ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಜೀವನ್ ಭೀಮಾ ನಗರ ವಾರ್ಡ್ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ, ಮೂವರು ಒತ್ತುವರಿದಾರರಿಗೆ ಒಟ್ಟು ₹25,000 ದಂಡ ವಿಧಿಸಿದೆ ಎಂದು ಆಯುಕ್ತ ಜಗದೀಶ್ ಜಿ. ತಿಳಿಸಿದ್ದಾರೆ.
ಪಾದಚಾರಿ ಮಾರ್ಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸಿದವರ ವಿರುದ್ಧ ಅಧಿಕಾರಿಗಳು ಸ್ಥಳದಲ್ಲೇ ಕ್ರಮ ಕೈಗೊಂಡಿದ್ದಾರೆ. ಒಬ್ಬರಿಗೆ ₹5,000 ಹಾಗೂ ಇಬ್ಬರಿಗೆ ತಲಾ ₹10,000 ದಂಡ ವಿಧಿಸಲಾಗಿದೆ.
ಪಾದಚಾರಿ ಮಾರ್ಗಗಳು ಸಾರ್ವಜನಿಕರ ಓಡಾಟಕ್ಕೆ ಮಾತ್ರ ಮೀಸಲು ಎಂದು ಒತ್ತುವರಿದಾರರಿಗೆ ತಿಳಿಸಲಾಗಿದೆ. ಸಾರ್ವಜನಿಕರು, ವಿಶೇಷವಾಗಿ ಹಿರಿಯ ನಾಗರಿಕರು, ಮಕ್ಕಳು ಹಾಗೂ ವಿಕಲಚೇತನರು ಸುರಕ್ಷಿತವಾಗಿ ಓಡಾಡುವಂತೆ ಪಾದಚಾರಿ ಮಾರ್ಗಗಳನ್ನು ಸ್ನೇಹಿಯಾಗಿರಿಸಲು ಸೂಚನೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಪಾಲಿಕೆಯ ಇತರ ಪ್ರದೇಶಗಳಲ್ಲೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗುವ ಅಕ್ರಮ ಒತ್ತುವರಿಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಹಾಗೂ ನಿಯಮಾನುಸಾರ ದಂಡ ಮತ್ತು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
