ ನಡೆಸುವಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದ್ದು, ಕಸವನಹಳ್ಳಿ-ಹರಳೂರು ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಬೇಸ್ಮೆಂಟ್ ಪಾರ್ಕಿಂಗ್ ನಿಯಮ ಉಲ್ಲಂಘನೆ, ಅನಧಿಕೃತ ಕಟ್ಟಡಗಳು ಹಾಗೂ ಮಳೆನೀರು ಚರಂಡಿಗೆ ಸಂಸ್ಕರಿಸದ ತ್ಯಾಜ್ಯ ನೀರು ಹರಿಸುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಕಸವನಹಳ್ಳಿ ಹಾಗೂ ಹರಳೂರು ಮುಖ್ಯ ರಸ್ತೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸುಗಮ ಸಂಚಾರ, ಪಾದಚಾರಿ ಮಾರ್ಗಗಳ ನಿರ್ವಹಣೆ ಮತ್ತು ಮೂಲಸೌಕರ್ಯ ಸುಧಾರಣೆ ಕುರಿತು ರಮೇಶ್ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಸವನಹಳ್ಳಿ ಮುಖ್ಯ ರಸ್ತೆಯುದ್ದಕ್ಕೂ ಪಾದಚಾರಿ ಮಾರ್ಗದಲ್ಲಿ ತೆರೆದುಕೊಂಡಿರುವ ಸ್ಲ್ಯಾಬ್ಗಳನ್ನು ತಕ್ಷಣ ಮುಚ್ಚಿ, ಪಾದಚಾರಿಗಳ ಸಂಚಾರಕ್ಕೆ ಸಮತಟ್ಟಾದ ಫುಟ್ಪಾತ್ ನಿರ್ಮಿಸಬೇಕು ಎಂದು ಸೂಚಿಸಿದರು. ಸೋಮೇಶ್ವರಸ್ವಾಮಿ ದೇವಸ್ಥಾನದ ಸಮೀಪ ಹಾಗೂ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಹಾಕಿರುವ ಕಸವನ್ನು ತಕ್ಷಣ ತೆರವುಗೊಳಿಸಿ ಸದಾ ಸ್ವಚ್ಛತೆ ಕಾಪಾಡಿಕೊಳ್ಳುವಂತೆಯೂ ನಿರ್ದೇಶಿಸಿದರು.
ಫುಟ್ಪಾತ್ ಅತಿಕ್ರಮಿಸಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸುತ್ತಿರುವ ಅಂಗಡಿಗಳ ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ಆಯುಕ್ತರು ಸೂಚಿಸಿದರು. ಫುಟ್ಪಾತ್ ಮೇಲೆ ಬೋರ್ಡ್ ಅಳವಡಿಸಿದ್ದ ಡ್ರೀಪ್ ಫುಡ್ ಕೋರ್ಟ್ ಮಳಿಗೆಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಮಾರ್ಷಲ್ಗೆ ನಿರ್ದೇಶಿಸಿದರು.
ಶ್ರೀ ವಿಷ್ಣು ಬೃಂದಾವನ ವೆಜ್ ಹೋಟೆಲ್ ಪಾದಚಾರಿ ಮಾರ್ಗದಲ್ಲಿ ಹಾಕಿರುವ ಬೆಂಚುಗಳನ್ನು ತಕ್ಷಣ ತೆರವುಗೊಳಿಸಬೇಕು ಮತ್ತು ಮತ್ತೆ ಹಾಕಿದರೆ ದಂಡ ವಿಧಿಸಬೇಕು ಎಂದು ಸೂಚಿಸಿದರು. ಆರೋಗ್ಯ ಹಸ್ತ ಆಸ್ಪತ್ರೆ ಮುಂಭಾಗ ಪಾದಚಾರಿ ಮಾರ್ಗದ ಮೇಲೆ ಹಾಕಿರುವ ಸ್ಲ್ಯಾಬ್ ತೆರವುಗೊಳಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದರು.
ವಿಶಾಲ್ ಮೆಗಾ ಮಾರ್ಟ್ ಮುಂಭಾಗ ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ನಿಲ್ಲಿಸಲಾಗುತ್ತಿರುವ ವಾಹನಗಳನ್ನು ಸಂಚಾರ ಪೊಲೀಸರ ಸಹಯೋಗದಲ್ಲಿ ತೆರವುಗೊಳಿಸುವಂತೆ ರಮೇಶ್ ಸೂಚಿಸಿದರು.
ಕಟ್ಟಡದ ಬೇಸ್ಮೆಂಟ್ ಅನ್ನು ಪಾರ್ಕಿಂಗ್ಗೆ ಬಳಸದೆ ನಿಯಮ ಉಲ್ಲಂಘಿಸಿರುವ ‘ಗ್ಲೋನೈಲ್ ಆಶ್’ ಮತ್ತು ‘MBR’ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡುವಂತೆಯೂ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೈಗೊಂಡನಹಳ್ಳಿ ಜಂಕ್ಷನ್ ಬಳಿ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ಗೋಡೆ ನಿರ್ಮಿಸಿರುವ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು. ಈ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಲಾಗುತ್ತಿರುವ ಎಲ್ಲ ಅನಧಿಕೃತ ಕಟ್ಟಡಗಳಿಗೂ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುವಂತೆ ಎಂಜಿನಿಯರ್ಗಳಿಗೆ ನಿರ್ದೇಶಿಸಿದರು.
ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಮಳೆನೀರು ಚರಂಡಿಯನ್ನು ಪರಿಶೀಲಿಸಿದ ಆಯುಕ್ತರು, ರಾಜಕಾಲುವೆ ಒತ್ತುವರಿಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವಂತೆ ಸೂಚಿಸಿದರು.
ಅಪಾರ್ಟ್ಮೆಂಟ್ಗಳು ಹಾಗೂ ವಸತಿ ಪ್ರದೇಶಗಳಿಂದ ಸಂಸ್ಕರಿಸದ ತ್ಯಾಜ್ಯ ನೀರು ಮತ್ತು STP ನೀರನ್ನು ಮಳೆನೀರು ಚರಂಡಿಗೆ ನೇರವಾಗಿ ಹರಿಸುವುದನ್ನು ತಕ್ಷಣ ತಡೆಗಟ್ಟಿ, ಅಂತಹ ಕಟ್ಟಡಗಳಿಗೆ ನೋಟಿಸ್ ನೀಡುವಂತೆಯೂ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಹರಳೂರು ಮುಖ್ಯ ರಸ್ತೆಯಲ್ಲಿ ಸಮಗ್ರ ಪರಿಶೀಲನೆ ನಡೆಸಿದ ರಮೇಶ್, ಸರ್ಜಾಪುರ ರಸ್ತೆಯಿಂದ ಸಿಲ್ವರ್ ಕೌಂಟಿ ಮುಖ್ಯ ರಸ್ತೆಯವರೆಗಿನ ಸುಮಾರು ಮೂರು ಕಿಲೋಮೀಟರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂಬಂಧ ದಿಣ್ಣೆ ಆಂಜನೇಯಸ್ವಾಮಿ ದೇವಸ್ಥಾನದ ರಸ್ತೆ ಜಂಕ್ಷನ್ನಿಂದ ಎರಡೂ ಬದಿಗಳಲ್ಲಿ ತಲಾ 200 ಮೀಟರ್ನಂತೆ ಒಟ್ಟು 400 ಮೀಟರ್ ಉದ್ದದ ಹರಳೂರು ಮುಖ್ಯ ರಸ್ತೆ ಅಗಲೀಕರಣಕ್ಕೆ ಒಳಪಡುವ ಆಸ್ತಿಗಳ ವಿವರಗಳ ಸಮಗ್ರ ಸರ್ವೆ ನಡೆಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೊಮ್ಮನಹಳ್ಳಿ ವಲಯ ಮುಖ್ಯ ಎಂಜಿನಿಯರ್ ಮಾಲತಿ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳು ಪರಿಶೀಲನೆ ವೇಳೆ ಉಪಸ್ಥಿತರಿದ್ದರು.
