ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ಪೂರ್ವ ವಾರ್ಡ್ ಸಂಪರ್ಕ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಕಚೇರಿಯನ್ನು ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಯನಗರ ವಿಭಾಗದ ಕಂದಾಯ ಅಧಿಕಾರಿ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳು ವಾರ್ಡ್ ವ್ಯಾಪ್ತಿಯ ಕುಂದುಕೊರತೆಗಳು, ದೂರುಗಳು ಮತ್ತು ಕಂದಾಯ ಸಂಬಂಧಿತ ಸೇವೆಗಳಿಗಾಗಿ ಇನ್ನು ಮುಂದೆ 9ನೇ ಬ್ಲಾಕ್ ಜಯನಗರದ 41ನೇ ಅಡ್ಡರಸ್ತೆ, 28ನೇ ಮುಖ್ಯರಸ್ತೆಯ ಕಾರ್ಪೊರೇಷನ್ ಕಾಲೋನಿ ಎದುರಿನ ಸಮುದಾಯ ಭವನವನ್ನು ಸಂಪರ್ಕಿಸಬೇಕು.
ಸ್ಥಳಾಂತರಕ್ಕೆ ಕಾರಣ
ಕೇಂದ್ರವು ಜಯನಗರ ಪೂರ್ವ ವಾರ್ಡ್ನ 34ನೇ ‘ಸಿ’ ಅಡ್ಡರಸ್ತೆ, 28ನೇ ಮುಖ್ಯರಸ್ತೆಯಲ್ಲಿ ವಿಷ್ಣುವರ್ಧನ್ ಪಾರ್ಕ್ ಎದುರಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಮೇಲ್ಛಾವಣಿ ಸೇರಿದಂತೆ ಕಟ್ಟಡ ತೀರಾ ಶಿಥಿಲಾವಸ್ಥೆ ತಲುಪಿತ್ತು ಎಂದು ಪ್ರಕಟಣೆ ತಿಳಿಸಿದೆ.
ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಸ್ಥಳಾಂತರ ಅನಿವಾರ್ಯವಾಗಿತ್ತು. ಜಯನಗರದ ಕಂದಾಯ ವಿಭಾಗದ ಅಧಿಕಾರಿಗಳ ವರದಿ ಹಾಗೂ ಉನ್ನತ ಅಧಿಕಾರಿಗಳ ಅನುಮೋದನೆಯ ಮೇರೆಗೆ ಕಚೇರಿ ಸ್ಥಳಾಂತರಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
